×
Ad

‘ಅವಳ ಹೆಜ್ಜೆ’ ಮಹಿಳಾ ಕನ್ನಡ ಕಿರುಚಿತ್ರೋತ್ಸವದ ಮೊದಲ ಆವೃತ್ತಿ; 1 ಲಕ್ಷ ನಗದು ಬಹುಮಾನ ಗೆದ್ದ ಕವಿತಾ ಬಿ.ನಾಯಕ್ ಅವರ ‘ಅನ್ ಹರ್ಡ್ ಎಕೋಸ್’

Update: 2025-06-16 23:54 IST

ಬೆಂಗಳೂರು: ಬೆಂಗಳೂರಿನಲ್ಲಿ ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿದ್ದ ಅವಳ ಹೆಜ್ಜೆ ಮಹಿಳಾ ಕನ್ನಡ ಕಿರುಚಿತ್ರೋತ್ಸವದಲ್ಲಿ ನಿರ್ದೇಶಕಿ ಕವಿತಾ ಬಿ.ನಾಯಕ್ ಅವರ ‘ಅನ್ ಹರ್ಡ್ ಎಕೋಸ್’ ಎಂಬ ಕನ್ನಡ ಕಿರುಚಿತ್ರವು ಪ್ರತಿಷ್ಠಿತ ‘ಅವಳ ಹೆಜ್ಜೆ’ ಪ್ರಶಸ್ತಿ, ಒಂದು ಲಕ್ಷ ರೂ.ನಗದು ಬಹುಮಾನ ಗೆದ್ದಿದೆ.

ಈ ಉತ್ಸವದಲ್ಲಿ ಎಂಟು ಆಕರ್ಷಕ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ಎಂಟು ನಿರ್ದೇಶಕಿಯರೊಂದಿಗೆ ಸಂವಾದವನ್ನು ನಡೆಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕವಿತಾ ಬಿ.ನಾಯಕ್ ರಂಗಭೂಮಿ ಕಲಾವಿದೆ ಮತ್ತು ನಿರ್ದೇಶಕಿ. ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ನಿರ್ದೇಶನ ಮತ್ತು ಚಿತ್ರಕಥೆಗಳಲ್ಲಿ ಡಿ ಮಾ ಪಡೆದು ‘ಹದಿನೇಳೆಂಟು’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಸಿನಿಮಾ ಮಾಧ್ಯಮದ ಮೂಲಕ ಮಹಿಳೆಯರ ಸಮಸ್ಯೆಗಳನ್ನು ಪ್ರೇಕ್ಷಕರಿಗೆ ತಲುಪಿಸಬೇಕೆಂಬ ಅವರ ಬದ್ಧತೆ, ‘ಅನ್‍ಹರ್ಡ್ ಎಕೋಸ್’ ನ ಮೂಲಕ ಮುಂದುವರೆಸಿದ್ದಾರೆ. ಈ ಚಿತ್ರವು ಪ್ರೇಕ್ಷಕರ ಆಯ್ಕೆ ಬಹುಮಾನವನ್ನು ಸಹ ಪಡೆದುಕೊಂಡಿದೆ. ಕ್ಷಮಾ ಅಂಬೆಕಲ್ಲು ಅವರ ಕಿರುಚಿತ್ರ ‘ಪುಷ್ಪ’, ವಿದ್ಯಾರ್ಥಿನಿ ನಿರ್ದೇಶಕಿ ಎಂಬ ವಿಶೇಷ ವರ್ಗದಲ್ಲಿ ನಗದು ಬಹುಮಾನ ಪಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ಕ್ಷಮಾ, ಮೈಸೂರಿನ ಅಮೃತ ವಿಶ್ವ ವಿದ್ಯಾಪೀಠದಲ್ಲಿ ದೃಶ್ಯ ಸಂವಹನದಲ್ಲಿ ಬಿ.ಎಸ್ಸಿ. ಪದವಿ ಪಡೆಯುತ್ತಿದ್ದಾರೆ.

ನಗದು ಬಹುಮಾನ: ಮಂದಾರ ಬಟ್ಟಲಹಳ್ಳಿ ನಿರ್ದೇಶನದ ‘ದಿ ಲಾಸ್ಟ್ ಹ್ಯಾಪಿ ಕಸ್ಟಮರ್’ (2024), ಸಿಂಚನಾ ಶೈಲೇಶ್ ನಿರ್ದೇಶನದ ‘ಕೇಕ್‍ವಾಕ್’ (2025) ಮತ್ತು ಸತ್ಯ ಪ್ರಮೋದ ಎಂ.ಎಸ್ ನಿರ್ದೇಶನದ ‘ಆನ್‍ಲೈನ್’ (2025) ಕಿರುಚಿತ್ರಗಳು ಚೊಚ್ಚಲ ನಿರ್ದೇಶನದ ನಗದು ಬಹುಮಾನಗಳನ್ನು ಪಡೆದುಕೊಂಡವು. ಹಾವೇರಿ ಜಿಲ್ಲೆಯ ರೈತ ಮಹಿಳೆ ರೇಣುಕಾ ಯಲ್ಲಪ್ಪ ಮಲ್ಲಿಗಾರ್ ನಿರ್ಮಿಸಿದ ‘ನೀರೆಲ್ಲವೂ ತೀರ್ಥ’ (2025) ಎಂಬ ಕಿರುಚಿತ್ರವನ್ನು ಸ್ಪರ್ಧಾತ್ಮಕವಲ್ಲದ ವಿಭಾಗದಲ್ಲಿ ಪ್ರದರ್ಶಿಸಲಾಯಿತು.

ಚಿತ್ರೋತ್ಸವದ ಪ್ರಮುಖ ಆಕರ್ಷಣೆ, ಪತ್ರಕರ್ತೆ ಸುನಯನ ಸುರೇಶ್ ನಿರ್ವಹಿಸಿದ ಚರ್ಚಾಗೋಷ್ಠಿ ‘ಕನ್ನಡ ಸಿನಿಮಾದಲ್ಲಿ ಮಹಿಳಾ ಧ್ವನಿ’ಯಲ್ಲಿ ಚಲನಚಿತ್ರ ನಿರ್ದೇಶಕಿ ರೂಪಾ ರಾವ್ (ಗಂಟು ಮೂಟೆ), ಟೆಂಟ್ ಸಿನೆಮಾ ಶಾಲೆಯ ಸ್ಥಾಪಕ ನಿರ್ದೇಶಕಿ ಶೋಭಾ ಸಿ.ಎಸ್. ಮತ್ತು ಮುಖ್ಯ ಅತಿಥಿ ಡಿ.ಸುಮನ್ ಕಿತ್ತೂರು ಭಾಗವಹಿಸಿದ್ದರು.

ತಮ್ಮ ಜಾತಕಗಳು ಹೊಂದಿಕೆಯಾಗಲಿಲ್ಲ ಎಂಬ ಕಾರಣಕ್ಕೆ ತನ್ನ ಚಿತ್ರಕ್ಕೆ ಹಣಕಾಸು ಒದಗಿಸಲು ನಿರಾಕರಿಸಿದ ನಿರ್ಮಾಪಕರ ಬಗ್ಗೆ ಸುಮನ್ ಕಿತ್ತೂರು ಒಂದು ಸ್ವಾರಸ್ಯಕರ ಅನುಭವವನ್ನು ಹಂಚಿಕೊಂಡರು.

ರೂಪಾ ರಾವ್ ಅವರು ಚಲನಚಿತ್ರೋದ್ಯಮದಲ್ಲಿ ಎದುರಿಸಿದ ಲಿಂಗ ತಾರತಮ್ಯದ ಬಗ್ಗೆ ಮುಕ್ತವಾಗಿ ಮಾತನಾಡಿ, ‘ನಿರ್ಮಾಪಕರು ಮತ್ತು ವಿತರಕರು ನನ್ನನ್ನು ನೇರವಾಗಿ ಉದ್ದೇಶಿಸಿ ಮಾತನಾಡುವ ಬದಲು ನನ್ನ ಪುರುಷ ಸಹಾಯಕರೊಂದಿಗೆ ಮಾತನಾಡುತ್ತಿದ್ದರು. ಹಲವು ನಿರಾಕರಣೆಗಳು ಮತ್ತು ಆರ್ಥಿಕ ಸಂಕಷ್ಟಗಳ ನಡುವೆಯೂ ‘ಹುಚ್ಚು ಮತ್ತು ಉತ್ಸಾಹ’ ಇದ್ದರೆ ಮಾತ್ರ ಚಲನಚಿತ್ರ ನಿರ್ದೇಶಕರು ಮುಂದುವರೆಯಲು ಸಾಧ್ಯ’ ಎಂದರು.

‘ಇದು ಕೇವಲ ಕಿರುಚಿತ್ರ ಪ್ರದರ್ಶನವಲ್ಲ-ಮಹಿಳೆಯರ ಅನುಭವ, ದೃಷ್ಟಿಕೋನಗಳಿಗೆ ವೇದಿಕೆ ನೀಡುವ, ಲಿಂಗ ಸಮಾನತೆಯ ಚಿಂತನೆಗೆ ಉತ್ತೇಜನ ನೀಡುವ ಒಂದು ಚಳವಳಿ’ ಎಂದು ಗುಬ್ಬಿವಾಣಿ ಸ್ಥಾಪಕ ಟ್ರಸ್ಟಿ ಮಾಳವಿಕಾ ತಿಳಿಸಿದರು.

‘ಈ ಉತ್ಸವದ ಮೊದಲ ಆವೃತ್ತಿಯ ಯಶಸ್ಸಿನಿಂದ ನಮಗೆ ತುಂಬಾ ಪ್ರೋತ್ಸಾಹ ಸಿಕ್ಕಿದೆ. ಮುಂದಿನ ವರ್ಷದಲ್ಲಿ ಕರ್ನಾಟಕದಾದ್ಯಂತ ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದಕ್ಕಾಗಿ ಎದುರು ನೋಡುತ್ತೇವೆ’

-ಶಾಂತಲಾ ದಾಮ್ಲೆ, ಚಿತ್ರೋತ್ಸವ ನಿರ್ದೇಶಕಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News