ಮೋದಿ ಅವರ ಮಿತವ್ಯಯ ಸೂತ್ರ ನಾವೂ ಪಾಲಿಸುತ್ತೇವೆ: ಆರ್. ಅಶೋಕ್
ಆರ್.ಅಶೋಕ್
ಬೆಂಗಳೂರು: ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಿತವ್ಯಯ ಸೂತ್ರ ಪಾಲನೆಗೆ ಕರೆ ನೀಡಿದ್ದು, ನಾವೂ ಮೋದಿಯವರ ಕರೆಗೆ ಬೆಂಬಲಿಸಿದ್ದೇವೆ. ಶೇ.30ರಿಂದ ಶೇ.40ರಷ್ಟು ವಾಹನಗಳ ಬಳಕೆ ಕಡಿಮೆ ಮಾಡಲಿದ್ದು, ದಿನ ಬಿಟ್ಟು ದಿನ ಬೆಂಗಾವಲು ವಾಹನಗಳ ಬಳಕೆಗೆ ತೀರ್ಮಾನ ಮಾಡಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಕಟಿಸಿದ್ದಾರೆ.
ಬುಧವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ತೆರಳಿದ ಸಂದರ್ಭದಲ್ಲಿ ಎಲ್ಲ ವಾಹನಗಳನ್ನು ಬಳಕೆ ಮಾಡುವುದಿಲ್ಲ. ನಮ್ಮ ಮನೆಯ ಸದಸ್ಯರು ಬೆಂಬಲಿಸಿದ್ದಾರೆ. ಅಡುಗೆ ಎಣ್ಣೆ ಬಳಕೆಯಲ್ಲೂ ಕಡಿತ ಮಾಡಿದ್ದಾರೆ ಎಂದು ನುಡಿದರು
‘ಬಸ್ ದಿನ’ಕ್ಕೆ ಕೋರಿ ಪತ್ರ: ಬಿಜೆಪಿ ಸರಕಾರದ ಅವಧಿಯಲ್ಲಿ ಸರಕಾರಿ ಅಧಿಕಾರಿ, ನೌಕರರು ವಾರಕ್ಕೆ ಒಂದು ದಿನ ಸಾರ್ವತ್ರಿಕ ಬಸ್‍ನಲ್ಲಿ ಪ್ರಯಾಣ ಮಾಡಲು ಸೂಚನೆ ನೀಡಲಾಗಿತ್ತು. ಇದೀಗ ಅದೇ ಮಾದರಿಯಲ್ಲೇ ‘ಬಸ್ ದಿನ’ಕ್ಕೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಿದ್ದೇನೆ ಎಂದು ಆರ್.ಅಶೋಕ್ ತಿಳಿಸಿದರು.
ಸಧ್ಯಕ್ಕೆ ಯುದ್ಧದ ಪರಿಸ್ಥಿತಿ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಯುದ್ಧದ ಸಂದರ್ಭದಲ್ಲಿ ಕಾಂಗ್ರೆಸ್ ಚಿಲ್ಲರೆ ಬುದ್ಧಿ ಬಿಡಬೇಕು. ನಾವು ಮಿತವ್ಯಯ ಸೂತ್ರವನ್ನು ಕೇವಲ ಸಾಂಕೇತಿಕವಾಗಿ ಮಾಡುತ್ತಿಲ್ಲ, ಬದಲಿಗೆ ಸಮಸ್ಯೆ ಪರಿಹಾರ ಆಗುವವರೆಗೆ ಈ ಸೂತ್ರವನ್ನು ಪಾಲನೆ ಮಾಡುತ್ತೇವೆ ಎಂದು ಅಶೋಕ್ ಹೇಳಿದರು.