×
Ad

ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ಜಾತಿಗಣತಿ : ವಿಜಯೇಂದ್ರ ಟೀಕೆ

Update: 2025-10-10 15:48 IST

 ಬಿ.ವೈ.ವಿಜಯೇಂದ್ರ

ಬೆಂಗಳೂರು : ರಾಜ್ಯ ಸರಕಾರವು ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ಜಾತಿಗಣತಿ ವಿಷಯದಲ್ಲಿ ತೀರ್ಮಾನ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಾತಿಗಣತಿ ವಿಚಾರದಲ್ಲಿ ಗಣತಿದಾರ ಶಿಕ್ಷಕವೃಂದಕ್ಕೂ ಸಮಸ್ಯೆ ಆಗುತ್ತಿದೆ. ರಜೆ ದಿನಗಳನ್ನೂ ವಿಸ್ತರಿಸಿದ್ದರಿಂದ ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಸಮಸ್ಯೆ ಆಗಲಿದೆ. ಸರಕಾರಿ ಶಾಲೆಯಲ್ಲಿ ಓದುವ ಗ್ರಾಮೀಣ ಭಾಗದ ಮಕ್ಕಳಿಗೆ ಒಂದೊಂದು ದಿನವೂ ಅಷ್ಟೇ ಮಹತ್ವದ್ದು ಎಂದು ನುಡಿದರು. ಶಾಲೆಗೆ ರಜೆ ಘೋಷಿಸಿ ಶಾಲಾ ಮಕ್ಕಳಿಗೂ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆ ಕರೆದಿದ್ದು, ಶಾಸಕರಿಗೆ ಸಭೆಯ ಕಾರ್ಯಸೂಚಿಯನ್ನೇ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಜಿಬಿಎ ಅಜೆಂಡವನ್ನೂ ಕೊಡದೆ ಗೌಪ್ಯವಾಗಿ ಸಭೆ ಮಾಡುತ್ತಿದ್ದಾರೆ. ಡಿಸೆಂಬರ್‍ನಲ್ಲಿ ಚುನಾವಣೆ ನಡೆಸುವುದಾಗಿ ಹೇಳುತ್ತಾರೆ. ಎಲ್ಲಿದೆ ತಯಾರಿ?. ಎಷ್ಟು ಅಧಿಕಾರಿಗಳು ಬೇಕು? ಮೂಲಭೂತ ಸೌಕರ್ಯಗಳು, ಯಾವುದೂ ಇಲ್ಲದೇ ರಾಜಕೀಯ ಚಟಕ್ಕೆ ಘೋಷಣೆ ಮಾಡುತ್ತಾರೆ. ಯಾವುದೇ ಯೋಜನೆ ಇಲ್ಲದೇ ಹೊರಟಿದ್ದಾರೆ ಎಂದರು.

ಗುಂಡಿಗಳ ಮಧ್ಯೆ ರಸ್ತೆ ಹುಡುಕುವ ದಾರುಣ ಪರಿಸ್ಥಿತಿ :

ಬೆಂಗಳೂರಿನ ಜನತೆ ಈ ಸರಕಾರಕ್ಕೆ ಛೀ ಥೂ ಎಂದು ಉಗುಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಪ್ರಧಾನಮಂತ್ರಿಯವರ ಮನೆ ಮುಂದೆ ಗುಂಡಿ ಇದೆ. ಅಲ್ಲಿ ಗುಂಡಿ ಇದೆ ಎಂದು ಲೆಕ್ಕ ಹಾಕಲು ಹೊರಟಿದ್ದಾರೆ. ಬೆಂಗಳೂರಿನಲ್ಲಿ ಗುಂಡಿಗಳ ಮಧ್ಯೆ ರಸ್ತೆ ಹುಡುಕುವ ದಾರುಣ ಪರಿಸ್ಥಿತಿ ಬಂದಿದೆ ಎಂದು ಗಮನ ಸೆಳೆದರು.

ರೈತರು ಪರಿಹಾರಕ್ಕೆ ಇನ್ನೆಷ್ಟು ದಿನ ಕಾಯಬೇಕು :

ನಾನು, ವಿಪಕ್ಷ ನಾಯಕರು, ಬಿಜೆಪಿ ನಿಯೋಗ ಕಲ್ಯಾಣ ಕರ್ನಾಟಕಕ್ಕೆ ಹೋಗಲಿಲ್ಲವೆಂದಾದರೆ, ಮುಖ್ಯಮಂತ್ರಿಗಳು ಇಲ್ಲೇ ಎ.ಸಿ. ಕೊಠಡಿಯಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್‌ ನಲ್ಲಿ ತೀರ್ಮಾನ ಮಾಡುತ್ತಿದ್ದರು. ನಾವು ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ ಪ್ರವಾಸ ಮಾಡಿದ್ದೇವೆ. ಅಶೋಕ್ ಅವರು, ಬೆಳಗಾವಿ, ಬಾಗಲಕೋಟೆ ಕಡೆ ಹೋದರು ಎಂದರು.

ವಿಪಕ್ಷದವರು ಎಲ್ಲವನ್ನೂ ಟೀಕಿಸುತ್ತಾರೆ ಎಂದು ಭಾವಿಸುವ ಅಗತ್ಯವಿಲ್ಲ, ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವುದು ರಾಜ್ಯ ಸರಕಾರದ ಆದ್ಯ ಕರ್ತವ್ಯ. 10 ದಿನಗಳಲ್ಲಿ ಪರಿಹಾರ ಮೊತ್ತ ಕೊಡುವುದಾಗಿ ಸಚಿವ ಕೃಷ್ಣಬೈರೇಗೌಡರು ಹೇಳಿದ್ದಾರೆ. ರೈತರು ಇನ್ನೆಷ್ಟು ದಿನ ಕಾಯಬೇಕು ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News