ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗ ಕ್ರಿಮಿನಲ್ ಮೊಕದ್ದಮೆ ಹೂಡಬೇಕು : ವಿಜಯೇಂದ್ರ
ಬಿ.ವೈ.ವಿಜಯೇಂದ್ರ
ಬೆಂಗಳೂರು : ಸಿದ್ದರಾಮಯ್ಯ ಮತಗಳನ್ನು ಖರೀದಿಸಿ 2018ರ ಚುನಾವಣೆ ಗೆದ್ದಿರುವುದಾಗಿ ಅವರ ಆಪ್ತರಾಗಿದ್ದ ಸಿ.ಎಂ.ಇಬ್ರಾಹೀಂ ನೀಡಿರುವ ಹೇಳಿಕೆಯನ್ನು ಪರಿಗಣಿಸಿ, ಚುನಾವಣಾ ಆಯೋಗವು ಸಿದ್ದರಾಮಯ್ಯ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ರವಿವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, 2018ರ ಚುನಾವಣೆಯಲ್ಲಿ ಕೆಲವೆ ಮತಗಳ ಅಂತರದಲ್ಲಿ ಜಯ ಸಾಧಿಸಿದ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ರಮ ಮಾರ್ಗದಲ್ಲಿ ಮತ ಖರೀದಿಸಿ ಜಯಶಾಲಿಯಾದರು ಎಂಬ ಅಸಲಿ ಸತ್ಯವನ್ನು ಆ ಕಾಲದ ಅವರ ಆಪ್ತ ಸಿ.ಎಂ.ಇಬ್ರಾಹೀಂ ಬಹಿರಂಗ ಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸ್ವತಃ ತಾವೇ ಮೂರು ಸಾವಿರ ಮತಗಳನ್ನು ಖರೀದಿಸಿ ಸಿದ್ದರಾಮಯ್ಯರನ್ನು ಗೆಲ್ಲಿಸಿರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ. ತುರ್ತು ಪರಿಸ್ಥಿತಿ ಹೇರಲು ಕಾರಣರಾದ ಅಕ್ರಮ ಮತದಾನದ ಗೆಲುವಿನ ರೂವಾರಿ ಇಂದಿರಾ ಗಾಂಧಿಯವರ ಮೊಮ್ಮಗ ರಾಹುಲ್ ಗಾಂಧಿ ಇಂದು ಸಾಂವಿಧಾನಿಕ ಸಂಸ್ಥೆ ಚುನಾವಣಾ ಆಯೋಗದ ಮೇಲೆ ಆರೋಪ ಹೊರಿಸಿ ಮತಗಳ್ಳತನವಾಗಿದೆ ಎಂದು ಬೊಬ್ಬೆ ಹಾಕುತ್ತಾ ಬಾಲಿಶತನ ಪ್ರದರ್ಶಿಸುತ್ತಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
ರಾಹುಲ್ ಗಾಂಧಿಗೆ ಸಿ.ಎಂ.ಇಬ್ರಾಹೀಂ ಸರಿಯಾದ ತಕ್ಕ ಉತ್ತರವನ್ನೆ ನೀಡಿದ್ದಾರೆ. ಮತಗಳ್ಳತನದ ಸಂಸ್ಕೃತಿ ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗ ಎನ್ನುವುದನ್ನು ಸಾರಿ ಹೇಳಿದ್ದಾರೆ. ಬಾದಾಮಿ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮತ ಖರೀದಿಸಿ ಅಕ್ರಮ ಮಾರ್ಗದಲ್ಲಿ ಗೆಲುವು ಸಾಧಿಸಿ, ಪ್ರಜಾಪ್ರಭುತ್ವವದ ನೆತ್ತಿಯ ಮೇಲೆ ಕುಳಿತ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಲ್ಲದೇ, ಇಬ್ರಾಹೀಂ ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಅಲ್ಲಿಯವರೆಗೂ ಸಿದ್ದರಾಮಯ್ಯನವರ ವಿಧಾನಸಭಾ ಸದಸ್ಯತ್ವವನ್ನು ಅಮಾನತ್ತಿನಲ್ಲಿಡಬೇಕಿದೆ ಈ ಸಂಬಂಧ ರಾಜ್ಯ ಬಿಜೆಪಿ ಕಾನೂನು ಹೋರಾಟ ಕೈಗೆತ್ತಿಕೊಳ್ಳಲಿದೆ. ರಾಹುಲ್ ಗಾಂಧಿ ಆರೋಪಿಸುತ್ತಿರುವುದು ನಿಜವೇ ಆದರೆ 2023ರಲ್ಲಿಯೂ ಮತಗಳ್ಳತನ, ಮತ ವ್ಯಾಪಾರ ಮಾಡಿಯೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿರಬೇಕು ಎಂದು ಅವರು ಆರೋಪಿಸಿದ್ದಾರೆ.
ಏಕೆಂದರೆ 2018ರ ಬಾದಾಮಿ ಚುನಾವಣೆಯಲ್ಲಿ ಮತ ಖರೀದಿಸಿದ ಕುತಂತ್ರವನ್ನೆ 2023 ರಲ್ಲಿಯೂ ಬಳಸಿರಬಹುದು? ಈ ಕಾರಣಕ್ಕಾಗಿಯೆ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಮತ್ತೆ ಆಯ್ಕೆ ಮಾಡಿರಬೇಕು? ಎಂಬುದು ಸಿ.ಎಂ.ಇಬ್ರಾಹೀಂ ಅವರ ಹೇಳಿಕೆಯನ್ನು ಗಮನಿಸಿದಾಗ ಸ್ಪಷ್ಟವಾಗುತ್ತಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ರಾಹುಲ್ ಆರೋಪಿಸಿರುವಂತೆ ಮತಗಳ್ಳತನವಾಗಿದ್ದರೆ, 2024ರ ಲೋಕಸಭಾ ಚುನಾವಣೆ ನಡೆದ ಸಂದರ್ಭದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದದು ಕಾಂಗ್ರೆಸ್ ಸರಕಾರವೇ ಅಲ್ಲವೆ? ಮತದಾರರ ಪಟ್ಟಿ ಮಾಡಿದ್ದು ನೀವೇ ಅಲ್ಲವೇ? ಕೋತಿ ತಾನು ತಿಂದು ಮೇಕೆ ಬಾಯಿಗೆ ಹೊರೆಸಿದಂತೆ…ರಾಹುಲ್ ಅಂಡ್ ಕಂಪೆನಿ ಕುಚೇಷ್ಟೆ ಮಾಡುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.