ನಾಡಗೀತೆಯ ಸುತ್ತ
ಮೂಲಭೂತವಾಗಿ ಪ್ರತಿಯೊಬ್ಬ ಕಾವ್ಯಾಸಕ್ತನೂ ತನಗೆ ತಾನೇ ಹಾಕಿಕೊಳ್ಳಬೇಕಾದ ಪ್ರಶ್ನೆಯೆಂದರೆ ಒಂದು ಪದ್ಯವನ್ನು ನಮಗಿಷ್ಟಬಂದಂತೆ ಬದಲಾಯಿಸುವುದು ಆ ಕವಿತೆಗೆ ಮಾತ್ರವಲ್ಲ ಆ ಕವಿಗೆ ಮಾಡುವ ದ್ರೋಹವಲ್ಲವೇ? ರಾಜಕಾರಣಿಗಳು ಮರುನಾಮಕರಣ ಮಾಡುವಲ್ಲಿ ಸಿದ್ಧಹಸ್ತರು. ಹಾಗೆಂದು ಕವಿಯ ಹೆಸರು ಚೆನ್ನಾಗಿಲ್ಲವೆಂದು ಆತನಿಗೆ ಹೊಸ ಹೆಸರನ್ನು ನೀಡಬಹುದೇ? ಯಾವುದೇ ಸಾಂಸ್ಕೃತಿಕ ಹಿನ್ನೆಲೆಯಿಲ್ಲದ ರಾಜಕಾರಣಕ್ಕೆ ಯಾವುದೇ ರೂಪದಲ್ಲಿ ಸಾಹಿತ್ಯವಾಗಲೀ, ಕಲೆಯಾಗಲೀ ಬಲಿ ಬೀಳಬಾರದು. ಮುಖ್ಯವಾಗಿ ರಾಜಕೀಯ ಉದ್ದೇಶಗಳಿಗೆ ಸಾಹಿತ್ಯವು ಬಲಿಯಾಗಬಾರದು.
ನಮ್ಮ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ ಅನಗತ್ಯ ವಿವಾದಕ್ಕೆ ಸಿಲುಕಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದಂತೆ ನಾಡಗೀತೆಗೂ ತಿದ್ದುಪಡಿ ತರಬಹುದೆಂದು ನಾಡಿನ ಹೆಸರಾಂತ ಚಿಂತಕರು ತಿಳಿದಿದ್ದಾರೆ. ಈ ಬಾರಿ ಇದು ‘ಬೌದ್ಧ’ ಎಂಬ ಪದದ ಸೇರಿಕೆಗೆ ಸಂಬಂಧಿಸಿದೆ. ತಿದ್ದುಪಡಿಗಿರುವ ತರ್ಕ, ಸಮರ್ಥನೆ ಮತ್ತು ಸಹಜ ಸಬೂಬುಗಳೆಂದರೆೆ ಈ ಹಿಂದೆ ಈ ಪದ್ಯಕ್ಕೆ ‘ಮಧ್ವ’ ಎಂಬ ಪದವನ್ನು ಸೇರಿಸಿದ್ದು. ಒಂದು ತಪ್ಪು ಇನ್ನೊಂದು ತಪ್ಪಿನ ಬೆಂಬಲಕ್ಕೆ ನಿಲ್ಲುವುದರಿಂದ ‘ಬೌದ್ಧ’ ಎಂಬ ಪದವನ್ನು ಸೇರಿಸುವುದರ ಔಚಿತ್ಯವನ್ನು ಚರ್ಚಿಸಬೇಕಿಲ್ಲ. ಚರ್ಚಿಸಬೇಕಾದದ್ದು ಕುವೆಂಪು ಅವರ ಗೀತೆಯನ್ನು ವಿರೂಪಗೊಳಿಸುವ ಬಗ್ಗೆ.
ಜನಬೆಂಬಲವಿದ್ದರೆ ಅಲ್ಲ- ರಾಜಕೀಯ ಬಹುಮತವಿದ್ದರೆ- ಸರಕಾರವು ಅಧಿಕಾರದಲ್ಲಿರುತ್ತದೆ. ಈ ಅಧಿಕಾರವು ಯಾವ್ಯಾವುದಕ್ಕೆಲ್ಲ ವ್ಯಾಪಿಸುತ್ತದೆ ಅಥವಾ ಅನ್ವಯಿಸುತ್ತದೆಯೆಂಬುದನ್ನು ಮನಗಾಣಬೇಕಾದರೆ ಭಾರತದ ಒಕ್ಕೂಟ ಸರಕಾರವು ಕಳೆದ ಒಂದು ದಶಕಕ್ಕೂ ಹೆಚ್ಚಿನ ಅಧಿಕಾರಾವಧಿಯಲ್ಲಿ ತೆಗೆದುಕೊಳ್ಳುತ್ತಿರುವ ಯಾವುದನ್ನು ಹೇಗೆ ಬೇಕಾದರೂ ಬದಲಾಯಿಸುವ ಶೀಘ್ರನೀತಿಯನ್ನು ಅವಲೋಕಿಸಬಹುದು. ಈ ಅಧಿಕಾರವು ಅವಿವೇಕತನದಿಂದ ತಲೆಗೇರಿದಾಗ ಸಂವಿಧಾನದಿಂದ ಹಿಡಿದು ಸಾಹಿತ್ಯ, ಶಿಕ್ಷಣದವರೆಗೂ ಸರಕಾರದ ನೀತಿಯು ಬಲಪ್ರಯೋಗದಿಂದಾದರೂ ಜಾರಿಯಾಗಬಹುದು.
ಆದರೆ ಇದನ್ನು ಟೀಕಿಸುವ ಕುಶಾಗ್ರಮತಿಗಳು ತಮ್ಮದೇ ಸರಕಾರವಿರುವಲ್ಲಿ ವಿವೇಕದಿಂದ ವರ್ತಿಸುತ್ತಾರೆಂದು ನಂಬುವಂತಿಲ್ಲ. ಅಲ್ಲೂ ಅಧಿಕಾರದ ದುರುಪಯೋಗ ನಡೆದೇ ನಡೆಯುತ್ತದೆ. ಅದರಲ್ಲೂ ಸಾಹಿತ್ಯ, ಶಿಕ್ಷಣ, ಕಲೆ ಮುಂತಾದ ಸೂಕ್ಷ್ಮ ಕ್ಷೇತ್ರಗಳ ಕುರಿತು ಹೇಳುವುದಾದರೆ ಅಧಿಕಾರಶಾಹಿಯ ಸಾಮೀಪ್ಯ, ಸಾನ್ನಿಧ್ಯದಲ್ಲಿರುವ ವಿದ್ವಾಂಸರಿಗೆ, ಬುದ್ಧಿಜೀವಿಗಳಿಗೆ ಅಧಿಕಾರಸ್ಥರ ಮರ್ಜಿಯಂತೆ ನಡೆಯುವುದು ರಾಜಕಾರಣಿಗಳಿಗಿಂತ ಚೆನ್ನಾಗಿ ಅಭ್ಯಾಸವಾಗಿದೆ.
ಸದ್ಯ ‘ಜಯಭಾರತ ಜನನಿಯ ತನುಜಾತೆ’ ಹಾಡಿನ ಬದಲಾವಣೆ ಕುವೆಂಪುವಿಗೆ ನೀಡುವ ಎರಡನೇ ಹೊಡೆತ.
1924ರಲ್ಲಿ ಸಾಹಿತಿ ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆ’ ಕವಿತೆಗೆ ಕರ್ನಾಟಕ ಸರಕಾರವು 2003ರ ಕೊನೆಯಲ್ಲಿ ನಾಡಗೀತೆಯೆಂಬ ಗೌರವವನ್ನು ಸಲ್ಲಿಸಿದೆ. ಅದಕ್ಕೆ ಮೊದಲು ಕರ್ನಾಟಕ ಸರಕಾರಕ್ಕೆ ನಾಡಗೀತೆಯೆಂಬುದಿರಲಿಲ್ಲ. ಹಿಂದಿನ ಮೈಸೂರು ರಾಜ್ಯದಲ್ಲಿ ಆಳರಸರ ಸಂಸ್ಥಾನದಲ್ಲಿ ಬಸವಪ್ಪ ಶಾಸ್ತ್ರಿಗಳ ‘ಕಾಯೋ ಶ್ರೀ ಗೌರಿ’ ಎಂಬ ಕವಿತೆಯು ಆಗಿನ ರಾಜಸತ್ತೆಯಿಂದ ಗೌರವಿಸಲ್ಪಟ್ಟಿತ್ತು. ಅದು ತಾಯಿ ಚಾಮುಂಡಿಯ ಕುರಿತು ರಚಿಸಿದ ಭಕ್ತಿಗೀತೆಯೆಂದು ಪ್ರತೀತಿಯಾದರೂ ಭಟ್ಟಂಗಿ ಗೀತೆಯೂ ಹೌದು. ಕೊನೆಯ ಸಾಲಿನಲ್ಲಿ ‘ಶ್ರೀ ಜಯಚಾಮೇಂದ್ರ ನಾಮಾಂಕಿತ ಭೂಮೀಂದ್ರ ಲಲಾಮನ’ ಎಂಬ ಅಂಕಿತವಿದೆ. ಅದು ಅರಸೊತ್ತಿಗೆಗೆ ಸಹಜ. ಆಸ್ಥಾನ ವಿದ್ವಾಂಸರು ಆಗಲೂ ಈಗಲೂ ಹೀಗೇ ಇರುವುದೇ ವಿಸ್ಮಯ. ಅದು 1950ರ ವರೆಗೂ ಮುಂದುವರಿದಿತ್ತು. ಆನಂತರ ಬಹುಕಾಲ ನಾಡಗೀತೆಯೆಂದು ಗೌರವಿಸಲ್ಪಟ್ಟ ಕವಿತೆಯಿರಲಿಲ್ಲ.
ಕುವೆಂಪು ಬರೆದ ‘ಜಯ ಭಾರತ ಜನನಿಯ ತನುಜಾತೆ’ ಕವಿತೆಯು ಮೈಸೂರು ಅನಂತಸ್ವಾಮಿಯವರ ಕಂಠ ಮತ್ತು ರಾಗದಲ್ಲಿ ಹಾಡಾಗಿ ಬಹಳ ಜನಪ್ರಿಯವಾಗಿತ್ತು. ಕುವೆಂಪು ರಚಿಸಿದ ಬಹಳಷ್ಟು ಕವಿತೆಗಳು ಹಾಡಾಗಿ ಜನಮನದಲ್ಲಿ ನೆಲೆ ನಿಂತಿವೆ. ಹಾಗೆ ನೋಡಿದರೆ ಇದು ಅವರ ಸರ್ವೋತ್ಕೃಷ್ಟ ಹಾಡೇನಲ್ಲ. ಅನೇಕ ಬಾರಿ ಜನಪ್ರಿಯತೆಗೂ ಗುಣಮಟ್ಟಕ್ಕೂ ಸಂಬಂಧವಿರುವುದಿಲ್ಲ. ಕುವೆಂಪು ಅವರ ‘ದೋಣಿ ಸಾಗಲಿ, ಮುಂದೆ ಹೋಗಲಿ..’, ‘ನಾನೆ ವೀಣೆ ನೀನೆ ತಂತಿ’, ‘ತನುವು ನಿನ್ನದು ಮನವು ನಿನ್ನದು’ ಹೀಗೆ ಅನೇಕ ಜನಪ್ರಿಯ ಹಾಡುಗಳ ಪಟ್ಟಿ ಮಾಡಬಹುದು. ಕವಿತೆಗಳು ಹಾಡಾದಾಗ ನುಡಿಗಳು ನಾದವಾಗುತ್ತವೆ; ಬಾಹ್ಯ ಇಂದ್ರಿಯಗಳಿಗೆ ಸುಲಭವಾಗಿ ಗ್ರಹಿಕೆಯಾಗಿ ತಿಳಿದೋ ತಿಳಿಯದೆಯೋ ಅಂತರಂಗಿಕ ಅನುಭವವಾಗಿ ಹೆಚ್ಚು ಜನರಿಗೆ ಅದರಲ್ಲೂ ಜನಸಾಮಾನ್ಯರಿಗೆ ತಲುಪುತ್ತದೆ. ಹೀಗಲ್ಲದಿದ್ದರೆ ಅದು ಸಾಹಿತ್ಯದ ವಿಶೇಷ ಆಸ್ಥೆಯಿಂದ ಓದುವವರಿಗಷ್ಟೇ ಹಿಡಿಸಬೇಕಾಗಿತ್ತು. ಬೇಂದ್ರೆ, ಅಡಿಗ, ಜಿಎಸ್‌ಎಸ್, ಕಣವಿ, ನಿಸಾರ್ ಅಹಮದ್, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣ ರಾವ್, ಸಿದ್ಧಲಿಂಗಯ್ಯ ಮುಂತಾದ ಹಿರಿಯ/ಜನಪ್ರಿಯ ಕವಿಗಳ ಕವಿತೆಗಳಲ್ಲೂ ಹಾಡುಗಳೇ ಹೀಗೇ ಹೆಚ್ಚು ಜನಪ್ರಿಯ. ಎ.ಕೆ. ರಾಮಾನುಜನ್ ಎಷ್ಟು ಜನರಿಗೆ ಗೊತ್ತಿದೆ? ಒಳ್ಳೆಯ ಕವಿತೆಗಳಲ್ಲೂ ಸಾಹಿತ್ಯದ ಅಂಶಕ್ಕಿಂತಲೂ ಗೇಯತೆ ಜನರಿಗೆ ಪ್ರೀತಿ. ಕ್ಯಾಸೆಟ್‌ನಲ್ಲಿ ಕವಿತೆ ಮೂಡಿದಷ್ಟು ಪುಸ್ತಕದ ಪುಟಗಳಲ್ಲಿ ಶೋಭಿಸುವುದಿಲ್ಲ. ಜನಪ್ರಿಯತೆಗೂ ಸಿದ್ಧಿಗೂ ಸಂಬಂಧವಿಲ್ಲ; ಆದರೆ ಜನಪ್ರಿಯತೆಗೂ ಪ್ರಸಿದ್ಧಿಗೂ ಅನ್ಯೋನ್ಯ ಸಂಬಂಧವಿದೆ.
ಕುವೆಂಪು ಭಾರತ ದೇಶವನ್ನೂ, ಕನ್ನಡ ನಾಡನ್ನೂ ತಾಯಿ-ಮಗಳ ಸಂಬಂಧದೊಂದಿಗೆ ಚಿತ್ರಿಸಿದರು. ಯಾವ ವ್ಯಕ್ತಿಯನ್ನೂ ವಿಶಿಷ್ಟವಾಗಿ ಆರಾಧಿಸಲಿಲ್ಲ. ಅವರು ಬರೆದ ಪದ್ಯದಲ್ಲಿ ‘ಮಧ್ವ’ ಎಂಬ ಪದವಿರಲಿಲ್ಲ. ಅದನ್ನು 2004ರಲ್ಲಿ ಸಾರ್ವಜನಿಕರ ಅದರಲ್ಲೂ ಮುಖ್ಯವಾಗಿ ಮಧ್ವಾನುಯಾಯಿಗಳ ಒತ್ತಡದ ಮೇಲೆ ಸೇರಿಸಲಾಯಿತು. ಇದೊಂದು ರೀತಿಯಲ್ಲಿ ಜಾತಿ ರಾಜಕೀಯ. ಸರಕಾರ ಎಲ್ಲರ ಯೋಗಕ್ಷೇಮ ನೋಡಿಕೊಳ್ಳಬೇಕೆಂಬುದು ಸರಿ. ಹಾಗೆಂದು ಎಲ್ಲರನ್ನೂ ವಿನಾಕಾರಣ ತೆಕ್ಕೆಗೆ ಸೇರಿಸಿಕೊಳ್ಳುವುದು ಎಲ್ಲ ಕ್ಷೇತ್ರಕ್ಕೂ ಅನ್ವಯಿಸುವುದಿಲ್ಲ. ಇದು ಯಾವೊಂದು ಧರ್ಮಕ್ಕಾಗಲೀ, ಮತಕ್ಕಾಗಲೀ ವಿರೋಧವಲ್ಲ. ಎಲ್ಲವೂ ಎಲ್ಲ ಕಡೆಯೂ ಇರುವುದಿಲ್ಲ; ಇರಬೇಕಾಗಿಲ್ಲ. ಸಾಹಿತ್ಯವನ್ನು ಸರಕಾರ ಅವಲಂಬಿಸಬಾರದು. ಅವಲಂಬಿಸಿದರೂ ಅಲ್ಲಿನ ಸೃಜನಶೀಲ ಅಭಿವ್ಯಕ್ತಿಯನ್ನು ತನಗಿಷ್ಟಬಂದಂತೆ ಬಾಗಿಸುವುದು ಸರಿಯಲ್ಲ. ಆದರೆ ಜೀಯಾ ಹಸಾದ ಎಂಬ ಪಂಡಿತಪಡೆಯೇ ಸರರಕಾರದೊಂದಿಗಿರುವಾಗ ಇವನ್ನೆಲ್ಲ ಗಮನಿಸುವವರು ಯಾರು? ನಾಳೆ ಯಾರಾದರೊಬ್ಬರ ಮೃತ್ಯುಪತ್ರವನ್ನೂ ಹೀಗೆಯೇ ತಿದ್ದಬಹುದಲ್ಲ!
ಇದೇ ಅಂಕಣದಲ್ಲಿ ಹಿಂದೊಮ್ಮೆ ನಾನು ಪ್ರಸ್ತಾವಿಸಿದ ಉದಾಹರಣೆ ಇಲ್ಲಿಗೂ ಹೊಂದುವುದೆಂಬ ಕಾರಣಕ್ಕೆ ಮತ್ತೆ ಹೇಳುತ್ತಿದ್ದೇನೆ: ವಿದ್ಯಾರ್ಥಿಯೊಬ್ಬ ‘ಘಳಿಗೆಗೊಬ್ಬ ಹುಟ್ಟುವನು, ಘಳಿಗೆಗೊಬ್ಬ ಸಾಯುವನು..’ ಎಂದೇನೋ ಪದ್ಯ ಬರೆದ. ಅದನ್ನು ಉತ್ಸಾಹದಿಂದಲೋ, ಮೆಚ್ಚುಗೆ ಪಡೆಯಲೋ ಅಂತೂ ತನ್ನ ಅಧ್ಯಾಪಕರಿಗೆ ತೋರಿಸಿದ. ಅವರು ಗಣಿತದ ಅಧ್ಯಾಪಕರು. ಪ್ರಾಯಃ ವಿದ್ವಾಂಸರು, ಪಂಡಿತರು. ಅವರು ಓದಿ ನೋಡಿ ‘‘ಪದ್ಯವೇನೋ ಚೆನ್ನಾಗಿ ಕೇಳಿಸುತ್ತದೆ, ಆದರೆ ನೀನು ಬರೆದ ಹಾಗೆ ‘ಘಳಿಗೆಗೊಬ್ಬ ಹುಟ್ಟುವನು, ಘಳಿಗೆಗೊಬ್ಬ ಸಾಯುವನು..’ ಎಂದರೆ ಜನಸಂಖ್ಯೆ ಇದ್ದಲ್ಲೇ ಇರುತ್ತದೆ. ವಾಸ್ತವ ಹಾಗಿಲ್ಲ. ಅಂಕೆಸಂಖ್ಯೆಗಳು ಜನಸಂಖ್ಯೆ ಹೆಚ್ಚಾಗುತ್ತದೆಂದು ಹೇಳುತ್ತವಲ್ಲವೇ? ಆದ್ದರಿಂದ ಇದೊಂದು ಸಾಲನ್ನು ‘ಘಳಿಗೆಗೊಬ್ಬ ಹುಟ್ಟುವನು, ಒಂದೂವರೆ ಘಳಿಗೆಗೊಬ್ಬ ಸಾಯುವನು..’ ಎಂದು ಬದಲಾಯಿಸು’’ ಎಂದರಂತೆ!
ಈಗ ನಡೆಯುತ್ತಿರುವ ಈ ಬದಲಾವಣೆಯ ಪರ್ವ ಇಂಥದ್ದೇ. ನಮ್ಮಿಷ್ಟ ಬಂದಂತೆ ಬದಲಾಯಿಸಲೂ ಬೇಕು; ಹಾಗೆಂದು ಹಾಡನ್ನೇ ಬದಲಾಯಿಸಿ ಬೇರೆ ಹಾಡನ್ನು ಆಯ್ಕೆ ಮಾಡುವಂತಿಲ್ಲ; ಏಕೆಂದರೆ ಕುವೆಂಪು ಅಭಿಮಾನಿಗಳ ದೊಡ್ಡ ಪಡೆಯೇ ಇದೆ. ಕರ್ನಾಟಕದಲ್ಲಿ ಲಿಂಗಾಯತರ ಸ್ಪರ್ಧೆಯ ಎದುರು ಒಕ್ಕಲಿಗರಿಗೆ ಈ ಗೌರವ ನೀಡಿದ್ದೇ ಒಂದು ಸಾಧನೆ! ಅದನ್ನು ಅವರು ಕಳೆದುಕೊಳ್ಳಲು ಒಪ್ಪಲಾರರು. ಕುವೆಂಪುವಿನ ವಿಚಾರಕ್ರಾಂತಿಯನ್ನು ಕೊನೇ ಪಕ್ಷ ಇದರಲ್ಲಾದರೂ ಸಾಧಿಸದಿದ್ದರೆ ಹೇಗೆ?
ಹೀಗೆ ‘ಮಧ್ವ’ ಪದ ಇತರ ಆಚಾರ್ಯರ ಜೊತೆಗೆ (ಕರ್ಣನ ಬತ್ತಳಿಕೆಯಲ್ಲಿ ಅಶ್ವಸೇನ ಸೇರಿಕೊಂಡಂತೆ ಅಲ್ಲದಿದ್ದರೂ!) ಸೇರಿತು. ಕುವೆಂಪು ಉದ್ದೇಶಪೂರ್ವಕವಾಗಿ ದ್ವೈತವನ್ನು ಕೈಬಿಟ್ಟಿದ್ದರೋ ಹೇಳಲಾಗದು. ಆದರೆ ಅವರಿಗೆ ಮಧ್ವರ ಕುರಿತು ಒಲವಿರಲಿಲ್ಲವೆಂದು ಹಿರಿಯರು ಹೇಳುತ್ತಿದ್ದುದನ್ನು ಕೇಳಿದ್ದೇನೆ. ಈ ಬದಲಾವಣೆ ಬಂದಾಗ ಸ್ವತಃ ಕುವೆಂಪು ಅವರ ಮಗ ಪೂರ್ಣಚಂದ್ರ ತೇಜಸ್ವಿ ವಿರೋಧ ವ್ಯಕ್ತಪಡಿಸಿದ್ದರಂತೆ. ಅದನ್ನೆಲ್ಲ ಗಡಿವಿವಾದದಂತೆ ರಾಜಿ ಮೂಲಕ ಇತ್ಯರ್ಥಗೊಳಿಸಿ ಈ ಬದಲಾವಣೆಯೊಂದಿಗೆ, ತ್ರಿಮತಸ್ಥರ ಸಮಾಧಾನದೊಂದಿಗೆ, ನಾಡಗೀತೆ ಹಾಡಲ್ಪಟ್ಟಿತು. ಹಾಡಿನ ಸುಲಲಿತ ಓಟಕ್ಕೆ, ಪ್ರಾಸಕ್ಕೆ, ರಾಗಕ್ಕೆ ಆತಂಕವಾಗಲಿಲ್ಲ. ಕಾಲ ಕಳೆಯಿತು.
ಈಗ ಈ ‘ಬೌದ್ಧ’ ಪದದ ಅಗತ್ಯವಾದರೂ ಯಾಕಾಯಿತು? ಇದಕ್ಕೂ ನಾಡಿಗೂ ಏನು ಸಂಬಂಧ? ಅಧಿಕೃತ ಸಮರ್ಥನೆ ಏನು ಹೇಳುತ್ತದೆಂದು ಇನ್ನೂ ಪ್ರಕಟವಾಗಿಲ್ಲ. ಆದರೆ ನೇತ್ಯಾತ್ಮಕವಾಗಿ, ಚರ್ಚೆಗಾಗಿ ಹೇಳುವುದಾದರೆ, ‘ಜಿನ’ನ ಹೆಸರು ಬಂದ ಮೇಲೆ ‘ಬುದ್ಧ’ನ ಹೆಸರು ಬಾರದಿದ್ದರೆ ಹೇಗೆ? ಹಾಗೆ ನೋಡಿದರೆ ‘ಜಿನನುತ’ ಎಂಬ ಪದದ ಮೊದಲು ‘ಗೌತಮ’ ಎಂಬ ಪದವಿದೆ. ಇದು ಬುದ್ಧನನ್ನೇ ಉಲ್ಲೇಖಿಸುತ್ತದೆ. (ಕುವೆಂಪು ಅವರು ಪುರಾಣದ ಅಹಲ್ಯಾಪತಿಯನ್ನು ಉದ್ದೇಶಿಸಿರಲಿಕ್ಕಿಲ್ಲ!) ಇದೊಂದು ರೀತಿಯಲ್ಲಿ ಅತೃಪ್ತರಿಗಾಗಿ, ನಿಕಟಸ್ಪರ್ಧಿಗಳಿಗಾಗಿ ಸೃಷ್ಟಿಸಿದ ಉಪಮುಖ್ಯಮಂತ್ರಿ ಪಟ್ಟದ ಹಾಗೆ! ನಮ್ಮ ಅನೇಕ ಸಾಹಿತಿಗಳಿಗೆ ಈಗಲೂ ಉಚಿತವೋ ಅನುಚಿತವೋ ಬುದ್ಧ, ಅಲ್ಲಮ ಹೀಗೆ ಕೆಲವು ಹೆಸರುಗಳನ್ನು ಉದಾಹರಿಸದಿದ್ದರೆ ತಮ್ಮ ಅರಿವು ಲೋಕವಿಸ್ತಾರವಾಗುವುದಿಲ್ಲ ಮತ್ತು ಓದುಗರ ಅರಿವೂ ವಿಕಾಸವಾಗುವುದಿಲ್ಲವೆಂಬ ಭ್ರಮೆಯಿದೆ. ಅದಿರಲಿ, ಪದ್ಯದಲ್ಲೂ ಈ ಎಲ್ಲ ಹೆಸರುಗಳಿರಬೇಕೆಂಬ ತರ್ಕವೇನು?
ಬುದ್ಧ ಸಕಲರಿಗೂ ಗೌರವಾನ್ವಿತ; ಸರ್ವಮಾನ್ಯ. ಹಾಗೆಂದು ದೇಶ ವಿದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಪ್ರಸಾರವಾದರೂ ಕರ್ನಾಟಕದಲ್ಲಿ ಬೌದ್ಧಮತ ಅಷ್ಟಾಗಿ ಪ್ರಸಾರವಾಗಲಿಲ್ಲ. ಆದರೆ ಜೈನಧರ್ಮವು ಕರ್ನಾಟಕದ ಸಾಂಸ್ಕೃತಿಕ ಜಗತ್ತನ್ನು ವಿಶ್ವಮಾನ್ಯಗೊಳಿಸಿತು. ಕರ್ನಾಟಕದ ಶಿಲ್ಪಕಲೆಯಾಗಲೀ, ಸಾಹಿತ್ಯವಾಗಲೀ ಜೈನರ ಉಲ್ಲೇಖವಿಲ್ಲದೆ ಪೂರ್ಣವಾಗುವುದಿಲ್ಲ ಮಾತ್ರವಲ್ಲ, ಜೈನಸಾಹಿತ್ಯವು ಪಂಪನಿಂದ ಮೊದಲ್ಗೊಂಡು ಹದಿನೈದನೇ ಶತಮಾನದ ಮತ್ತು ಪುನಃ ರತ್ನಾಕರವರ್ಣಿಯ ಮೂಲಕ ಹೊಸಗನ್ನಡಪೂರ್ವ ಸಾಹಿತ್ಯದ, ವರೆಗೂ ಕನ್ನಡ ಸಾಹಿತ್ಯದೊಂದಿಗೆ ಹಾಸುಹೊಕ್ಕಾಗಿ ಬೆರೆತು ಕರ್ನಾಟಕದ/ಕನ್ನಡದ ಸಾಹಿತ್ಯಕ್ಕೆ ಕಳಶಪ್ರಾಯವಾಗಿದೆ. ಇದರಿಂದಾಗಿ ಜೈನ ಎಂಬ ಪದ ನಮಗೆ ಹೊಸತೆನಿಸುವುದಿಲ್ಲ. ಇದನ್ನು ಕುವೆಂಪು ಹೇಗೆ ಗ್ರಹಿಸಿದರೋ ಗೊತ್ತಿಲ್ಲ. ಹೇಗಿದ್ದರೂ ಬುದ್ಧನನ್ನು ಸ್ಮರಿಸದಿದ್ದರೆ ಬುದ್ಧನಂತೂ ಬೇಸರಿಸುವುದಿಲ್ಲ; ಅಂಗುಲಿಮಾಲಾ, ಅಮ್ರಪಾಲಿಯರನ್ನು ಶರಣಾಗಿಸಿದ ಬುದ್ಧ ಸಿಟ್ಟಂತೂ ತಾಳಲಾರ. ಕುವೆಂಪು ಅವರ ಗ್ರಹಿಕೆಯನ್ನು ಪರಕಾಯ ಪ್ರವೇಶದೊಂದಿಗೆ ಗೌರವಿಸುವ ಪ್ರತಿಯೊಬ್ಬ ಸೂಕ್ಷ್ಮಮತಿಯೂ ಕುವೆಂಪು ಬರೆದ ಈ ಹಾಡಿಗೆ ಈಗಾಗಲೇ ಅನುದ್ದಿಶ್ಯ ಕಿಂಚಿದೂನವಾಗಿದೆ, ಪರವಾಗಿಲ್ಲ ಮತ್ತೆ ಇದನ್ನು ಘಾಸಿಗೊಳಿಸಬಾರದು ಎಂಬ ಕಾವ್ಯಶರಣ ಮನಸ್ಥಿತಿ ಹೊಂದಬೇಕಾಗಿತ್ತು. ಇರದಿರುವುದು ನಮ್ಮ ಮತ್ತು ಕನ್ನಡದ, ವಿಶೇಷವಾಗಿ ಕಾವ್ಯದ ದುರಂತ.
ಈ ಹಾಡಿನ ಬದಲಿಗೆ ಕೆ.ಎಸ್. ನಿಸಾರ್ ಅಹಮದ್ ಅವರ ‘ಜೋಗದ ಸಿರಿಬೆಳಕಿನಲ್ಲಿ..’ ಎಂದು ಆರಂಭವಾಗುವ ‘ನಿತ್ಯೋತ್ಸವ’ ಕವಿತೆಯೇನಾದರೂ ನಾಡಗೀತೆಯಾಗಿದ್ದರೆ ಅದರಲ್ಲಿ ಕವಿ ಒಪ್ಪಲಿ, ಬಿಡಲಿ, ಕರ್ನಾಟಕದ ಹೊಸ ಯೋಜನೆಗಳನ್ನು, ಇಂದಿನ ಸಾಧನೆಗಳನ್ನು ಸೇರಿಸಬಹುದು. ಸೇರಿಸಿ ರಾಗವಾಗಿ ಹಾಡಬಲ್ಲ ಇಂತಹ ಹಲವು ಇತರ ನಾಡಗೀತೆಗಳಾಗಬಲ್ಲ ಕವಿತೆಗಳಿವೆ. ಅವನ್ನೆಲ್ಲ ಇದೇ ನಿಕಷಕ್ಕೆ ಒಡ್ಡಿ ಪರೀಕ್ಷಿಸಬಹುದು.
ಕೊಡವ ಭಾಷೆಯಲ್ಲಿ ‘ನಾಡ’ ಎಂದರೆ ‘ನನ್ನ’ ಎಂದರ್ಥ. ಆ ದೃಷ್ಟಿಯಿಂದ ಈ ಗೀತೆಯನ್ನು ಕುವೆಂಪು ‘ನಾಡ’ಗೀತೆಯೆಂದರೆ ಈಗ ಕರ್ನಾಟಕದ ಎಲ್ಲರೂ ‘ನಾಡ’ ಗೀತೆ ಎನ್ನಬಹುದು. ಬರಲಿರುವ ವರ್ಷಗಳಲ್ಲಿ ಇನ್ನೂ ಹಲವು ವ್ಯಕ್ತಿಗಳ ಹೆಸರುಗಳನ್ನು ಸೇರಿಸುವ ಸಂದರ್ಭ ಬಂದರೆ, ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿಗಳ ಹೆಸರನ್ನು ತಜ್ಞರ ಸಮಿತಿ ಶಿಫಾರಸು ಮಾಡಿದರೆ, ಅಚ್ಚರಿಯಿಲ್ಲ. (ಅರ್ಜುನನಿಗೆ ಅರಿಕೇಸರಿ ಸಂವಾದಿಯಾಗಿದ್ದನಲ್ಲ!) ಈಗ ಸೂಚಿಸಿದ ಬದಲಾವಣೆಯೊಂದಿಗೆ ಮೂಡಿಬರುವ ನವನಾಡಗೀತೆಗೆ ಈ ಬದಲಾವಣೆಗೆ ಕಾರಣೀಭೂತವಾದ ಸಮಿತಿಯ ಅಧ್ಯಕ್ಷರೋ ಸದಸ್ಯರೋ ಕವಿ ಕುವೆಂಪು ಅವರ ಹೆಸರಿನ ಬದಲು ಅವರ ಹೆಸರಿಗಿಂತಲೂ ಚೆನ್ನಾಗಿರುವ ತಮ್ಮ ಹೆಸರನ್ನಿಟ್ಟುಕೊಂಡರೆ ಕವಿತೆಯ ಬದಲಾವಣೆ ಸಾರ್ಥಕವಾಗಬಹುದು. (ನಮ್ಮಲ್ಲೊಬ್ಬರು ಅಪ್ಪ ಅಮ್ಮ ಪ್ರೀತಿಯಿಂದ ಇಟ್ಟ ‘ಕರೀಗೌಡ’ ಎಂಬ ಹೆಸರು ಚೆನ್ನಾಗಿಲ್ಲವೆಂದು ‘ಕೃಷ್ಣ’ ಎಂಬ ಹೆಸರನ್ನಿಟ್ಟುಕೊಂಡಿದ್ದರು! ಎರಡರ ಅರ್ಥವೂ ಒಂದೇ ಎಂಬುದು ಅವರಿಗೆ ತಿಳಿಯಿತೋ ಇಲ್ಲವೋ ಕಾಣೆ!)
ಮೂಲಭೂತವಾಗಿ ಪ್ರತಿಯೊಬ್ಬ ಕಾವ್ಯಾಸಕ್ತನೂ ತನಗೆ ತಾನೇ ಹಾಕಿಕೊಳ್ಳಬೇಕಾದ ಪ್ರಶ್ನೆಯೆಂದರೆ ಒಂದು ಪದ್ಯವನ್ನು ನಮಗಿಷ್ಟಬಂದಂತೆ ಬದಲಾಯಿಸುವುದು ಆ ಕವಿತೆಗೆ ಮಾತ್ರವಲ್ಲ ಆ ಕವಿಗೆ ಮಾಡುವ ದ್ರೋಹವಲ್ಲವೇ? ರಾಜಕಾರಣಿಗಳು ಮರುನಾಮಕರಣ ಮಾಡುವಲ್ಲಿ ಸಿದ್ಧಹಸ್ತರು. ಹಾಗೆಂದು ಕವಿಯ ಹೆಸರು ಚೆನ್ನಾಗಿಲ್ಲವೆಂದು ಆತನಿಗೆ ಹೊಸ ಹೆಸರನ್ನು ನೀಡಬಹುದೇ? ಯಾವುದೇ ಸಾಂಸ್ಕೃತಿಕ ಹಿನ್ನೆಲೆಯಿಲ್ಲದ ರಾಜಕಾರಣಕ್ಕೆ ಯಾವುದೇ ರೂಪದಲ್ಲಿ ಸಾಹಿತ್ಯವಾಗಲೀ, ಕಲೆಯಾಗಲೀ ಬಲಿ ಬೀಳಬಾರದು. ಮುಖ್ಯವಾಗಿ ರಾಜಕೀಯ ಉದ್ದೇಶಗಳಿಗೆ ಸಾಹಿತ್ಯವು ಬಲಿಯಾಗಬಾರದು. ಇದು ಎಷ್ಟರ ಮಟ್ಟಿಗೆ ಎಂಬ ಸಾಪೇಕ್ಷತೆಯಿಲ್ಲ. ಈಗ ಒಕ್ಕೂಟ ಸರಕಾರವು ಟಾಗೋರರ ‘ಜನಗಣಮನ’ದ ಬದಲು ‘ವಂದೇಮಾತರಂ’ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಮಾಡುವ ಸನ್ನಾಹದಲ್ಲಿದೆ. ರಾಷ್ಟ್ರಗೀತೆಯಾಗಲೀ, ನಾಡಗೀತೆಯಾಗಲೀ ಹೆಸರು ಬದಲಾಯಿಸುವುದಕ್ಕೆ ಕ್ರಿಕೆಟ್ ಸ್ಟೇಡಿಯಂ ಅಲ್ಲ. ಅಹಮದಾಬಾದಿನ ಸರದಾರ್ ಪಟೇಲ್ ಕ್ರೀಡಾಂಗಣವು ಈಗ ನರೇಂದ್ರ ಮೋದಿ ಕ್ರೀಡಾಂಗಣವಾಗಿದೆ. ಕಾಲದ ಬದಲಾವಣೆಯೊಂದಿಗೆ ಅದು ಇನ್ನಷ್ಟು ಬದಲಾವಣೆ ಹೊಂದಬಹುದು. ಆದರೆ ರಾಷ್ಟ್ರಗೀತೆಯ ಬದಲಾವಣೆಯನ್ನು ವಿರೋಧಿಸುವವರು ಕರ್ನಾಟಕದಲ್ಲಿ ನಾಡಗೀತೆ ಇನ್ನಷ್ಟು ವಿರೂಪವಾಗುವುದನ್ನು ಪ್ರತಿಭಟಿಸಬೇಕು. ಅದು ಏಕರೂಪದ ಚಿಂತನೆ. ಅದಲ್ಲದ್ದು ಅನುಕೂಲ ಶಾಸ್ತ್ರ. ಮನುಸ್ಮತಿಯನ್ನು ವಿರೋಧಿಸುವವರು ಮತ್ತೊಂದು ಮನುಸ್ಮತಿಗೆ ನಿರ್ಮಾಪಕರಾಗಬಾರದು; ನಿರ್ದೇಶಕರಂತೂ ಆಗಲೇಬಾರದು.
ಇದು ಇಲ್ಲಿಗೇ ಮುಗಿಯುವುದಿಲ್ಲ. ಭವಿಷ್ಯದಲ್ಲಿ ಇನ್ನಷ್ಟು ವಿಚಾರವಂತರು ಅಧಿಕಾರದ ಸಮೀಪದಲ್ಲಿ ಬಂದಾಗ ಎಂದೋ ವಿಚಾರಕ್ರಾಂತಿಗೆ ಕರೆಕೊಟ್ಟ ಕುವೆಂಪು ಕರ್ನಾಟಕವನ್ನು ಸರ್ವರ ಗೊಂಡಾರಣ್ಯವಾಗಿಸುವ ರಾಜಕೀಯ ವಿಚಾರವಂತರ ಯೋಜನೆಗೆ ಬಲಿಯಾದದ್ದು, ಬಲಿಯಾಗುವುದು ಕುವೆಂಪು ಅಪೇಕ್ಷಿಸುವುದು ಬಿಡಿ, ಕನಸಿನಲ್ಲೂ ನಿರೀಕ್ಷಿಸಿರಲಾರರು!