×
Ad

ಮದ್ದೂರಿನಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ : ವಿಜಯೇಂದ್ರ

Update: 2025-09-09 20:27 IST

ಬಿ.ವೈ.ವಿಜಯೇಂದ್ರ

ಬೆಂಗಳೂರು, ಸೆ. 9: ಮದ್ದೂರು ಗಲಭೆಗೆ ಸಂಬಂಧಿಸಿ ಸತ್ಯ ಸಂಶೋಧನಾ ತಂಡವನ್ನು ನಾವು ಈಗಾಗಲೇ ಪ್ರಕಟಿಸಿದ್ದೇವೆ. ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ನೇತೃತ್ವದಲ್ಲಿ ತಂಡ ರಚಿಸಿದ್ದೇವೆ. ಮದ್ದೂರಿನಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದ್ದಾರೆ.

ಮಂಗಳವಾರ ನಗರದಲ್ಲಿಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಘಟನೆ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಕೊಡಲು ತಿಳಿಸಿದ್ದೇವೆ. ರಾಜ್ಯದಲ್ಲಿ ಒಂದು ರೀತಿ ತುಘಲಕ್ ದರ್ಬಾರ್ ಇದೆ. ಇವರು ನಿಜಾಮರ ಆಡಳಿತವನ್ನು ನೆನಪು ಮಾಡಿ ಕೊಡುತ್ತಿದ್ದಾರೆ. ಮುಖ್ಯಮಂತ್ರಿ, ಗೃಹ ಸಚಿವರು ತಮ್ಮ ಧೋರಣೆ ಸರಿಪಡಿಸಿಕೊಳ್ಳದಿದ್ದರೆ ಖಂಡಿತವಾಗಿ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಡಲಿದೆ ಎಂದು ಎಚ್ಚರಿಸಿದರು.

ಗಣೇಶೋತ್ಸವ ಮೆರವಣಿಗೆಯಲ್ಲಿ ಕೇಸರಿ ಶಾಲು ಹಾಕಿ ನೃತ್ಯ ಮಾಡಿದ ಪಿಎಸ್ಸೈ ಅಮಾನತು ಮಾಡಿರುವ ಮಾಹಿತಿ ಬಂದಿದೆ. ನಾವೇನು ಪಾಕಿಸ್ತಾನದಲ್ಲಿದ್ದೇವಾ?. ರಾಜ್ಯದಲ್ಲಿ ಇವತ್ತು ಏನಾಗುತ್ತಿದೆ? ದಿನನಿತ್ಯ ಯಾವ ರೀತಿಯಲ್ಲಿ ಪರಿಸ್ಥಿತಿ ಹದಗೆಡುತ್ತಿದೆ? ಕಾನೂನು ಸುವ್ಯವಸ್ಥೆ ಮುರಿದುಬಿದ್ದಿದೆ, ಕಾಂಗ್ರೆಸ್ ಸರಕಾರಕ್ಕೆ ಯಾಕೆ ಇಂತಹ ದುರ್ಬುದ್ಧಿ ಎಂದು ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸುತ್ತ ಅಯೋಗ್ಯರನ್ನೇ ಇಟ್ಟುಕೊಂಡಂತೆ ಇದೆ. ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯ ಮೇಲೆ ಕಲ್ಲೆಸೆತ, ಹಲ್ಲೆ ನಡೆಯುತ್ತಿದೆ. ಗಣಪತಿ ಮಹೋತ್ಸವವನ್ನೂ ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವು ಎರಡೂವರೆ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ಟೀಕಿಸಿದರು.

ಬಿಜೆಪಿ ಹಿಂದುತ್ವದ ಪರವಾಗಿ ಇದೆ. ಇವರು ಯಾರು ನಮ್ಮನ್ನು ಪ್ರಶ್ನೆ ಮಾಡಲು. ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಿ ಜನರಿಗೆ ಸೂಕ್ತ ರಕ್ಷಣೆ ಮಾಡುವುದು ಇವರ ಕರ್ತವ್ಯವಲ್ಲವೇ?. ಕರ್ನಾಟಕ ರಾಜ್ಯದಲ್ಲಿ ನಮ್ಮ ಸರಕಾರ ಹಿಂದೂಗಳ ಪರವಾಗಿ ಇಲ್ಲವೆಂದು ಘೋಷಿಸಲಿ ಎಂದು ವಿಜಯೇಂದ್ರ ಸವಾಲು ಹಾಕಿದರು.

ಇಂದು ಮದ್ದೂರಿಗೆ ಭೇಟಿ: ನಾಳೆ(ಸೆ.10) ಬೆಳಗ್ಗೆ 10.30ಕ್ಕೆ ನಾನು, ನಮ್ಮ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸೇರಿದಂತೆ ಪಕ್ಷದ ಇತರ ಮುಖಂಡರು ಮದ್ದೂರಿಗೆ ಖುದ್ದು ಭೇಟಿ ಕೊಡಲಿದ್ದೇವೆ ಎಂದು ವಿಜಯೇಂದ್ರ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News