×
Ad

ಸರ್ಫಿಂಗ್ ಸಾಧಕಿ ಪುತ್ತೂರಿನ ಸಿಂಚನಾ

Update: 2023-12-21 11:27 IST

ಪುತ್ತೂರು : ಸಾಹಸಮಯ ಸರ್ಫಿಂಗ್ ಜಲಕ್ರೀಡೆಯಲ್ಲಿ ಸಣ್ಣ ಪ್ರಾಯದಿಂದಲೇ ತೊಡಗಿಸಿಕೊಂಡು ಇದೀಗ ಹಲವು ಸಾಧನೆಗಳನ್ನು ಮಾಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ ಪುತ್ತೂರಿನ ಪ್ರತಿಭೆ ಸಿಂಚನಾ ಡಿ. ಗೌಡ. ಪುತ್ತೂರಿನ ಬಾಲವನದ ಈಜುಕೊಳದಲ್ಲಿ ಸಿಂಚನಾ ತನ್ನ 3ನೇ ವರ್ಷದಿಂದಲೇ ಪಡೆಯಲಾರಂಭಿಸಿದ ಈಜು ತರಬೇತಿ ಮುಂದುವರಿದು ಸರ್ಫಿಂಗ್‌ನಲ್ಲಿ ಹಲವು ಸಾಧನೆ ಮಾಡಲು ಆಕೆಗೆ ಪ್ರೇರಣೆಯಾಗಿದೆ.

ಕಲ್ಲೇಗ ನಿವಾಸಿ ಮೀನಾಕ್ಷಿ ಡಿ.ಗೌಡ ಮತ್ತು ದೇರಪ್ಪ ಗೌಡ ದಂಪತಿಯ ಪುತ್ರಿ ಸಿಂಚನಾ ತನ್ನ ೩ನೇ ವಯಸ್ಸಿನಿಂದಲೇ ಪುತ್ತೂರಿನ ಡಾ.ಶಿವರಾಮ ಕಾರಂತರ ಬಾಲನವದಲ್ಲಿರುವ ಈಜುಕೊಳದಲ್ಲಿ ಈಜು ತರಬೇತಿಯನ್ನು ತನ್ನ ಮಾವ ರಾಷ್ಟ್ರೀಯ ಈಜು ತರಬೇತುದಾರರ ವಸಂತ ಕುಮಾರ್ ಅವರಲ್ಲಿ ಪಡೆಯಲಾರಂಭಿಸಿದ್ದರು. ಬಳಿಕ ಹಲವಾರು ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸುಮಾರು 250ಕ್ಕೂ ಅಧಿಕ ಪದಕಗಳನ್ನು ಪಡೆದುಕೊಂಡಿದ್ದರು.

ತನ್ನ 12ನೇ ವಯಸ್ಸಿನಲ್ಲಿ ಸಾಹಸ ಜಲ ಕ್ರೀಡೆಯಾದ ಸರ್ಫಿಂಗ್‌ನ್ನು ಆಯ್ಕೆ ಮಾಡಿಕೊಂಡ ಸಿಂಚನಾ ಸಮುದ್ರ ತೀರವಾದ ಪಣಂಬೂರು, ತಣ್ಣೀರುಬಾವಿ, ಮುಲ್ಕಿ, ಮಲ್ಪೆ, ಬೇಕಲ ಕೋಟೆ, ಪರ್ಕಳ ಮುಂತಾದ ಕಡೆಗಳಲ್ಲಿ ಸರ್ಫಿಂಗ್ ಅಭ್ಯಾಸ ನಡೆಸಿದ್ದರು.

2014ರಲ್ಲಿ ಮೊದಲ ಬಾರಿಗೆ ಚೆನ್ನೈನ ಕೋವಲಾಂಗ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಮುಕ್ತ ಮಹಿಳಾ ಶರ್ಫಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದರು. ಆ ಬಳಿಕ ನಿರಂತರ 6 ಬಾರಿ ಸರ್ಫಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಸಿಂಚನಾ ಗೌಡ ಭಾರತದ ನಂ.1 ಸರ್ಫರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಇತರ ಜಲಕ್ರೀಡೆಗಳಾದ ಕಯಾಕಿಂಗ್, ಸ್ಟಾಂಡ್ ಅಪ್ ಪೆಡ್ಡಲ್‌ ಗಳಲ್ಲೂ ಭಾಗವಹಿಸಿ ಚಾಂಪಿಯನ್ ಆಗಿ ಬಹುಮಾನ ಪಡೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಂಶುದ್ದೀನ್, ಸಂಪ್ಯ

contributor

Similar News