ಬಿಡದಿ ಹೋರಾಟ: ಕಾರ್ಪೊರೇಟ್ ಕಾಂಗ್ರೆಸ್-ಫ್ಯಾಶಿಸ್ಟ್ ಬಿಜೆಪಿ; What is to be Done?
ಕಳೆದ ಮೂರು ವರ್ಷಗಳ ಕಾಂಗ್ರೆಸ್ ಸರಕಾರ ಬಾಬಾ ಬುಡಾನ್ ದರ್ಗಾ ವಿಷಯದಿಂದ ಹಿಡಿದು ಬಿಡದಿಯ ತನಕ ಕೇವಲ ಆರ್ಥಿಕ ನೀತಿಗಳಲ್ಲಿ ಮಾತ್ರವಲ್ಲ, ಸಾಮಾಜಿಕ ನ್ಯಾಯ, ಕೋಮು ಸೌಹಾರ್ದ, ಭ್ರಷ್ಟಾಚಾರ, ಆಡಳಿತ ಎಲ್ಲದರಲ್ಲೂ ಬಿಜೆಪಿಯ ನಕಲಾಗಿಯೇ ವರ್ತಿಸುತ್ತಾ ಬಂದಿದೆ. ಹೆಚ್ಚೆಂದರೆ ಹೋರಾಟಗಾರರಿಗೆ ವಿಧಾನಸೌಧದ ಮೂರನೇ ಮಹಡಿ ಪ್ರವೇಶಕ್ಕೆ ಮುಕ್ತ ಅವಕಾಶ, ‘ಗಂಭೀರ ಸಮಾಲೋಚನೆ’, ‘ಕೆಲವು ಗಂಭೀರ ಕೋಮು ಸೌಹಾರ್ದ ಹೇಳಿಕೆ’ಗಳನ್ನು ಬಿಟ್ಟರೆ ಕರ್ನಾಟಕದ ಕಾಂಗ್ರೆಸ್ ಸರಕಾರ ಬಿಜೆಪಿಯ ಮುಂದುವರಿಕೆಯೇ ಆಗಿರುವುದನ್ನು ಸಾಬೀತು ಮಾಡಿದೆ.
ಸತತ ನಾನೂರು ದಿನಗಳಿಗೂ ಹೆಚ್ಚು ಕಾಲ ಹೋರಾಟ ಮಾಡಿದ ಬಿಡದಿ ರೈತರು ಕಾರ್ಪೊರೇಟ್‌ಗಳಿಗಾಗಿ ತಮ್ಮ ಭೂಮಿಯನ್ನು ಕಬಳಿಸಲು ಹೊರಟಿದ್ದ ಸರಕಾರವನ್ನು ತಾತ್ಕಾಲಿಕವಾಗಿ ಹಿಮ್ಮೆಟ್ಟಿಸಿದ್ದಾರೆ.
ರೈತರ ನಿರಂತರ ಹೋರಾಟದ ಜೊತೆಗೆ ಹೋರಾಟವು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು ಮತ್ತು ಜಿಬಿಎ, ಪಂಚಾಯತ್ ಚುನಾವಣೆಗಳು ಸನಿಹವಿರುವುದೂ ಇದರೊಂದಿಗೆ ರೈತರ ಆಕ್ರೋಶ ಮಿತಿ ಮೀರಿ ಮಿಲಿಟೆಂಟ್ ಸ್ವರೂಪ ಪಡೆದುಕೊಂಡಿದ್ದು ಕೂಡ ಚುನಾವಣೆಗಳು ಹತ್ತಿರವಿರುವಾಗ ಜನರೊಂದಿಗೆ ಸದ್ಯಕ್ಕೆ ಸಂಘರ್ಷ ಬೇಡವೆನ್ನುವ ರಾಜಕೀಯ ತೀರ್ಮಾನಕ್ಕೆ ಸರಕಾರವನ್ನು ದೂಡಿದೆ.
ಸರಕಾರ ಒಂದು ಹೆಜ್ಜೆ ಇಟ್ಟಿರುವುದು ತಕ್ಷಣದ ರಾಜಕೀಯ ಕಾರಣಗಳಿಗೆ ಹೊರತು ಜನಪರ ರಾಜಕೀಯ ಒತ್ತಡದಿಂದಲ್ಲ ಎಂಬುದನ್ನು ಸರಕಾರ ಅದೇ ದಿನ ಇದೇ ಯೋಜನೆಯ ಇತರ ಜಮೀನುಗಳಿಗೆ ಅಂತಿಮ ನೋಟಿಸು ಕಳಿಸಿರುವುದು ಮತ್ತು ರೈತಾಪಿಯ ಅಕ್ಷೇಪಣೆಗಳ ಬಗ್ಗೆ ತಾನೇ ಆಯ್ಕೆ ಮಾಡುವ ಜನರುಳ್ಳ ಒಂದು ಕಣ್ಣೊರೆಸುವ ಅಧ್ಯಯನ ಸಮಿತಿಯನ್ನು ರಚಿಸುವುದಾಗಿ ಘೋಷಿಸಿರುವ ಕ್ರಮಗಳು ಸಾಬೀತು ಮಾಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಡದಿ ಭೂಮಿ ಕಬಳಿಸಲಿರುವ ‘AI city ಮತ್ತು Greater Bangalore Integrated Township (GBIT) ಯೋಜನೆ’ಯನ್ನೇನು ಸರಕಾರ ಕೈಬಿಟ್ಟಿಲ್ಲ. ಬಿಡುವುದೂ ಇಲ್ಲ.
ಹೀಗಾಗಿ ಇದು ದೇವನಹಳ್ಳಿ ಭೂ ಹೋರಾಟದಲ್ಲಿ ಬೀಸುವ ಕತ್ತಿಯಿಂದ ತಪ್ಪಿಸಿಕೊಳ್ಳಲು ರೈತರನ್ನು ವಂಚಿಸಲು ರೂಪಿಸಿದ ನಿಧಾನ ದ್ರೋಹ ಹಾಗೂ ವಂಚನೆಯ ಸ್ವರೂಪದ ಸಂಚೇ ಆಗಿರುವುದರಲ್ಲಿ ಸಂಶಯವಿಲ್ಲ.
ಹೀಗಾಗಿ ಜನಪರ ಹೋರಾಟಗಾರರು ಪದೇಪದೇ ಕಾಂಗ್ರೆಸ್ ಸರಕಾರ ಅನುಸರಿಸುತ್ತಿರುವ ಕಾಂಗ್ರೆಸ್ ಮಾದರಿ ಸಂಚಿನ ಕುರಿತು ಜನರಲ್ಲಿ ಇನ್ನೂ ಹೆಚ್ಚು ಜಾಗೃತಿ ಹುಟ್ಟಿಸಬೇಕೇ ವಿನಾ ಇದೊಂದು ಪಾಕ್ಷಿಕ ವಿಜಯ ಎಂಬ ತಪ್ಪು ಗ್ರಹಿಕೆಗೆ ತುತ್ತಾಗಬಾರದು ಅಥವಾ ಈ ಜನಹೋರಾಟವನ್ನು ಫ್ಯಾಶಿಸ್ಟ್ ಬಿಜೆಪಿ ಬಳಸಿಕೊಳ್ಳಬಾರದು ಎಂಬ ಸದುದ್ದೇಶದಿಂದ ಸರಕಾರಕ್ಕೆ ಬೀಸುವ ದೊಣ್ಣೆ ಯಿಂದ ತಪ್ಪಿಸಿಕೊಳ್ಳಲು ಜನರನ್ನು ಸುಳ್ಳು ಭರವಸೆಯ ಮೂಲಕ ವಂಚಿಸಲು ಅವಕಾಶ ಮಾಡಿಕೊಡಬಾರದು.
ಆದರೆ ಈ ಫ್ಯಾಶಿಸಂ ಎಂಬುದೇ ಪ್ರಧಾನ ಶತ್ರುವಾಗಿರುವ ಈ ಕಾಲಘಟ್ಟದಲ್ಲಿ ಕಾಂಗೆಸ್‌ನಂತಹ ‘ಫ್ಯಾಶಿಸ್ಟ್ ಅಲ್ಲದ, ಆದರೆ ಜನವಿರೋಧಿ ಸರಕಾರಗಳೇ ಅಧಿಕಾರದಲ್ಲಿರುವಾಗ’ ಫ್ಯಾಶಿಸ್ಟ್ ವಿರೋಧಿ ಪ್ರಜಾತಂತ್ರವಾದಿಗಳು ತಮ್ಮ ವಿರೋಧದ ಪರಿಣಾಮವನ್ನು ಬಿಜೆಪಿ ಬಳಸಿಕೊಳ್ಳದಂತೆ ಹೇಗೆ ಮುನ್ನಡೆಯುವುದು ಎಂಬ ಬಗ್ಗೆ ಪ್ರಾಮಾಣಿಕ ವಾದ ರಾಜಕೀಯ ವೈರುಧ್ಯವನ್ನು ಎದುರಿಸುತ್ತಿರುವುದಂತೂ ಸತ್ಯ.
ಬಿಜೆಪಿ ವಿರೋಧವೆಂದರೆ ಫ್ಯಾಶಿಸಂ ವಿರೋಧವೆ?
ಅದು ಕರ್ನಾಟಕದಲ್ಲಿ ಇನ್ನೂ ತೀವ್ರವಾದ ಪ್ರಶ್ನೆಯಾಗಿಯೇ ಮುಂದೆ ಬಂದಿದೆ. 2023ರ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಕರ್ನಾಟಕದ ನಾಗರಿಕ ಸಮಾಜವು ಫ್ಯಾಶಿಸ್ಟ್ ಬಿಜೆಪಿಯನ್ನು ಸೋಲಿಸಲು ಬೇರೆಲ್ಲಾ ರಾಜ್ಯಗಳಿಗಿಂತ ಹೆಚ್ಚು ಸಕ್ರಿಯರಾಗಿದ್ದರು. ಆದರೆ 2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅತ್ಯಂತ ಮೂಲಭೂತವಾದ ಮತ್ತು ಪ್ರಧಾನವಾದ ಇತರ ಕಾರಣಗಳಿದ್ದವು. ಇದರಲ್ಲಿ ನಾಗರಿಕ ಸಮಾಜದ ಪ್ರಯತ್ನಗಳು ಪ್ರಧಾನ ಕಾರಣವಲ್ಲವಾದರೂ ಇತರ ಹತ್ತು ಹನ್ನೊಂದು ಕಾರಣಗಳಲ್ಲಿ ಒಂದಾಗಿತ್ತು ಅಷ್ಟೇ. ಈ ಮಿತಿಯು 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳಲ್ಲೂ ಸ್ಪಷ್ಟವಾಗಿತ್ತು.
ಆದರೂ ನಾಗರಿಕ ಸಮಾಜದ ಹಲವು ಸಂಘಟನೆಗಳು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ತಾವು ಕಾರಣವಾಗಿರುವುದರಿಂದ ಸರಕಾರದೊಂದಿಗೆ ಸಮನ್ವಯವನ್ನಿಟ್ಟುಕೊಂಡು ಜನಪರ ನೀತಿಗಳನ್ನು ಜಾರಿಗೆ ತರುವಂತೆ ಮಾಡಬಹುದು ಎಂದು ಭಾವಿಸಿದ್ದವು.
ಆದರೆ ಕಳೆದ ಮೂರು ವರ್ಷಗಳ ಕಾಂಗ್ರೆಸ್ ಸರಕಾರ ಬಾಬಾ ಬುಡಾನ್ ದರ್ಗಾ ವಿಷಯದಿಂದ ಹಿಡಿದು ಬಿಡದಿಯ ತನಕ ಕೇವಲ ಆರ್ಥಿಕ ನೀತಿಗಳಲ್ಲಿ ಮಾತ್ರವಲ್ಲ, ಸಾಮಾಜಿಕ ನ್ಯಾಯ, ಕೋಮು ಸೌಹಾರ್ದ, ಭ್ರಷ್ಟಾಚಾರ, ಆಡಳಿತ ಎಲ್ಲದರಲ್ಲೂ ಬಿಜೆಪಿಯ ನಕಲಾಗಿಯೇ ವರ್ತಿಸುತ್ತಾ ಬಂದಿದೆ. ಹೆಚ್ಚೆಂದರೆ ಹೋರಾಟಗಾರರಿಗೆ ವಿಧಾನಸೌಧದ ಮೂರನೇ ಮಹಡಿ ಪ್ರವೇಶಕ್ಕೆ ಮುಕ್ತ ಅವಕಾಶ, ‘ಗಂಭೀರ ಸಮಾಲೋಚನೆ’, ‘ಕೆಲವು ಗಂಭೀರ ಕೋಮು ಸೌಹಾರ್ದ ಹೇಳಿಕೆ’ಗಳನ್ನು ಬಿಟ್ಟರೆ ಕರ್ನಾಟಕದ ಕಾಂಗ್ರೆಸ್ ಸರಕಾರ ಬಿಜೆಪಿಯ ಮುಂದುವರಿಕೆಯೇ ಆಗಿರುವುದನ್ನು ಸಾಬೀತು ಮಾಡಿದೆ.
ಬಿಡದಿ ಯೋಜನೆಯ ಪಿತಾಮಹ ಜೆಡಿಎಸ್-ಬಿಜೆಪಿಗಳಾಗಿದ್ದು ತಾನು ಅದನ್ನು ಕೇವಲ ಮುಂದುವರಿಸುತ್ತಿರುವುದಷ್ಟೇ ಎಂದು ಡಿಕೆಶಿ ಹೇಳುತ್ತಿರುವುದು ಸುಮ್ಮನೆ ಅಲ್ಲವೇ ಅಲ್ಲ.
ಈ ವಿದ್ಯಮಾನಗಳು ಭಾರತದ ಫ್ಯಾಶಿಸಂ ಮತ್ತು ಫ್ಯಾಶಿಸ್ಟ್ ವಿರೋಧಿ ಹೋರಾಟಗಳ ಬಗ್ಗೆ ಹಲವು ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.
ಕಾರ್ಪೊರೇಟ್ ಕ್ರೋನಿ ಬಂಡವಾಳವಾದವೇ ಭಾರತದ ಫ್ಯಾಶಿಸಂನ ಆರ್ಥಿಕ ನೀತಿಯಾಗಿದ್ದಲ್ಲಿ ಕಾಂಗ್ರೆಸನ್ನು ಫ್ಯಾಶಿಸ್ಟ್ ವಿರೋಧಿ ಆಳುವ ವರ್ಗ ಎನ್ನಬಹುದೇ? ಭಾರತದ ಆಳುವವರ್ಗಗಳಲ್ಲಿ ಒಂದು ಫ್ಯಾಶಿಸ್ಟ್ ವಿರೋಧಿ ಬಣವಿದೆಯೇ? ಭಾರತದ ಬಿಜೆಪಿ ವಿರೋಧಿ ಆಳುವ ಪಕ್ಷಗಳು ಬಿಜೆಪಿ ವಿರೋಧಿಗಳೋ ಫ್ಯಾಶಿಸ್ಟ್ ವಿರೋಧಿಗಳೋ? ಹಾಗಿದ್ದಲ್ಲಿ ಎಲ್ಲಾ ವಿರೋಧ ಪಕ್ಷಗಳಿಂದ ಬಿಜೆಪಿಯೆಡೆಗೆ ಸಲೀಸಾದ ರಾಜಕೀಯ ಮತ್ತು ಸೈದ್ಧಾಂತಿಕ ಪಕ್ಷಾಂತರ ಹೇಗೆ ನಡೆಯಲು ಸಾಧ್ಯ? ಹೀಗಾಗಿ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿಯೇ ಭಾರತದ ಫ್ಯಾಶಿಸಂನ ಸೈದ್ಧಾಂತಿಕ ಮತ್ತು ರಾಜಕೀಯ ನೆಲೆ ಎಂದಾದಲ್ಲಿ ಒಂದು ನೈಜ ಫ್ಯಾಶಿಸ್ಟ್ ವಿರೋಧಿ ಹೋರಾಟದಲ್ಲಿ ಆಳುವ ವರ್ಗದ ಯಾವುದಾದರೂ ಪಕ್ಷಗಳು ಫ್ಯಾಶಿಸ್ಟ್ ವಿರೋಧಿಗಳೇ? ಫ್ಯಾಶಿಸ್ಟ್ ವಿರೋಧಿ ಗೆಳೆಯರಾಗಬಲ್ಲರೇ? ಒಂದು ಬಲವಾದ ದಮನಿತ ವರ್ಗ ಮತ್ತು ಸಮುದಾಯದ ರಾಜಕೀಯ ಶಕ್ತಿಯನ್ನು ಕಟ್ಟಿಕೊಳ್ಳದೆ ಭಾರತದಲ್ಲಿ ಆಳುವ ಪಕ್ಷಗಳ ಬಣಗಳನ್ನು ಅವಲಂಬಿಸಿ ಫ್ಯಾಶಿಸಂನ್ನು ಸೋಲಿಸಬಹುದೇ? ಬಿಜೆಪಿಯೇತರ ಆಳುವ ಪಕ್ಷಗಳ ಸರಕಾರಗಳ ಜೊತೆ ಸಮನ್ವಯ ಸಂಬಂಧವನ್ನು ಇಟ್ಟುಕೊಳ್ಳುವ ಫ್ಯಾಶಿಸ್ಟ್ ವಿರೋಧಿ ಶಕ್ತಿಗಳು ಪರೋಕ್ಷವಾಗಿ ಉಗ್ರ ಫ್ಯಾಶಿಸ್ಟ್ ಶಕ್ತಿಗಳು ಮತ್ತು ಮಾನ್ಯರಾಗಲು ಹಾಗೂ ಇನ್ನಷ್ಟು ಪ್ರಬಲವಾಗಲು ಅವಕಾಶ ಮಾಡಿಕೊಡುತ್ತಿಲ್ಲವೇ?
ಭಾರತದಲ್ಲಿ ನೈಜ ಫ್ಯಾಶಿಸ್ಟ್ ವಿರೋಧ ಕಟ್ಟುವ ಬಗೆಯೇನು?
ಜನರು ತಮ್ಮ ನಿತ್ಯ ಬದುಕಿನ ಆರ್ಥಿಕ ಬೇಡಿಕೆಗಳನ್ನು ಇಟ್ಟುಕೊಂಡು ಸರಕಾರದ ವಿರುದ್ಧ ಹೋರಾಟಕ್ಕೆ ಇಳಿಯುತ್ತಾರೆ. ಆ ಸಂದರ್ಭದಲ್ಲಿ ಜನರಿಗೆ ಅಧಿಕಾರದಲ್ಲಿರುವ ಒಂದು ಪಕ್ಷದ ಸರಕಾರ ಜನವಿರೋಧಿ, ಆದರೆ ಮತ್ತೊಂದು ಪಕ್ಷದ ಸರಕಾರ ಅಧಿಕಾರಕ್ಕೆ ಬಂದರೆ ತಮ್ಮ ಸಮಸ್ಯೆ ಈಡೇರಬಹುದು ಎಂಬ ನಿರೀಕ್ಷೆ ಇರುತ್ತದೆ. ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದು ಅದೇ ಜನವಿರೋಧಿ ನೀತಿಗಳನ್ನು ಮುಂದುವರಿಸಿದಾಗ ಆ ಪಕ್ಷದ ಸರಕಾರದ ವಿರುದ್ಧ ಹಳೆಯ ಪಕ್ಷವನ್ನೇ ಅನಿವಾರ್ಯವಾಗಿ ಅವಲಂಬಿಸುತ್ತಾರೆ.
ಈ ಪ್ರಕ್ರಿಯೆಯಲ್ಲಿ ಈ ಎಲ್ಲಾ ಆಳುವ ಪಕ್ಷಗಳು ಜನವಿರೋಧಿಗಳೇ ಅಲ್ಲವೇ ಎಂಬ ವಿವೇಕವೂ ಮೂಡಿದ್ದರೂ, ಅದಿನ್ನೂ ಸ್ಪಷ್ಟ ವರ್ಗ ಪ್ರಜ್ಞೆಯಾಗಿಯೂ ಶೋಷಿತರೇ ಪ್ರತ್ಯೇಕ ರಾಜಕೀಯ ಶಕ್ತಿಯಾಗಬೇಕೆಂಬ ಗ್ರಹಿಕೆಯಾಗಿಯೂ ರೂಪುಗೊಂಡಿರುವುದಿಲ್ಲ. ಅದು ತನ್ನಂತೆ ತಾನೇ ರೂಪುಗೊಳ್ಳುವುದೂ ಇಲ್ಲ.
ಸಮಾಜ ಬದಲಾವಣೆ ಬಯಸುವ ಕ್ರಾಂತಿಕಾರಿಗಳು ಈ ಹೋರಾಟದಲ್ಲಿ ಜನರೊಂದಿಗೆ ಭಾಗವಹಿಸಿ, ವಿಲೀನವಾಗಿ, ನಾಯಕತ್ವ ಒದಗಿಸುತ್ತಾ ಎದುರಿಸುತ್ತಿರುವ ಸಮಸ್ಯೆಯ ವರ್ಗ ಆಸಕ್ತಿಗಳನ್ನು ಮತ್ತು ಪ್ರಭುತ್ವಗಳ ಶೋಷಕ ವರ್ಗ ಪಕ್ಷಪಾತವನ್ನು ಬಯಲು ಮಾಡುತ್ತಾ ಜನರ ಆರ್ಥಿಕ ಪ್ರಜ್ಞೆಯನ್ನು ರಾಜಕೀಯ ಪ್ರಜ್ಞೆಯನ್ನಾಗಿ ಬದಲಿಸಬೇಕು ಹಾಗೂ ಎಲ್ಲಾ ಆಳುವ ಪಕ್ಷಗಳು ಕಾರ್ಪೊರೇಟ್ ಬಂಡವಾಳಶಾಹಿ ವರ್ಗ ಹಿತಾಸಕ್ತಿಯ ರಕ್ಷಕರೇ ಆಗಿರುವುದರಿಂದ ಜನರು ತಮ್ಮ ವರ್ಗ ಹಿತಾಸಕ್ತಿ ಕಾಪಾಡಿಕೊಳ್ಳಲು ತಮ್ಮದೇ ರಾಜಕೀಯ ಶಕ್ತಿಯನ್ನು ಕಟ್ಟಿಕೊಳ್ಳಬೇಕೆಂಬ ಕ್ರಾಂತಿಕಾರಿ ಅರಿವನ್ನು ಮೂಡಿಸಬೇಕು.
ಇದು ನೈಜ ಸಮಾಜ ಬದಲಾವಣೆಗೆ ಸಾರ್ವಕಾಲಿಕ ಅಗತ್ಯ.
ಆದರೆ ಭಾರತವು ಈಗ ಫ್ಯಾಶಿಸ್ಟ್ ಕಾಲಘಟ್ಟದಲ್ಲಿದೆ. ಆದ್ದರಿಂದ ಇಂದು ಪ್ರಧಾನ ಕರ್ತವ್ಯ ಫ್ಯಾಶಿಸಂನ್ನು ಸೋಲಿಸುವುದು ಎಂಬ ರಾಜಕೀಯ ಗ್ರಹಿಕೆಯಲ್ಲಿ ಏನೂ ತಪ್ಪಿಲ್ಲ.
ಪ್ರಬಲ ಜನಶಕ್ತಿ ಇಲ್ಲದೆ ಆಳುವ ಬಣದೊಂದಿಗೆ ಸಮನ್ವಯವೇ-ಐಕ್ಯರಂಗವೇ?
ಆದರೆ ಫ್ಯಾಶಿಸ್ಟ್ ವಿರೋಧಿ ಕಾರ್ಯತಂತ್ರವೆಂದರೆ ಶೋಷಿತ ಜನರು ತಮ್ಮದೇ ಆದ ರಾಜಕೀಯ ಶಕ್ತಿಯಾಗುವ ಬದಲು ಆಳುವ ಪಕ್ಷಗಳ ಜೊತೆ ಸೇರಿ ಫ್ಯಾಶಿಸಂನ್ನು ಸೋಲಿಸಬೇಕು (ಕಾಂಗ್ರೆಸ್ ಸರಕಾರವು ಫ್ಯಾಶಿಸ್ಟ್ ಆರ್ಥಿಕ ನೀತಿಗಳನ್ನೇ ಜಾರಿಗೆ ತರುತ್ತಾ ಜನದ್ರೋಹಿಯಾಗಿದ್ದರೂ, ಕಾಂಗ್ರೆಸ್ ಜೊತೆ ಕೈಗೂಡಿಸುತ್ತಲೇ , ಕೈಗೂಡಿಸದಿದ್ದರೂ ಆ ಸರಕಾರದ ಅಸ್ತಿತ್ವಕ್ಕೆ ಧಕ್ಕೆ ತರುವ ರೀತಿ ಹೋರಾಟ ಕಟ್ಟದೆ ಅದರ ಜೊತೆಗೂಡಿಯೇ ಬಿಜೆಪಿಯನ್ನು ಸೋಲಿಸಬೇಕು -ಅದು ಬಿಡದಿ ಆದರೂ ಸರಿ ಅಥವಾ ದೇವನಹಳ್ಳಿ ಅಥವಾ ಒಳಮೀಸಲಾತಿಯಾದರೂ ಸರಿ ಇತ್ಯಾದಿ) ಎಂಬ ಕಾರ್ಯತಂತ್ರ ಸಮಸ್ಯಾತ್ಮಕ. ಇದು ಮುಂದುವರಿದರೆ ಆತ್ಮಹತ್ಯಾತ್ಮಕ ಮತ್ತು ಆತ್ಮ ವಂಚಕವೂ ಆಗುವ ಅಪಾಯವಿದೆ. ಅದಕ್ಕೆ ಜನರ ಸಂಘಟನೆಗಳು ಬಲಹೀನವಾಗಿವೆ ಎಂದು ಕಾರಣಗಳನ್ನು ಕೊಡಲಾಗುತ್ತದೆ. ಆದರೆ ಈ ಕಾರ್ಯತಂತ್ರವನ್ನು ಮುಂದುವರಿಸಿದರೆ ಜನಸಂಘಟನೆಗಳು ಯಾವತ್ತೋ ಶಕ್ತಿಯುತವಾಗುವುದಿಲ್ಲ. ಆಳುವ ಪಕ್ಷಗಳ ಅವಲಂಬನೆ ತಪ್ಪುವುದೇ ಇಲ್ಲ.
ಏಕೆಂದರೆ ಆ ಕಾರ್ಯತಂತ್ರ ಫ್ಯಾಶಿಸಂನ್ನೂ ಸೋಲಿಸುವುದಿಲ್ಲ. ಶೋಷಿತ ಜನರು ಪ್ರತ್ಯೇಕ ಮತ್ತು ಬಲಿಷ್ಠ ರಾಜಕೀಯ ಶಕ್ತಿಯೂ ಆಗಲು ಬಿಡುವುದಿಲ್ಲ. ವಾಸ್ತವದಲ್ಲಿ ಶೋಷಿತ ಜನರು ದೊಡ್ಡ ರಾಜಕೀಯ ಶಕ್ತಿಯಾಗದೆ ಫ್ಯಾಶಿಸಂ ಸೋಲುವುದೂ ಇಲ್ಲ. ಏಕೆಂದರೆ ಇತಿಹಾಸದಲ್ಲಿ ಆಳುವ ವರ್ಗದ ಬಣಗಳೇ ಫ್ಯಾಶಿಸ್ಟ್ ಬಣವನ್ನು ಎಂದಿಗೂ ಸೋಲಿಸಿಲ್ಲ. ಎಲ್ಲಿಯೂ ಸೋಲಿಸಿಲ್ಲ. ಇತಿಹಾಸದಲ್ಲೂ ಇಲ್ಲ. ವರ್ತಮಾನದಲ್ಲೂ ಇಲ್ಲ. ಜಗತ್ತಿನಲ್ಲೂ ಇಲ್ಲ. ಭಾರತದಲ್ಲೂ ಇಲ್ಲ.
ಭಾರತದಲ್ಲಂತೂ ಶೋಷಿತ ವರ್ಗ-ಜಾತಿ-ಸಮುದಾಯಗಳು ಒಂದು ಪ್ರತ್ಯೇಕ ಬಂಡವಾಳಶಾಹಿ-ಬ್ರಾಹ್ಮಣಶಾಹಿ ವಿರೋಧಿ ಪ್ರಬಲ ಸಮಾಜವಾದಿ ರಾಜಕೀಯ ಶಕ್ತಿಯಾಗದೆ ಫ್ಯಾಶಿಸಂ ಸೋಲು ಸಾಧ್ಯವೇ ಇಲ್ಲ.
ಆಳುವ ಬಣದಲ್ಲಿ ಫ್ಯಾಶಿಸ್ಟ್ ವಿರೋಧಿ ಬಣವಿದೆಯೇ?
ಏಕೆಂದರೆ ಯುರೋಪ್‌ನ ಫ್ಯಾಶಿಸಂಗಳಂತೆ ಇಲ್ಲಿ ಭಾರತೀಯ ಫ್ಯಾಶಿಸ್ಟರು ಒಂದು ಆಳುವವರ್ಗದ ಪರವಾಗಿ (ಪಕ್ಷವಲ್ಲ ) ಮತ್ತೊಂದು ಆಳುವವರ್ಗವನ್ನು ನಿರ್ನಾಮ ಮಾಡುತ್ತಿಲ್ಲ. ಬದಲಿಗೆ ಕೆಲವು ಕ್ರೋನಿಗಳು ಹೆಚ್ಚು ಬೆಳೆಯುತ್ತಿದ್ದರೂ ದೇಶವನ್ನು ಮತ್ತು ಜನರನ್ನು ಮೊದಲಿಗಿಂತ ಹೆಚ್ಚು ಸುಲಿಯಲು ಉಳಿದ ದೊಡ್ಡ ಬಂಡವಾಳಶಾಹಿಗಳಿಗೂ ಫ್ಯಾಶಿಸಂ ಅವಕಾಶ ಮಾಡಿಕೊಡುತ್ತಿದೆ. ಹೀಗಾಗಿ ಭಾರತದ ಆಳುವ ವರ್ಗಗಳಲ್ಲಿ ಹಲವು ಬಣಗಳಿದ್ದರೂ ಅವ್ಯಾವುವೂ ಫ್ಯಾಶಿಸ್ಟ್ ವಿರೋಧಿ ಬಣವಲ್ಲ. ದೊಡ್ಡ ಫಲಾನುಭವಿಗಳ ಬಗ್ಗೆ ಸಣ್ಣ ಫಲಾನುಭವಿಗಳಿಗೆ ಅಸಮಾಧಾನಗಳಿವೆ. ಆದರೆ ಅದು ಫ್ಯಾಶಿಸ್ಟ್ ವಿರೋಧಿ ಬಣವಾಗುವ ರಾಜಕೀಯ ಅಥವಾ ಉದ್ದೇಶ ಹೊಂದಿಲ್ಲ. ಅದು ಭಾರತದ ಬಂಡವಾಳಶಾಹಿ ವರ್ಗದ ಚಾರಿತ್ರಿಕ ರಾಜಿಕೋರ ಗುಣ.
ಆದ್ದರಿಂದಲೇ ಕಾರ್ಪೊರೇಟ್‌ಗಳ ನಡುವಿನ ಅಸಮಾಧಾನಗಳು ಬಗೆಹರಿಯದ ವೈರುಧ್ಯವಾಗಿಯಾಗಲೀ, ಮಾರಣಾಂತಿಕ ಸಂಘರ್ಷವಾಗಿಯಾಗಲೀ ಬದಲಾಗುತ್ತಿಲ್ಲ. ಮತ್ತವು ಆಳುವ ವರ್ಗಗಳಿಗೆ ಒಂದು ರಾಜಕೀಯ ಬಿಕಟ್ಟನ್ನಾಗಲೀ ಸೃಷ್ಟಿಸುತ್ತಿಲ್ಲ.
ಫ್ಯಾಶಿಸಂ ಬಗ್ಗೆ ಭಾರತದ ಆಳುವ ವರ್ಗಗಳಲ್ಲಿರುವ ಈ ಸರ್ವ ಸಮ್ಮತಿಯೇ ಆಳುವ ಪಕ್ಷಗಳಲ್ಲೂ ಕಾಣುತ್ತದೆ. ಕಾಂಗ್ರೆಸನ್ನು ಒಳಗೊಂಡಂತೆ ಎಲ್ಲಾ ವಿರೋಧ ಪಕ್ಷಗಳಿಗೂ ಬಿಜೆಪಿ ಬಗ್ಗೆ ಚುನಾವಣಾ ವೈಷಮ್ಯವಿದೆಯೇ ವಿನಾ ಫ್ಯಾಶಿಸ್ಟ್ ರಾಜಕೀಯ, ಫ್ಯಾಶಿಸ್ಟ್ ಆರ್ಥಿಕತೆ ಮತ್ತು ಫ್ಯಾಶಿಸ್ಟ್ ಸಂಸ್ಕೃತಿಗಳ ಮೂಲಭೂತ ವಿರೋಧವಿಲ್ಲ. ಇದ್ದರೂ ಅದು ಪ್ರಮಾಣಾತ್ಮಕವಾದದ್ದೇ ವಿನಾ ಗುಣಾತ್ಮಕವಾದದ್ದಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದರೆ ಅವು ಉಗ್ರವಾಗಿ ಜಾರಿಯಾಗುತ್ತದೆ. ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದರೆ ಅದೇ ನೀತಿಗಳನ್ನೇ ಮಂದವಾಗಿ ಅಥವಾ ಮುಚ್ಚುಮರೆಯಾಗಿ ಜಾರಿಯಾಗುತ್ತದೆ.
ಆದ್ದರಿಂದಲೇ ಯಾವುದೇ ಸೈದ್ಧಾಂತಿಕ ಅಥವಾ ರಾಜಕೀಯ ತೊಳಲಾಟಗಳೇ ಇಲ್ಲದಂತೆ ಇತರ ಎಲ್ಲಾ ವಿರೋಧ ಪಕ್ಷಗಳಿಂದ ಬಿಜೆಪಿಗೆ ಶಾಂತಿಯುತ-ಸೌಹಾರ್ದಯುತ ಪಕ್ಷಾಂತರಗಳೂ ಆಗುತ್ತಿರುತ್ತವೆ.
ಭಾರತೀಯ ಫ್ಯಾಶಿಸಂ - ಪಕ್ಷ ಮಾತ್ರವಲ್ಲ -ಆಳುವ ಕೂಟ - Regime
ಹೀಗಾಗಿ ಭಾರತದಲ್ಲಿ ಫ್ಯಾಶಿಸಂ ಎನ್ನುವುದು ಒಂದು ಪಕ್ಷವಲ್ಲ. ಒಂದು Regime. ಹೀಗಾಗಿ ಆಳುವವರ್ಗಗಳಲ್ಲಿ ಮತ್ತು ಪಕ್ಷಗಳಲ್ಲಿ ಇಲ್ಲದ ಫ್ಯಾಶಿಸ್ಟ್ ವಿರೋಧಿ ಸ್ನೇಹಿತರನ್ನು ಮತ್ತು ಐಕ್ಯರಂಗವನ್ನು ಕಾಣುವುದು ಪ್ರಜಾತಂತ್ರವಾದಿಗಳ ಭ್ರಮೆಯೇ ಎಂಬುದು ಕಳೆದ ಎರಡು ಮೂರು ವರ್ಷಗಳಲ್ಲಿ ಕರ್ನಾಟಕದ ಸಿದ್ದು ಮತ್ತು ಈಗಿನ ಡಿಕೆಶಿ ಸರಕಾರ ಪ್ರತಿಯೊಂದು ಹಂತದಲ್ಲೂ ಸಾಬೀತು ಮಾಡಿದೆ. ಮಾಡುತ್ತಿದೆ.
ಆದ್ದರಿಂದ ಎಷ್ಟೇ ಜನವಿರೋಧಿಯಾದ ನೀತಿಗಳನ್ನು ಜಾರಿ ಮಾಡುತ್ತಿದ್ದರೂ ಕಾಂಗ್ರೆಸ್ ಸರಕಾರವನ್ನು ಫ್ಯಾಶಿಸ್ಟ್ ವಿರೋಧಿ ಎಂಬ ಭ್ರಮೆಯಲ್ಲಿ ರಕ್ಷಿಸುವ ಕಾರ್ಯತಂತ್ರ ಪರೋಕ್ಷವಾಗಿ ಫ್ಯಾಶಿಸಂ ಅನ್ನು ರಕ್ಷಿಸುವ ಕಾರ್ಯತಂತ್ರವೇ ಆಗುತ್ತದೆ. ಏಕೆಂದರೆ ಕಾಂಗ್ರೆಸ್ ಸರಕಾರವು ಜಾರಿ ಮಾಡುತ್ತಿರುವುದು ಫ್ಯಾಶಿಸ್ಟ್ ಆಳುವವರ್ಗದ ಫ್ಯಾಶಿಸ್ಟ್ -ಲಾಭದಾಹಿ ಬಂಡವಾಳಶಾಹಿ ಯೋಜನೆಗಳನ್ನೇ.
ಬೆಂಗಳೂರಿನ ಸುತ್ತಮುತ್ತಲೂ ರೈತರ ಜಮೀನು ಕಬಳಿಕೆಯಾಗುತ್ತಿರುವುದು ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಜೊತೆಗೂಡಿ ಜಾರಿ ಮಾಡಿದ ಫ್ಯಾಶಿಸ್ಟ್ ಯೋಜನೆಗಳಿಗಾಗಿಯೇ..
ದೇವನಹಳ್ಳಿಯ ‘ಏರೋಸ್ಪೇಸ್ ಕೈಗಾರಿಕಾ ವಲಯ’, ಬಿಡದಿಯ ‘AI city ಮತ್ತು Greater Bangalore Integrated Township (GBIT) ಯೋಜನೆ’, ‘Global Capability Centres (GCC)’, ‘KWIN City (Knowledge, Wellbeing, and Innovation)’, ಗುಜರಾತಿನ GIFT City ಮಾದರಿಯಲ್ಲಿ ಕರ್ನಾಟಕ ಸರಕಾರ ಮಾಡಬೇಕೆಂದಿರುವ ‘Central Business District (CBD)’ ಎಲ್ಲವನ್ನು ಕಟ್ಟುತ್ತಾ ಬಿಜೆಪಿಯ ಗುಜರಾತ್-ಮಹಾರಾಷ್ಟ್ರದಂತೆ ಬೆಂಗಳೂರನ್ನು ಸಹ 2037ರ ವೇಳೆಗೆ 35 ಲಕ್ಷ ಕೋಟಿ ರೂ. ಬಹುರಾಷ್ಟ್ರೀಯ ಹೂಡಿಕೆ ಇರುವ ಲಕ್ಷಾಂತರ ಕಾರ್ಪೊರೇಟ್ ಕುಬೇರರು ವಾಸಿಸುವ ಅಮರಾವತಿಯನ್ನಾಗಿ ಪರಿವರ್ತಿಸುವುದು ಕಾಂಗ್ರೆಸ್ ಸರಕಾರದ ಕನಸು. ಅದೇ ಕನಸೇ ಬಿಜೆಪಿ ಮತ್ತು ಜೆಡಿಎಸ್‌ದು ಕೂಡ. ಅದೇ ಮೋದಿಯ ಕನಸೂ ಕೂಡ.
ಆ ಕುಬೇರರಿಗಾಗಿಯೇ ಬೆಂಗಳೂರಿನಲ್ಲಿ ಸುರಂಗ ಮಾರ್ಗ, ಮೆಟ್ರೋ, ಎರಡನೇ ಏರ್‌ಪೋರ್ಟ್, ಬೀದಿ ವ್ಯಾಪಾರಿಗಳಿಲ್ಲದ ಸುಂದರ ಬೆಂಗಳೂರು, ಅವರಿಗೆ ಸೇವೆ ಮಾಡಲು ಕನಿಷ್ಠ ವೇತನವಿಲ್ಲದ ಭೂಮಿ ಕಳೆದುಕೊಂಡ ಅಗ್ಗದ ಕೂಲಿಕಾರರು. ಇತ್ಯಾದಿ..ಇತ್ಯಾದಿ..
ಬಿಡದಿ, ದೇವನಹಳ್ಳಿ, ಆನೇಕಲ್ ಹಾಗೂ ಬೆಂಗಳೂರಿನ ಸುತ್ತಮುತ್ತಲು ರೈತರ ಜಮೀನು ವಶಪಡಿಸಿಕೊಳ್ಳುತ್ತಿರುವುದು ಈ ಯೋಜನೆಗಳಿಗಾಗಿ.. ಬೆಂಗಳೂರನ್ನು ಮತ್ತು ಕರ್ನಾಟಕವನ್ನು ಈ ಆಧುನಿಕ ಕುಬೇರರ ಅಮರಾವತಿ ಮಾಡುವುದಕ್ಕಾಗಿ.
ಹೀಗಾಗಿ ಈ ಯೋಜನೆಗಳು ರದ್ದಾಗದೆ ಭೂಮಿ ಉಳಿಯುವುದಿಲ್ಲ.
ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಧುಮುಕಿರುವ ರೈತರಲ್ಲಿ ಸಮಾಜ ಬದಲಾವಣೆ ಬಯಸುವ ಹೋರಾಟಗಾರರು ಎಲ್ಲಾ ಪಕ್ಷಗಳು ಹೇಗೆ ಕಾರ್ಪೊರೇಟ್ ವರ್ಗ ಹಿತಾಸಕ್ತಿ ಕಾಯುತ್ತಿವೆ ಎಂಬ ವರ್ಗ ಅರಿವನ್ನು ಮೂಡಿಸಿ ಭೂಮಿ ಉಳಿಸಿಕೊಳ್ಳುವ ಹೋರಾಟವನ್ನು ಫ್ಯಾಶಿಸ್ಟ್ ಆರ್ಥಿಕ ನೀತಿ ವಿರೋಧಿ- ಬಂಡವಾಳಶಾಹಿ ವಿರೋಧಿ ಹೋರಾಟವನ್ನಾಗಿ ಪರಿವರ್ತಿಸಲು ಶ್ರಮಿಸಬೇಕು.
ಆದರೆ ಇದನ್ನು ಮಾಡಬಹುದಾದ ಹೋರಾಟ ಸಂಘಟನೆಗಳ ಸಂಘಟನಾ ಶಕ್ತಿ ಸೀಮಿತವಾದ್ದರಿಂದ ಅದು ಸಂಪೂರ್ಣವಾಗಿ ಸಾಧ್ಯವಾಗದೆಯೂ ಹೋಗಬಹುದು ಅಥವಾ ರೈತಾಪಿಯ ಒಂದು ವರ್ಗ ಹೆಚ್ಚು ಪರಿಹಾರದ ಆಮಿಷಕ್ಕೆ ಬಲಿಯಾಗಿ ಜಮೀನನ್ನು ಕೊಡಲೂ ಒಪ್ಪಿಕೊಳ್ಳಬಹುದು.
ಅದೇನೇ ಇದ್ದರೂ ಹೋರಾಟಗಾರರ ದಿಕ್ಕು ಜನಪರ್ಯಾಯವನ್ನು ರೂಪಿಸುವ ದಿಕ್ಕಿನೆಡೆಗೆ ಇರಬೇಕಲ್ಲವೇ?
ಅದರ ಬದಲಿಗೆ ಬಲವಂತದಿಂದ ಜಮೀನು ವಶಪಡಿಸಿಕೊಳ್ಳುವುದಿಲ್ಲ, ಸ್ವಇಚ್ಛೆಯಿಂದ ಕೊಡುವವರ ಜಮೀನು ವಶಪಡಿಸಿಕೊಳ್ಳುತ್ತೇವೆ ಎಂಬ ವಂಚಕ ಘೋಷಣೆಯನ್ನು ಯಾವ ಕಾರಣಕ್ಕೂ ಸಮರ್ಥಿಸಬಾರದು.
ಏಕೆಂದರೆ ಕಾಂಗ್ರೆಸ್ ಸರಕಾರಕ್ಕೆ ನಿಜಕ್ಕೂ ಜನ ಕಾಳಜಿ ಇದ್ದರೆ ಈ ಯೋಜನೆಗಳನ್ನು ತಾನೇ 2013ರಲ್ಲಿ ಜಾರಿಗೆ ತಂದ ನ್ಯಾಯೋಚಿತ ಪರಿಹಾರ ಮತ್ತು ಪರಿಹಾರ ಪುನರ್ ವಸತಿ ಮತ್ತು ಭೂಸ್ವಾಧೀನದಲ್ಲಿ ಪಾರದರ್ಶಕತೆ (LARR) ಅಡಿಯಲ್ಲಿ, ಶೇ. 80 ಜನರ ಒಪ್ಪಿಗೆಯಿಲ್ಲದೆ, Social Impact Assesment ಇಲ್ಲದೆ, Urban Area Developemnt Act ಕೆಳಗಡೆ ವಶಪಡಿಸಿಕೊಳ್ಳುತ್ತಿರಲಿಲ್ಲ. ಅಲ್ಲವೇ?
ಆದ್ದರಿಂದ ಉಗ್ರ ಫ್ಯಾಶಿಸ್ಟ್ ಅಲ್ಲದಿದ್ದರೂ ಫ್ಯಾಶಿಸ್ಟ್ ಆಳ್ವಿಕೆಯ ಭಾಗವೇ ಆಗಿರುವ ಜನವಿರೋಧಿ ಕಾಂಗ್ರೆಸನ್ನು ಉಳಿಸುವ ಜವಾಬ್ದಾರಿಯನ್ನು ಪ್ರಜಾತಂತ್ರವಾದಿಗಳು ಹೊತ್ತುಕೊಳ್ಳದೆ ಜನರನ್ನು ಉಳಿಸುವ ದೇಶವನ್ನು ಫ್ಯಾಶಿಸಂನಿಂದ ಉಳಿಸುವ ಕಾರ್ಯತಂತ್ರವನ್ನು ಅಪ್ಪಿಕೊಳ್ಳಬೇಕಿದೆ.