1975ರ ತುರ್ತುಪರಿಸ್ಥಿತಿಯ ಪೂರ್ವೋತ್ತರ ಕಥನ....

ಕೃತಿ: ಚದುರಂಗ ಲೇಖಕರು: ಡಾ. ಲತಾ ಗುತ್ತಿ ಮುಖಬೆಲೆ: 495 ರೂ. ಪ್ರಕಾಶಕರು: ಅಂಕಿತ ಪುಸ್ತಕ 53, ಗಾಂಧಿ ಬಜಾರ್ ಮುಖ್ಯ ರಸ್ತೆ, ಬಸವನಗುಡಿ, ಬೆಂಗಳೂರು-560004 ಫೋನ್:080-26617100, 26617755, ಮೊ:9019190502

Update: 2023-11-09 05:48 GMT

- ಡಾ. ಎಸ್. ಪಿ. ಪದ್ಮಪ್ರಸಾದ್, ತುಮಕೂರು

ಡಾ. ಲತಾ ಗುತ್ತಿಯವರು ಪಳಗಿದ ಲೇಖಕಿ. ಸುಮಾರು ಮೂವತ್ತು ಕೃತಿಗಳನ್ನು ರಚಿಸಿರುವ/ಸಂಪಾದಿಸಿರುವ ಇವರ ಕಾದಂಬರಿಗಳ ಪೈಕಿ ಇದು ಮೂರನೆಯದು. ಇವರ ಎರಡನೆಯ ಕಾದಂಬರಿ ‘ಕರಿನೀರು’ ಅಂಡಮಾನಿನಲ್ಲಿ ಜೈಲುಶಿಕ್ಷೆಗೆ ಗುರಿಯಾಗಿದ್ದ ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಕತೆ. ತುಂಬಾ ಘನವಾಗಿ ರೂಪುಗೊಂಡು ಆ ಕೃತಿ ಏಳು ಪ್ರಶಸ್ತಿಗಳನ್ನು ಗಳಿಸಿ ಲೇಖಕಿಯ ಸಾಮರ್ಥ್ಯವನ್ನು ಎತ್ತಿ ಸಾರಿತು. ಅದರ ನಂತರ ಸಾಕಷ್ಟು ಅಂತರದಲ್ಲಿ ರೂಪುಗೊಂಡಿರುವ ಕಾದಂಬರಿ ಈ ‘ಚದುರಂಗ’.

ಈ ಕೃತಿ ರಚನೆಗಾಗಿ ಲೇಖಕಿ ಸಾಕಷ್ಟು ಪೂರ್ವಸಿದ್ಧತೆಗಳನ್ನು ಮಾಡಿ ಕೊಂಡಿರುವುದು ಕಾದಂಬರಿಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ತುರ್ತುಪರಿಸ್ಥಿತಿಯ ಪೂರ್ವ ಉತ್ತರ ಕಾಲದ ಕಥನ ಎಂದು ಲೇಖಕಿ ಹೇಳಿಕೊಂಡಿದ್ದರೂ ಇದು ಕೇವಲ ಅಷ್ಟಕ್ಕೇ ಸೀಮಿತವಾದ ಕಥನವಾಗಿ ಉಳಿದಿಲ್ಲ. ಶರಣರ ಚಳವಳಿ, ಅದರ ಆಶಯಗಳು ಕಲ್ಯಾಣಕ್ರಾಂತಿಯ ಬಳಿಕ ಅವರು ಚದುರಿಹೋದ ಬಗೆ ಇಲ್ಲಿಂದ ಹಿಡಿದು ಮಾರ್ಕ್ಸ್, ಲೋಹಿಯಾ, ಅಂಬೇಡ್ಕರ್ ಅವರವರೆಗೂ ಇಲ್ಲಿ ಚರ್ಚೆಗಳು ನಡೆದಿವೆ.

ಕಥಾನಾಯಕನಾದ ಗುರುಪಾದನ ವ್ಯಕ್ತಿತ್ವದ ಚಿತ್ರಣ ಅತಿ ಆದರ್ಶದ್ದೇನೋ ಅನಿಸುತ್ತದೆ. ಆದರೆ ಅಂಥ ಆದರ್ಶದ ಬೆನ್ನುಹತ್ತಿ ಸ್ವಂತ ಸುಖ ನಿರ್ಲಕ್ಷಿಸಿದ ಹಲವು ಮಂದಿ ಈಗಲೂ ನಮ್ಮ ನಡುವೆ ಇದ್ದಾರೆ. ಉಳವಿ ಜಾತ್ರೆಗೆ ಹೋಗುವ ಯಾತ್ರಿಕರ ನಡೆ-ನುಡಿಗಳ ಚಿತ್ರಣ, ಶ್ರೀಕಂಠಪ್ಪನ ಆಟಾಟೋಪದ ಬದುಕು, ಅದರ ಅಂತಿಮ ಫಲಶ್ರುತಿ, ಗುರುಪಾದ ವಾಸಿಸುವ ಚಾಳಿನ ಹಲವು ಬಗೆಯ ವ್ಯಕ್ತಿತ್ವಗಳು-ಇವೆಲ್ಲ ತುಂಬ ವಾಸ್ತವ ರೀತಿಯಲ್ಲಿ ಇಲ್ಲಿ ಚಿತ್ರಿತವಾಗಿವೆ. ಉಳವಿಯ ಜಾತ್ರೆಗೆ ಈಗ ಯಾರೂ ಹಾಗೆ ಹೋಗಲಾರರು. ಆದರೆ ‘ಗತ’ದ ರೀತಿಯೊಂದನ್ನು ಕಟ್ಟಿಕೊಡುವಲ್ಲಿ ಲೇಖಕಿ ತಾಳ್ಮೆಯಿಂದ ವಿಷಯ ಸಂಗ್ರಹಿಸಿ ಚಿತ್ರವನ್ನು ರೂಪಿಸಿರುವ ಬಗೆ ಮೆಚ್ಚುವಂಥದು. ತುರ್ತುಪರಿಸ್ಥಿತಿಯಲ್ಲಿ ಬಹಳಷ್ಟು ಶ್ರೀಮಂತರ ಸೊಲ್ಲು ಅಡಗಿ ಹೋಗಿತ್ತು. ಅಟಾಟೋಪ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಆದರೂ ಶ್ರೀಕಂಠಪ್ಪ ಅಷ್ಟು ಗೈರತ್ತು ತೋರುತ್ತಿದ್ದದು ಹೇಗೆ ಎಂಬುದು ವಿಸ್ಮಯ ಮೂಡಿಸುತ್ತದೆ.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ರಾಷ್ಟ್ರದ ರಾಜಕೀಯ ಚಟುವಟಿಕೆಗಳ ಜೊತೆಗೆ ಗ್ರಾಮ-ನಗರಗಳ ಜೀವನ ಚಿತ್ರಣಗಳ ಆಗುಹೋಗುಗಳನ್ನು ಕೆಲಮಟ್ಟಿಗೆ ವಿಶ್ವದ ಆಗುಹೋಗುಗಳನ್ನೂ ಓದುಗರೆದುರು ಸಮಾನಾಂತರವಾಗಿ ತೆರೆದಿಡುವ ಪ್ರಯತ್ನ ಈ ಕೃತಿಯಲ್ಲಿ ಲೇಖಕಿ ಮಾಡಿದ್ದಾರೆ. ಆದ್ದರಿಂದ ಏಕಕಾಲಕ್ಕೆ ಈ ಕೃತಿಯು ಮೂರು ಸ್ತರದ ಆಗುಹೋಗುಗಳನ್ನು ಪರಸ್ಪರ ಪ್ರಭಾವಿಸುವ ಪರಿಯನ್ನು ಚಿತ್ರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಬಹುಮಟ್ಟಿಗೆ ಅದರಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ ಕೂಡ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News