ಅಪರೂಪದ ಹಾಗೂ ಮಹತ್ವದ ಕೃತಿ ‘ಉರುಳುವ ಕಲ್ಲಿನ ನೆನಪಿನ ಸುರುಳಿ’

Update: 2023-07-01 18:40 GMT

ಡಾ. ಮೀನಾಕ್ಷಿ ಬಾಳಿ

ನಾನು ಇತ್ತೀಚೆಗೆ ಓದಿದ ಪುಸ್ತಕಗಳಲ್ಲಿ ಗಮನ ಸೆಳೆದ ಕೃತಿ ಭಾರತದ ಪ್ರಮುಖ ಸಮಾಜ ವಿಜ್ಞಾನಿ ಮತ್ತು ಸ್ತ್ರೀವಾದಿ ಚಿಂತಕಿ ವೀಣಾ ಮಜುಂದಾರ್ ಅವರ ಆತ್ಮಚರಿತ್ರೆ ‘‘ಉರುಳುವ ಕಲ್ಲಿನ ನೆನಪಿನ ಸುರುಳಿ’’. ಆತ್ಮಕಥೆಗಳ ಸಾಲಿನಲ್ಲಿ ಎದ್ದು ಕಾಣಿಸುವ ಕೃತಿ. ಆತ್ಮಕಥನಗಳು ಸೃಜನ ಸಾಹಿತ್ಯವೆನಿಸಿಕೊಂಡರೂ ಅವು ಸಮಾಜಶಾಸ್ತ್ರೀಯ ಪಠ್ಯಗಳಾಗಿಯೂ ಗಮನ ಸೆಳೆಯುತ್ತವೆ. ಅಂತೆಯೇ ಅವು ನಾಳಿನ ದಿನಮಾನಗಳಿಗೆ ಅನೌಪಚಾರಿಕ ಇತಿಹಾಸ ಕೃತಿಗಳಾಗಿಯೂ ಒದಗಿ ಬರುತ್ತವೆ. ಮಧ್ಯಕಾಲೀನ ಪ್ರವಾಸ ಕಥನಗಳನ್ನೇ ಇಂದು ಇತಿಹಾಸದ ಆಕರ ಕೃತಿಗಳಾಗಿ ಅಧ್ಯಯನ ಮಾಡುತ್ತಿಲ್ಲವೆ? ಐತಿಹಾಸಿಕ ದಾಖಲೆಗಳಿಗಿಂತ ಜನಸಾಮಾನ್ಯರ ಈ ಸ್ವಯಂ ಕಥನಗಳು ಹೆಚ್ಚು ನಿರ್ದಿಷ್ಟವಾಗಿ ಒದಗಿ ಬರಲಿವೆ. ಇದಕ್ಕೆ ದೊಡ್ಡ ಪುರಾವೆಯಾಗಿ ‘ಉರುಳುವ ಕಲ್ಲಿನ ನೆನಪಿನ ಸುರುಳಿ’ ಕೃತಿಯನ್ನು ಗಮನಿಸಬಹುದು. ಇದು 2010ರಲ್ಲಿಯೇ ಇಂಗ್ಲಿಷ್‌ನಲ್ಲಿ ಬೆಳಕು ಕಂಡಿತ್ತಾದರೂ ಕನ್ನಡಕ್ಕೆ ಬಂದದ್ದು 2023ರಲ್ಲಿ. ಮೌಲಿಕ ಕೃತಿಗಳನ್ನು ಪ್ರಕಟಿಸುವಲ್ಲಿ ಸಿದ್ಧಹಸ್ತರಾಗಿರುವ ಕ್ರಿಯಾ ಮಾಧ್ಯಮದ ಮಿತ್ರರು ಇದನ್ನು ತ್ವರಿತ ಗತಿಯಲ್ಲಿ ಮುದ್ರಿಸಿ ಕೈಗಿತ್ತಿದ್ದಾರೆ. ನಮ್ಮ ನಾಡಿನ ಸಮಾಜವಾದಿ ಚಿಂತಕಿ ಮತ್ತು ಪ್ರಾಂಪ್ಟ್ ಲೇಖಕಿ ಡಾ. ಎನ್. ಗಾಯತ್ರಿ ಕನ್ನಡಕ್ಕೆ ತಂದಿದ್ದಾರೆ. ಕನ್ನಡ ಮಹಿಳಾ ಲೋಕದಲ್ಲಿ ಇದೊಂದು ಮಹತ್ವಪೂರ್ಣವಾದ ಕೃತಿ. ಏಕೆಂದರೆ ಭಾರತದಲ್ಲಿ ಸ್ತ್ರೀವಾದ, ಸ್ತ್ರೀವಾದಿ ಚಳವಳಿ ಅದರ ಚುಂಗು ಹಿಡಿದು ಸಾಗಿದ ಮಹಿಳಾ ಅಧ್ಯಯನಕ್ಕೆ ಬಹು ದೊಡ್ಡ ಕೊಡುಗೆ ಇತ್ತವರು ವೀಣಾ ಮಜುಂದಾರ್. ಮಹಿಳಾ ಅಧ್ಯಯನದಲ್ಲಿ ಕೆಲಸ ಮಾಡಿದವರಿಗೆಲ್ಲ ವೀಣಾ ಮಜುಂದಾರ್ ಪರಿಚಿತ ಹೆಸರು. ಭಾರತದಲ್ಲಿ ಮಹಿಳಾ ಚಳವಳಿ ಮತ್ತು ಮಹಿಳಾ ಅಧ್ಯಯನ ಕ್ಷೇತ್ರ ಇವೆರಡೂ ಪರಸ್ಪರ ಪೂರಕ ಮತ್ತು ಪ್ರೇರಕ. ಈಗ ನಾವು ದೇಶದಾದ್ಯಂತ ಕಾಣುತ್ತಿರುವ ವಿಶ್ವವಿದ್ಯಾನಿಲಯ ಮಟ್ಟದಲ್ಲಿರುವ ಮಹಿಳಾ ಅಧ್ಯಯನ ವಿಭಾಗಗಳು ವೀಣಾ ಮಜುಂದಾರ್ ಅವರ ಸುದೀರ್ಘ ಪರಿಶ್ರಮದ ಫಲಗಳೇ ಆಗಿವೆ. ಆತ್ಮಕಥೆಗಳು ಸಾಮಾಜಿಕ ಅಧ್ಯಯನ ಕ್ಷೇತ್ರದಲ್ಲಿ ಆಕರ ಕೃತಿಗಳಾಗಿ ಒದಗಿ ಬರಬಲ್ಲವು ಎಂಬುದಕ್ಕೆ ‘ಉರುಳುವ ಕಲ್ಲಿನ ನೆನಪಿನ ಸುರುಳಿ’ ಕೃತಿ ಮಾದರಿಯಾಗಿದೆ. ಸಾಮಾನ್ಯವಾಗಿ ಆತ್ಮಕಥೆಗಳೆಂದರೆ ಅಲ್ಲಿ ಲೇಖಕರ ವೈಯಕ್ತಿಕ ವಿವರಗಳು ಇಡುಕಿರುದಿರುತ್ತವೆ. ಆದರೆ ವೀಣಾರ ಕಥೆ ಹಾಗಿಲ್ಲ. ಭಾರತದ ಮಹಿಳಾ ಚಳವಳಿಯ ಪ್ರಾರಂಭಿಕ ಹಂತದಿಂದ ಅದು ಮಧ್ಯ ಹಂತಕ್ಕೆ ಬರುವವರೆಗಿನ ಚಾರಿತ್ರಿಕ ಸಂಗತಿಗಳೇ ಅಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿವೆ. ಇಲ್ಲಿಯವರೆಗೆ ಭಾರತದಲ್ಲಿ ಮಹಿಳೆಯರನ್ನು ಒಂದು ಸ್ವತಂತ್ರ ಮತ್ತು ಪ್ರತ್ಯೇಕವಾದ ಸಮುದಾಯವೆಂದು ಪರಿಗಣಿಸಿದ್ದು ಇರಲೇ ಇಲ್ಲ. ವೀಣಾ ತಮ್ಮ ವೃತ್ತಿಯಲ್ಲಿ ಇದನ್ನು ಸಂಬಂಧಪಟ್ಟವರಿಗೆ ಮನಗಾಣಿಸಿ ಈ ಕುರಿತು ಅಧ್ಯಯನ ಮಾಡಲು ಪ್ರೇರೇಪಿಸಿದ್ದಲ್ಲದೆ 1971ರಲ್ಲಿ ಮಹಿಳೆಯರ ಸ್ಥಿತಿಗತಿಯ ಸಮಗ್ರ ಅಧ್ಯಯನ ಮಾಡಲೆಂದು ರಚನೆಯಾದ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಹಗಲಿರಳು ದುಡಿದು 1974ರಲ್ಲಿ ಅದನ್ನು ಸಿದ್ಧಪಡಿಸಿಯೂ ಕೊಟ್ಟರು. ಯುದ್ಧೋಪಾದಿಯಲ್ಲಿ ತಮ್ಮ ತಂಡದೊಂದಿಗೆ ಮಾಡಿದ ಕೆಲಸವನ್ನು ಅವರು ಇಲ್ಲಿ ಹಿಡಿದಿಟ್ಟಿದ್ದಾರೆ. ‘ಸಮಾನತೆಯೆಡೆಗೆ..’ ಎಂಬ ಹೆಸರಿನಲ್ಲಿ ಪ್ರಕಟವಾದ ಈ ವರದಿ ಇವತ್ತಿಗೂ ಮಹಿಳಾ ಚಳುವಳಿ ಕಟ್ಟುವವರಿಗೆ ಹಾಗೂ ಮಹಿಳಾ ಅಭಿವೃದ್ಧಿ ನಿರ್ವಹಿಸುವವರಿಗೆ ಒಂದು ಮಾನದಂಡವಾಗಿ ನಿಂತಿದೆ.

ವಿದೇಶದಲ್ಲಿ ವ್ಯಾಸಂಗ ಮುಗಿಸಿ ಮರಳಿ ತಾಯ್ನಾಡಿಗೆ ಬಂದ ನಂತರ ಅವರು ರಾಜಕೀಯ ಶಾಸ್ತ್ರದ ಉಪನ್ಯಾಸಕಿಯಾಗಿ ಪಾಟ್ನಾ ವಿಶ್ವವಿದ್ಯಾನಿಲಯದಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಅಲ್ಲಿಂದ ಅವರು ಭಾರತೀಯ ಉನ್ನತ ಶಿಕ್ಷಣದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿ ಅಕಾಡಮಿಕ್ ಲೋಕವನ್ನು ಕಟ್ಟಿ ಬೆಳೆಸಿದರು. ಆಕೆ ಎಲ್ಲವನ್ನು ಚಾಲೆಂಜ್ ಆಗಿ ತೆಗೆದುಕೊಂಡು ನಿಭಾಯಿಸುತ್ತಿದ್ದ ಪರಿ ನಿಜಕ್ಕೂ ಶ್ಲಾಘನೀಯ. ಕೇವಲ ಅಕಾಡಮಿಕ್ ಮಾತ್ರವಲ್ಲ ಜನಚಳವಳಿ ಕಟ್ಟುವಲ್ಲಿಯೂ ಅವರು ನಿಸ್ಸೀಮರು. ಪ್ರಾರಂಭದಲ್ಲಿಯೇ ಅವರು ಪಾಟ್ನಾ ವಿಶ್ವವಿದ್ಯಾನಿಲಯದ ಉಪನ್ಯಾಸಕರ ಸಂಘ ಕಟ್ಟಿ ಅದರ ಮೊದಲ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ಶಿಕ್ಷಕರ ಚಳವಳಿಯ ನೇತೃತ್ವ ವಹಿಸಿ ಆಳುವವರ ಕೆಂಗಣ್ಣಿಗೂ ಗುರಿಯಾದರೂ ವೀಣಾ ಧೃತಿಗೆಡಲಿಲ್ಲ. ಒಡಿಶಾದ ಬೆಹ್ರಾಂಪುರ ವಿವಿಯಲ್ಲಿ ಉಪನ್ಯಾಸಕಿಯಾಗಿ ನಂತರ ಯುಜಿಸಿಯ ಸೆಕ್ರೆಟರಿಯೆಟ್‌ನಲ್ಲಿ ಶಿಕ್ಷಣ ಅಧಿಕಾರಿಯಾಗಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ಶಿಮ್ಲಾದಲ್ಲಿ ರಿಸರ್ಚ್ ಫೇಲೋ ಆಗಿ ಹೀಗೆ ಎಷ್ಟೆಲ್ಲಾ ಹುದ್ದೆಗಳನ್ನು ನಿಭಾಯಿಸಿ ಅವುಗಳಿಗೆ ಗೌರವ ತಂದುಕೊಟ್ಟರು. ಅಧ್ಯಯನ, ಸಂಶೋಧನೆ ಇವು ಅವರಿಗೆ ರಕ್ತವಾಗಿದ್ದವು. ಸರಕಾರಿ ವಲಯದಲ್ಲಿ ಅಧಿಕಾರಿಶಾಹಿಗಳನ್ನು ನಿಭಾಯಿಸಿಕೊಂಡು ಜನಪರ ಕೆಲಸ ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟವರು ವೀಣಾ.

ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಯ ಅಧ್ಯಯನದ ವರದಿ ದೇಶದಲ್ಲಿ ಎಲ್ಲರ ಕಣ್ಣು ತೆರೆಸಿತು. ನೀತಿ ನಿರೂಪಣಾ ಸ್ಥಾನಗಳಲ್ಲಿ ಮಹಿಳೆಯರ ಪಾಲುದಾರಿಕೆ ಕುರಿತು ತುಂಬಾ ಗಂಭೀರವಾದ ಶಿಫಾರಸುಗಳು ಈ ವರದಿಯಲ್ಲಿ ಇದ್ದವು. ಇದನ್ನು ಆ ಕಾಲದ ಆಡಳಿತಾರೂಢರು ಒಪ್ಪಲಾರರು ಎಂಬ ಅನುಮಾನವಿದ್ದರೂ ಅದನ್ನು ತಯಾರಿಸುವಲ್ಲಿ ತಮ್ಮನ್ನು ತಾವು ಗಂಧದಂತೆ ತೇಯ್ದುಕೊಂಡಿದ್ದ ಲೋತಿಕಾದಿ ಮತ್ತು ವೀಣಾ ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಕುರಿತು ಸ್ಪಷ್ಟ ನಿಲುವುಗಳನ್ನು ವ್ಯಕ್ತಪಡಿಸಿದ್ದರು. ಮೇಲಧಿಕಾರಿಗಳು ವರದಿಯಲ್ಲಿ ಕೆಲವು ತಿದ್ದುಪಡಿ ಮಾಡಿಸಲು ಪ್ರಯತ್ನಪಟ್ಟರಾದರೂ ವೀಣಾ ಅದಕ್ಕೆ ಸೊಪ್ಪುಹಾಕಲಿಲ್ಲ. ಅವರೇ ಹೇಳಿಕೊಂಡಿರುವಂತೆ ‘ಸಮಾನತೆಯೆಡೆಗೆ’ ಎಂಬ ಶೀರ್ಷಿಕೆಯಡಿಯಲ್ಲಿ ಸಿದ್ಧವಾಗಿದ್ದ ಈ ವರದಿಯು ಭಾರತ ಸರಕಾರವನ್ನು ಅತ್ಯಂತ ಗಂಭೀರವಾದ ವಿಮರ್ಶೆಗೆ ದೂಡುವಂಥದಾಗಿತ್ತು. ಹೀಗಾಗಿ ಇದನ್ನು ಸರಕಾರ ತಕ್ಷಣವೇ ಪ್ರಕಟಿಸಲು ಅನುಮೋದನೆ ನೀಡುವುದು ಕಷ್ಟವಿತ್ತು. ಆಗಿನ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯು ಇವರನ್ನು ತಮ್ಮ ಇಲಾಖೆಗೆ ಆಮಿಷವೊಡ್ಡಿ ವರ್ಗಾಯಿಸಿಕೊಂಡು ಆನಂತರ ಬೆದರಿಸಿ ವರದಿಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿಸಬಹುದೆಂದು ಭಾವಿಸಿದ್ದರಂತೆ. ಆದರೆ ವೀಣಾ ಯಾವತ್ತೂ ಯಾರ ಆಮಿಷಗಳಿಗೆ ಬಲಿಯಾಗಲಿಲ್ಲ. ವಿಶೇಷವಾಗಿ ಯಾವುದೇ ಪದವಿ, ಹುದ್ದೆಗಳಿಗೆ ಲಾಬಿ ಮಾಡಲೂ ಇಲ್ಲ. ಎಂದಿಗೂ ಯಾರಿಗೂ ಬಗ್ಗಲಿಲ್ಲ. ರಾಜಿ ಮಾಡಿಕೊಳ್ಳಲಿಲ್ಲ ಭಾರತದ ಸ್ತ್ರೀವಾದಿ ಚಿಂತನೆ ಮತ್ತು ಚಳವಳಿಗೆ ಸ್ಪಷ್ಟ ದಿಕ್ಕು ದೆಸೆ ತೋರುವಲ್ಲಿ ನಿಜಕ್ಕೂ ವೀಣಾ ಅವರ ಪ್ರಯತ್ನ ಪ್ರಶಂಸನೀಯ. ಅವರ ಅಧ್ಯಯನದ ಫಲಿತಗಳು ಹಲವು ಅಪ್ರಿಯ ಸತ್ಯಗಳನ್ನು ತೆರೆದಿಟ್ಟವು. ಅದರಲ್ಲೊಂದು 1961ರ ಜನಸಂಖ್ಯಾ ಸಮೀಕ್ಷೆಯ ಅಧ್ಯಯನದ ಪ್ರಕಾರ ಬಹುಪತ್ನಿತ್ವವು ಮುಸ್ಲಿಮರಿಗಿಂತ ಹಿಂದೂಗಳಲ್ಲೇ ಹೆಚ್ಚು ವ್ಯಾಪಕವಾಗಿ ನೆಲೆಸಿದೆ ಎಂದು ಹೇಳಿದಾಗ ಶಿಕ್ಷಣ ಮಂತ್ರಿ ನಿಮಗೆ ಇದು ಎಲ್ಲಿಂದ ದೊರೆಯಿತು ಎಂದು ಚೌಕಾಶಿ ಮಾಡಿದರಂತೆ. ಆಗ ಅವರು ಸರಕಾರ ಸಲ್ಲಿಸಿದ ಜನಗಣತಿ ಮಾಹಿತಿಯನ್ನು ಒದಗಿಸುತ್ತಾರೆ. ಅಧ್ಯಯನಶೀಲೆ ವೀಣಾ ಮಾಹಿತಿ ಹೆಕ್ಕುವಲ್ಲಿ ಮತ್ತು ಹೆಕ್ಕಿದ್ದನ್ನು ವಿಶ್ಲೇಷಿಸುವಲ್ಲಿ ನಿಸ್ಸೀಮರು. ಅವರ ಅಧ್ಯಯನದ ಮಾದರಿ ಜನಪರ ವೈಜ್ಞಾನಿಕತೆಯನ್ನು ಮೈಗೂಡಿಸಿಕೊಂಡದ್ದು ಗಮನಾರ್ಹ. ವೀಣಾ ಒಬ್ಬ ಸಮರ್ಥ ಅಕಾಡಮಿಷಿಯನ್ ಹೋರಾಟಗಾರ್ತಿ. ಸಾಮಾನ್ಯವಾಗಿ ಅಕಾಡಮಿಷಿಯನ್‌ಗಳಿಗೆ ಹೋರಾಟದ ಅನುಭವವಾಗಲಿ, ಸಾಮರ್ಥ್ಯವಾಗಲಿ ಇರುವುದಿಲ್ಲ. ಇನ್ನೊಂದೆಡೆ ಹೋರಾಟಗಾರ್ತಿಯರಲ್ಲಿ ಅಕಾಡಮಿಕ್ ಶಿಸ್ತಾಗಲಿ, ಅಧ್ಯಯನದ ಬಲವಾಗಲಿ ಅಷ್ಟಾಗಿ ಇರುವುದಿಲ್ಲ. ಈ ಎರಡನ್ನೂ ಮೇಳೈಸಿಕೊಂಡವರು ತುಂಬಾ ಕಡಿಮೆ. ಅಂಥ ಬೆರಳೆಣಿಕೆಯ ಸಾಲಿನಲ್ಲಿ ವೀಣಾ ಎದ್ದು ಕಾಣಿಸುತ್ತಾರೆ. ಅವರು ಮಹಿಳೆಯರ ಸ್ಥಿತಿಗತಿಯನ್ನು ಕುರಿತ ‘ಸಮಾನತೆಯೆಡೆಗೆ’ ವರದಿಯೇನೋ ಸಲ್ಲಿಸಿದರು. ಆದರೆ ಅದು ಅನುಷ್ಠಾನದಲ್ಲಿ ಬರಬೇಕಲ್ಲ. ಸದರಿ ವರದಿಯಿಂದ ಸರಕಾರದಲ್ಲಿ ಸಂಚಲನವೇನೋ ಮೂಡಿತು. ಅಷ್ಟರಲ್ಲಿ ಆಗಿನ ಜನತಾ ಪಕ್ಷದ ಸರಕಾರ ಬಿದ್ದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿತ್ತು. ಹೊಸ ಸರಕಾರ ಹೊಸ ಪಂಚವಾರ್ಷಿಕ ಯೋಜನೆಯನ್ನೇನೊ ರೂಪಿಸಿತು. ಆದರೆ ಇದರಲ್ಲಿ ಮಹಿಳೆಯರ ವಿಶೇಷ ಆಬಿವೃದ್ಧಿಯ ಪ್ರಸ್ತಾಪವೇ ಇರಲಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಆಗಿನ ಜಂಟಿ ಕಾರ್ಯದರ್ಶಿಗಳಾಗಿದ್ದ ನಿರ್ಮಲಾ ಬುಖ್ ಅವರು ವೀಣಾ ಅವರನ್ನು ಕರೆದು ‘‘ನಾವು ಮೂರು ವರ್ಷ ಕಣ್ಣಲ್ಲಿ ಕಣ್ಣಿಟ್ಟು ಮಾಡಿದ ಕಾರ್ಯ; ಅಂದರೆ ಇವರು ‘ಸಮಾನತೆಯೆಡೆ’ ವರದಿಯಲ್ಲಿ ಮಾಡಿದ ಶಿಫಾರಸುಗಳು, ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗುತ್ತದೆ. ಆದ್ದರಿಂದ ನೀನು ಹೊರಗಿನಿಂದಲೇ ಏನಾದರೂ ಮಾಡು’’ ಎಂದು ಕಿವಿ ಮಾತು ಹೇಳಿದರಂತೆ. ಆಗ ವೀಣಾ ಅವರು ದೇಶದಲ್ಲಿರುವ ಎಲ್ಲ ಕ್ರಿಯಾಶೀಲ ಮಹಿಳಾ ಸಂಘಟನೆಗಳನ್ನು ಕರೆದು ಈ ದಿಸೆಯಲ್ಲಿ ಸರಕಾರದ ಮೇಲೆ ಒತ್ತಡ ಹೇರುವಂತೆ ಚಳವಳಿ ನಡೆಸಲು ಪ್ರೇರೇಪಿಸುತ್ತಾರೆ. ಅಷ್ಟೇ ಅಲ್ಲ. ಹಲವಾರು ಚಳವಳಿಗಳಲ್ಲಿ ಸ್ವಯಂ ಭಾಗವಹಿಸಿ ಸರಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಮಾಡುತ್ತಾರೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿದ್ದ ಮಹಿಳಾ ಗುಂಪುಗಳೊಂದಿಗೆ ಕೆಲಸ ಮಾಡಿದ್ದನ್ನು ಸ್ಮರಿಸಿಕೊಳ್ಳುವ ಅವರು ಗ್ರಾಮೀಣ ಭಾಗದ ಮಹಿಳೆಯರಿಂದಲೇ ತಾವು ಬಹಳಷ್ಟು ಕಲಿತಿದುದಾಗಿ ಹೇಳಿಕೊಳ್ಳುತ್ತಾರೆ.

ಮಹಿಳಾ ಚಳವಳಿಗಳು ಮಹಿಳಾ ಚಿಂತನೆಯನ್ನು ಕಟ್ಟಿ ಬೆಳೆಸುವಲ್ಲಿ ಸಹಾಯ ಮಾಡಿದ್ದನ್ನು ವೀಣಾ ಪ್ರಾಂಜಲ ಮನಸ್ಸಿನಿಂದ ತಮ್ಮ ಆತ್ಮಕಥೆಯ ಉದ್ದಕ್ಕೂ ಸ್ಮರಿಸಿದ್ದಾರೆ. ಅದರೊಟ್ಟಿಗೆ ಮಹಿಳಾ ಹೋರಾಟಗಾರ್ತಿ ರಾಜಕಾರಣಿಗಳಾಗಿದ್ದ ಸುಶೀಲಾ ಗೋಪಾಲನ್, ಅರುಣಾ ಆಸಿಫ್ ಅಲಿ ಮುಂತಾದವರೊಂದಿಗೆ ಸೇರಿ ಮಹಿಳಾ ಚಳವಳಿ ಮುನ್ನಡೆಸಿದ್ದನ್ನು ನೆನಪಿಸಿಕೊಳ್ಳಲು ಮರೆಯುವುದಿಲ್ಲ.

        ವೀಣಾರ ಈ ಆತ್ಮಚರಿತ್ರೆ ವ್ಯಕ್ತಿಯೊಬ್ಬರ ಜೀವನಗಾಥೆಯಾಗಿ ಮಾತ್ರ ಉಳಿದುಕೊಂಡಿಲ್ಲ. ಅದು ಸ್ವಾತಂತ್ರೋತ್ತರ ಭಾರತದಲ್ಲಿ ಬೆಳೆದು ಬಂದ ಮಹಿಳಾ ಚಳವಳಿ ಮತ್ತು ಮಹಿಳಾ ಅಧ್ಯಯನದ ಹೆಜ್ಜೆ ಗುರುತು ಆಗಿ ಚಿರಸ್ಥಾಯಿಯಾಗುವ ಕ್ಷಮತೆ ಹೊಂದಿದೆ. ಚರಿತ್ರೆಯ ಪುಸ್ತಕಗಳಲ್ಲಿ ದೊರೆಯದ ನೈಜ ಚರಿತ್ರೆ ಇಲ್ಲಿದೆ. ಆ ಅರ್ಥದಲ್ಲಿ ಮಹಿಳಾ ಹೋರಾಟಗಾರ್ತಿಯರು ಮತ್ತು ಅಕಾಡಮಿಷಿಯನ್‌ಗಳಿಗೆ ಇದೊಂದು ಆಕರ ಕೃತಿಯೇ ಸರಿ. ಇಂಥದೊಂದು ಮಹತ್ವದ ಕೃತಿ ಕನ್ನಡಕ್ಕೆ ಬರದಿದ್ದರೆ ಬಹಳ ದೊಡ್ಡ ಹಾನಿಯಂತೂ ಆಗುತ್ತಿತ್ತು. ಈ ಹಾನಿಯಿಂದ ಕನ್ನಡ ಸಾರಸ್ವತ ಮತ್ತು ಚಳವಳಿ ಲೋಕವನ್ನು ತಮ್ಮ ಆಪ್ತ ಅನುವಾದ ಕೈಂಕರ್ಯದಿಂದ ಗಾಯತ್ರಿ ತಪ್ಪಿಸಿದ್ದಾರೆ. ಗಾಯತ್ರಿ ಅವರ ಬರಹಕ್ಕೆ ಆಪ್ತತೆಯೊಂದಿಗೆ ಸ್ಪಷ್ಟತೆಯೂ ಇದೆ. ಎಡವಾದಿ ಚಿಂತನೆಯ ದಣಿವರಿಯದ ಪಯಣ ಅವರ ಲೆಕ್ಕಣಿಕೆಯನ್ನು ನಿಶಿತಗೊಳಿಸಿದೆ. ಇನ್ನೋರ್ವ ಮಹಿಳಾ ಹೋರಾಟಗಾರ್ತಿ ಕೆ.ಎಸ್. ವಿಮಲಾ ಇದಕ್ಕೊಂದು ನುಡಿ ತೋರಣ ಕಟ್ಟಿದ್ದಾರೆ. ಇತ್ತೀಚೆಗೆ ನಾನು ಓದಿದ ಆತ್ಮಚರಿತ್ರೆಗಳಲ್ಲಿಯೇ ‘‘ಉರುಳುವ ಕಲ್ಲಿನ ನನೆಪಿನ ಸುರುಳಿ’’ ಅಪರೂಪದ ಆದರೆ ಅಷ್ಟೇ ಮಹತ್ವದ ಕೃತಿ ಎಂಬುದು ನನ್ನ ಅನಿಸಿಕೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News