×
Ad

ಸಾಮಾಜಿಕ ಮಾಧ್ಯಮ ನಿಯಂತ್ರಣ: ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು X ನಿರ್ಧಾರ

Update: 2025-09-29 12:57 IST

ಬೆಂಗಳೂರು: ಸಾಮಾಜಿಕ ಮಾಧ್ಯಮ ನಿಯಂತ್ರಣ ಕುರಿತು ತನ್ನ ಸೂಚನೆಗಳನ್ನು ಪಾಲಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣ ಎಕ್ಸ್ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದೆ.

ಈ ಬೆಳವಣಿಗೆಯನ್ನು "ತೀವ್ರ ಕಳವಳಕಾರಿ" ಎಂದು ಹೇಳಿರುವ ಎಕ್ಸ್, ಇದರಿಂದಾಗಿ ಪೊಲೀಸ್ ಅಧಿಕಾರಿಗಳಿಗೆ ಅನಿಯಂತ್ರಿತವಾಗಿ ಸೂಚನೆ ನೀಡುವ ಅಧಿಕಾರ ದೊರಕಬಹುದು ಎಂಬ ಆತಂಕ ವ್ಯಕ್ತಪಡಿಸಿದೆ.

ಈ ಮೊದಲು, ಹೈಕೋರ್ಟ್ ಸಾಮಾಜಿಕ ಎಕ್ಸ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿತ್ತು. "ಸಾಮಾಜಿಕ ಮಾಧ್ಯಮದ ನಿಯಂತ್ರಣವು ಇಂದಿನ ಅಗತ್ಯ. ಮೇಲ್ವಿಚಾರಣೆಯಿಲ್ಲದೆ ಭಾರತದಲ್ಲಿ ಪ್ಲಾಟ್‌ಫಾರ್ಮ್‌ಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ," ಎಂದು ಪೀಠ ತನ್ನ ತೀರ್ಪಿನಲ್ಲಿ ಹೇಳಿತ್ತು.

ಅದೇ ವೇಳೆ, "ಭಾರತೀಯ ಸಂವಿಧಾನದ ಆರ್ಟಿಕಲ್ 19 ನಾಗರಿಕರಿಗೆ ಮಾತ್ರ ಹಕ್ಕುಗಳನ್ನು ನೀಡುತ್ತದೆ. ನಾಗರಿಕರಲ್ಲದವರು ಅದರ ಆವರಣವನ್ನು ತಮ್ಮ ಪರವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ," ಎಂದು ನ್ಯಾಯಾಲಯ ತಿಳಿಸಿತು. ಅಮೆರಿಕಾದ ಕಾನೂನು ತತ್ವಗಳನ್ನು ಭಾರತೀಯ ನ್ಯಾಯಾಂಗ ಚಿಂತನೆಗೆ ಅನ್ವಯಿಸಲು ಸಾಧ್ಯವಿಲ್ಲವೆಂದು ಹೇಳಿದ ಪೀಠವು, ಭಾರತದ ತೆಗೆದುಹಾಕುವಿಕೆ ಆದೇಶಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಕಂಪೆನಿಯನ್ನು ಟೀಕಿಸಿತ್ತು.

ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ವ್ಯವಸ್ಥೆಯನ್ನು ಉಲ್ಲೇಖಿಸಿದ ನ್ಯಾಯಾಲಯವು, "ತಂತ್ರಜ್ಞಾನ ಬದಲಾಗುತ್ತಿರುವಂತೆ ನಿಯಂತ್ರಣವೂ ವಿಕಸಿಸಬೇಕು. 2021ರ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಮ್ಮದೇ ವ್ಯಾಖ್ಯಾನಾತ್ಮಕ ಚೌಕಟ್ಟಿನ ಅಗತ್ಯವಿದೆ" ಎಂದು ಅಭಿಪ್ರಾಯಪಟ್ಟಿತು.

"ಯಾವುದೇ ಸಾಮಾಜಿಕ ಮಾಧ್ಯಮ ಕಂಪೆನಿಗೆ ಇಲ್ಲಿನ ಕಾನೂನುಗಳಿಂದ ವಿನಾಯಿತಿ ಇಲ್ಲ. ಭಾರತೀಯ ಮಾರುಕಟ್ಟೆಯನ್ನು ಆಟದ ಮೈದಾನವೆಂದು ಪರಿಗಣಿಸಲಾಗುವುದಿಲ್ಲ," ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News