ಮುಡಾ ಪ್ರಕರಣ| ರಾಜಕೀಯ ಹೋರಾಟಗಳಿಗೆ ಈಡಿಯನ್ನು ಏಕೆ ಬಳಸಲಾಗುತ್ತಿದೆ?: ಸುಪ್ರೀಂ ಕೋರ್ಟ್ ಪ್ರಶ್ನೆ
Photo credit: PTI
ಹೊಸದಿಲ್ಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ವಿರುದ್ಧ ಜಾರಿ ನಿರ್ದೇಶನಾಲಯ (ED) ನೀಡಿದ್ದ ಸಮನ್ಸ್ ರದ್ದುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಈಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಈ ವೇಳೆ ದೇಶದ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಗಂಭೀರವಾಗಿ ಪ್ರತಿಕ್ರಿಯಿಸಿ, "ನ್ಯಾಯಾಲಯದ ಹೊರಗೆ ಮತದಾರರ ಮಧ್ಯೆ ರಾಜಕೀಯ ಹೋರಾಟಗಳು ನಡೆಯಲಿ, ಅದಕ್ಕಾಗಿ ಈಡಿಯನ್ನು ಏಕೆ ಉಪಯೋಗಿಸುತ್ತಿದ್ದಾರೆ?" ಎಂದು ಪ್ರಶ್ನಿಸಿತು.
"ಮಹಾರಾಷ್ಟ್ರದಲ್ಲಿ ನನಗೆ ಈ ರೀತಿಯ ಪ್ರಕರಣಗಳ ಅರಿವಿದೆ. ದಯವಿಟ್ಟು ಒತ್ತಾಯಿಸಬೇಡಿ, ಇಲ್ಲದಿದ್ದರೆ ಈಡಿ ಬಗ್ಗೆ ನಾವು ತುಂಬಾ ಕಠಿಣವಾಗಿ ಹೇಳಬೇಕಾಗಬಹುದು," ಎಂದು ನ್ಯಾಯಮೂರ್ತಿ ಗವಾಯಿ ಎಚ್ಚರಿಕೆ ನೀಡಿದರು.
ಈಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಎಸ್.ವಿ. ರಾಜು ಅವರು "ನಾವು ಮೇಲ್ಮನವಿಯಿಂದ ಹಿಂದೆ ಸರಿಯುತ್ತೇವೆ. ಆದರೆ ಇದನ್ನು ಪೂರ್ವನಿದರ್ಶನವೆಂದು ಪರಿಗಣಿಸಬಾರದು" ಎಂದು ಸ್ಪಷ್ಟಪಡಿಸಿದರು.
ಅಂತರಿಕ ವಿಚಾರಣೆಯ ಬಳಿಕ, ನ್ಯಾಯಾಲಯವು ಮೇಲ್ಮನವಿಯನ್ನು ತಿರಸ್ಕರಿಸಿ, ಹೈಕೋರ್ಟ್ ನೀಡಿದ್ದ ತೀರ್ಪು ಸರಿಯಾಗಿತ್ತು ಎಂದು ಹೇಳಿತು. "ಹೈಕೋರ್ಟ್ ಏಕ ನ್ಯಾಯಾಧೀಶರು ತಾರ್ಕಿಕವಾಗಿ ಸಮನ್ಸ್ ರದ್ದುಗೊಳಿಸಿದ್ದು, ಅದರ ವಿಧಾನದಲ್ಲಿ ಯಾವುದೇ ದೋಷವಿಲ್ಲ," ಎಂದು ಹೇಳಿತು.
ಈ ಕುರಿತು 2024 ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಪಾರ್ವತಿ ಅವರ ವಿರುದ್ಧ ಈಡಿ ನೀಡಿದ್ದ ಸಮನ್ಸ್ ಅನ್ನು ರದ್ದುಗೊಳಿಸಿದ್ದರು. ಈ ಕುರಿತು ಈಡಿ ನೀಡಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.