ಕಬ್ಬು ಬೆಳೆಗಾರರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವುದಿಲ್ಲ : ವಿಜಯೇಂದ್ರ
ವಿಜಯೇಂದ್ರ
ಬೆಂಗಳೂರು : ‘ಕಬ್ಬು ಬೆಳೆಗಾರರ ವಿಚಾರದಲ್ಲಿ ಬಿಜೆಪಿ ಯಾವುದೇ ಸಂದರ್ಭದಲ್ಲಿಯೂ ರಾಜಕೀಯ ಮಾಡುವುದಿಲ್ಲ. ಆರು ದಿನ ಕಳೆದರೂ ಒಂದು ಜವಾಬ್ದಾರಿಯುತ ಸರಕಾರವು ಒಬ್ಬ ಸಚಿವರನ್ನೂ ಕಳುಹಿಸಲಿಲ್ಲ. ಹೀಗಾಗಿ ಬೆಳಗಾರರ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾವು ರಾಜಕೀಯ ಮಾಡುವುದಾಗಿದ್ದರೆ ಮೊದಲ ದಿನವೇ ಹೋರಾಟಕ್ಕೆ ಹೋಗುತ್ತಿದ್ದೇವೆ. ಆದರೆ, ರೈತರ ಹೋರಾಟಕ್ಕೆ ಬೆಂಬಲವನ್ನಷ್ಟೇ ನೀಡಿದ್ದೇವೆ. ಕಾಂಗ್ರೆಸ್‍ನ ಶಾಸಕರೊಬ್ಬರು ಕಬ್ಬು ಬೆಳೆಗಾರರನ್ನು ರೈತರ ಅಲ್ಲವೆಂದು ಹೇಳಿದ್ದು, ನಿಜಕ್ಕೂ ನಾಚಿಕೆಗೇಡಿನ ಸಂಗತಿ’ ಎಂದು ಟೀಕಿಸಿದರು.
‘ಯುದ್ಧ ಬಂದಾಗ ಶಸ್ತ್ರಾಭ್ಯಾಸ ಮಾಡುವ ಬದಲಾಗಿ ಸಿಎಂ, ಕಬ್ಬು ಅರೆಯುವ ತಿಂಗಳ ಮೊದಲೇ ಈ ಸಂಧಾನ ಸಭೆ ಕರೆಯಬೇಕಿತ್ತು. ವಿಳಂಬವಾಗಿದೆ, ಆದರೂ ಪರವಾಗಿಲ್ಲ, ಇನ್ನೂ ರೈತರ ತಾಳ್ಮೆ ಪರೀಕ್ಷಿಸದಿರಿ. ಪ್ರಧಾನಿ ಮೋದಿಯವರಿಗೆ ಪತ್ರ ಬರೆಯವುದಾಗಿ ಕೈಕಟ್ಟಿ ಸುಮ್ಮನೆ ಕುಳಿತುಕೊಳ್ಳದಿರಿ’ ಎಂದು ಅವರು ಎಚ್ಚರಿಸಿದರು.
ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ಬರಬಾರದಿತ್ತು. ಕಬ್ಬು ಬೆಳೆಗಾರರ ವಿಚಾರದಲ್ಲಿ ಸಿಎಂ ಆಲಸ್ಯ ಮಾಡಿದ್ದು, ಅಸಡ್ಡೆ ತೋರಿದ್ದಾರೆ. ಈಗ ಹೋರಾಟ ತೀವ್ರಗೊಂಡಿದೆ. ಬೀದಿಗಿಳಿದು ಪ್ರತಿಭಟನೆ ನಡೆಯುತ್ತಿದೆ. ಈಗ ನೀವು ಪ್ರಧಾನಿಯವರಿಗೆ ಪತ್ರ ಬರೆದು ಕೇಂದ್ರ ಸರಕಾರದ ಮೇಲೆ ದೂರುವ ಪ್ರಯತ್ನ ಮಾಡುತ್ತೀರಾ? ಎಂದು ವಿಜಯೇಂದ್ರ ಪ್ರಶ್ನಿಸಿದರು.
ಎಫ್‍ಆರ್‌ಪಿಯನ್ನು ಪ್ರಧಾನಿಯವರೊಬ್ಬರೇ ತೀರ್ಮಾನ ಮಾಡುವುದಿಲ್ಲ. ಎಲ್ಲ ರಾಜ್ಯಗಳ ಅಧಿಕಾರಿಗಳು, ತಜ್ಞರ ಅಭಿಪ್ರಾಯ ಪಡೆದು ಇದನ್ನು ತೀರ್ಮಾನ ಮಾಡುತ್ತಾರೆ. ಕೇಂದ್ರ ಎಷ್ಟೇ ಎಫ್‍ಆರ್‍ಪಿ ನಿಗದಿ ಮಾಡಿದರೂ ರಾಜ್ಯ ಸಲಹಾ ಬೆಲೆ (ಎಸ್‍ಎಪಿ) ಹೆಚ್ಚು ದರ ಕೊಡಲು ಅವಕಾಶವಿದೆ. ಸಿಎಂ ಮಾನವೀಯತೆ ದೃಷ್ಟಿಯಿಂದ ಯೋಚಿಸಬೇಕು ಎಂದು ಅವರು ಒತ್ತಾಯಿಸಿದರು.