‘ಪ್ರಿಚರ್ಡ್ ಕೊಲೊನ್ ನಿಯಮ’: ದುರಂತ ರ್ಯಾ ಬಿಟ್ ಪಂಚ್ ಘಟನೆ ಬಾಕ್ಸಿಂಗ್ ಸುರಕ್ಷತೆಯನ್ನು ಬದಲಾಯಿಸಿದ್ದು ಹೇಗೆ?

Update: 2026-08-15 00:03 IST
Photo Credit: @prichardcolon on Instagram

ಪೋರ್ಟೊ ರಿಕೊ ದೇಶದ ಮಾಜಿ ಸೂಪರ್ ವೆಲ್ಟರ್ವೇಟ್ ಬಾಕ್ಸಿಂಗ್ ಪಟು ಪ್ರಿಚರ್ಡ್ ಕೊಲೊನ್ ತಮ್ಮ 33ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 2015ರ ಪಂದ್ಯವೊಂದರಲ್ಲಿ ಸಂಭವಿಸಿದ ಗಂಭೀರ ಮೆದುಳಿನ ಗಾಯದಿಂದಾಗಿ, ಅವರು ಕಳೆದ 11 ವರ್ಷಗಳಿಂದ ಕೋಮಾದಲ್ಲಿದ್ದು, ಕುಟುಂಬದ ಆರೈಕೆಯಲ್ಲಿದ್ದರು. ಅವರು 2026ರ ಆಗಸ್ಟ್ 13ರಂದು ಕೊನೆಯುಸಿರೆಳೆದಿದ್ದಾರೆ ಎಂದು ಅವರ ತಂದೆ ರಿಚರ್ಡ್ ಕೊಲೊನ್ ಸಾಮಾಜಿಕ ಮಾಧ್ಯಮದಲ್ಲಿ ಖಚಿತಪಡಿಸಿದ್ದಾರೆ.

►ವರ್ಜಿನಿಯಾದಲ್ಲಿ ನಡೆದ 2015ರ ಆ ದುರಂತ ಪಂದ್ಯ

ಬಾಕ್ಸಿಂಗ್ ರಂಗದಲ್ಲಿ ಪ್ರಿಚರ್ಡ್ ಕೊಲೊನ್ ಉದಯೋನ್ಮುಖ ತಾರೆಯಾಗಿ ಹೊರಹೊಮ್ಮಿದ್ದರು. 2015ರ ಅಕ್ಟೋಬರ್ 17ರಂದು ವರ್ಜಿನಿಯಾದ ಫೇರ್ಫ್ಯಾಕ್ಸ್ನಲ್ಲಿ ಅಮೆರಿಕದ ಟೆರೆಲ್ ವಿಲಿಯಮ್ಸ್ ವಿರುದ್ಧದ ಪಂದ್ಯಕ್ಕೆ ಇಳಿಯುವ ಮುನ್ನ, ಕೊಲೊನ್ 16–0 ಜಯದ (13 KOs) ದಾಖಲೆ ಹೊಂದಿದ್ದರು.

ಆ ಪಂದ್ಯದ ಉದ್ದಕ್ಕೂ ಎದುರಾಳಿ ಆಟಗಾರ ಕೊಲೊನ್ ಅವರ ತಲೆಯ ಹಿಂಭಾಗಕ್ಕೆ ಅಕ್ರಮವಾಗಿ ಮುಷ್ಟಿ ಪೆಟ್ಟುಗಳನ್ನು (‘ರ್ಯಾ ಬಿಟ್ ಪಂಚ್’) ನೀಡುತ್ತಿದ್ದರು. ಕೊಲೊನ್ ಈ ಬಗ್ಗೆ ರೆಫರಿಗೆ ಪದೇ ಪದೇ ದೂರು ನೀಡಿದ್ದರು. ಒಂಭತ್ತನೇ ರೌಂಡ್ ಮುಗಿದ ತಕ್ಷಣ, ಕೊಲೊನ್ ಅವರ ತರಬೇತುದಾರರು ಪಂದ್ಯ ಮುಗಿಯಿತೆಂದು ಭಾವಿಸಿ ಆಕಸ್ಮಿಕವಾಗಿ ಅವರ ಗ್ಲೌಸ್ ತೆಗೆದರು. ಇದರಿಂದಾಗಿ ಅವರನ್ನು ಅನರ್ಹಗೊಳಿಸಿ ಎದುರಾಳಿಯನ್ನು ವಿಜೇತ ಎಂದು ಘೋಷಿಸಲಾಯಿತು.

ಪಂದ್ಯ ಮುಗಿದು ರಿಂಗ್ನಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಕೊಲೊನ್ ಗೆ ತೀವ್ರ ತಲೆಸುತ್ತು ಮತ್ತು ವಾಂತಿ ಕಾಣಿಸಿಕೊಂಡು ಕುಸಿದುಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿನಲ್ಲಿ ಉಂಟಾದ ತೀವ್ರ ರಕ್ತಸ್ರಾವದಿಂದ (ಸಬ್ಡ್ಯೂರಲ್ ಹೆಮಟೋಮಾ) ಉಂಟಾದ ಒತ್ತಡವನ್ನು ಕಡಿಮೆ ಮಾಡಲು ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿದರು.

►‘ರ್ಯಾ ಬಿಟ್ ಪಂಚ್’ ಅಪಾಯಗಳು

ಮಾನವನ ತಲೆಬುರುಡೆಯು ಕುತ್ತಿಗೆಯ ಬುಡದಲ್ಲಿ, ಅಂದರೆ ಬೆನ್ನುಮೂಳೆಯು ಮೆದುಳಿನ ಕಾಂಡಕ್ಕೆ (ಬ್ರೇನ್ಸ್ಟೆಮ್) ಸಂಪರ್ಕ ಹೊಂದುವ ಜಾಗದಲ್ಲಿ ಅತಿ ಕಡಿಮೆ ರಕ್ಷಣೆ ನೀಡುತ್ತದೆ. ಈ ಭಾಗಕ್ಕೆ ಬೀಳುವ ಪೆಟ್ಟುಗಳು ಮೆದುಳಿನ ಅಂಗಾಂಶಗಳಿಗೆ ಶಾಶ್ವತ ಹಾನಿ, ಮೆದುಳಿನಲ್ಲಿ ರಕ್ತಸ್ರಾವ ಹಾಗೂ ಪಾರ್ಶ್ವವಾಯುವಿಗೆ ಕಾರಣವಾಗುವ ತೀವ್ರ ಅಪಾಯವನ್ನು ಹೊಂದಿರುತ್ತವೆ.

►ತೀರ್ಪುಗಾರರ ನಿರ್ಲಕ್ಷ್ಯ:

ಬಾಕ್ಸಿಂಗ್ ನಿಯಮಗಳ ಪ್ರಕಾರ ತಲೆಯ ಹಿಂಭಾಗಕ್ಕೆ ಹೊಡೆಯುವುದು ಸರಿಯಲ್ಲದಿದ್ದರೂ, ಹಿಂದೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ. ರೆಫರಿಗಳು ಕಠಿಣ ಕ್ರಮ ಕೈಗೊಳ್ಳುವ ಬದಲು ಕೇವಲ ಮೌಖಿಕ ಎಚ್ಚರಿಕೆ ನೀಡಿ ಬಿಡುತ್ತಿದ್ದರು.

►ದಶಕದ ಹೋರಾಟ ಮತ್ತು ಶಾಶ್ವತ ನೆನಪು

ಕೊಲೊನ್ 221 ದಿನಗಳ ಕಾಲ ಕೋಮಾದಲ್ಲಿದ್ದರು. ತೀವ್ರ ಮೆದುಳಿನ ಹಾನಿಯಿಂದಾಗಿ ಅವರು ಸಂಪೂರ್ಣವಾಗಿ ಅಂಗವಿಕಲರಾದರು. ಸ್ವತಃ ನಡೆಯಲು ಅಥವಾ ಮಾತನಾಡಲು ಸಾಧ್ಯವಾಗದೆ, ಪೋಷಕರಾದ ನೀವ್ಸ್ ಮತ್ತು ರಿಚರ್ಡ್ ಅವರ ಸಂಪೂರ್ಣ ಆರೈಕೆಯಲ್ಲಿ ಕಾಲ ಕಳೆದರು.

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕ್ರೀಡಾ ವಲಯ ಕಣ್ಣೀರು ಹಾಕಿತು. ವರ್ಲ್ಡ್ ಬಾಕ್ಸಿಂಗ್ ಆರ್ಗನೈಸೇಶನ್ (WBO) ತನ್ನ ಅಧಿಕೃತ ಹೇಳಿಕೆಯಲ್ಲಿ, “ಕೊಲೊನ್ ಕೊನೆಯವರೆಗೂ ಹೋರಾಡಿದ ಧೀರ. ಅವರ ಧೈರ್ಯ ಮತ್ತು ಹೋರಾಟದ ಮನೋಭಾವ ರಿಂಗ್ಗಿಂತ ಮಿಗಿಲಾದದ್ದು” ಎಂದು ಗೌರವ ಸಲ್ಲಿಸಿದೆ.

►ಬಾಕ್ಸಿಂಗ್ ಮಂಡಳಿಯ ನಿರ್ಧಾರ: WBCಯ ಶೂನ್ಯ ಸಹಿಷ್ಣುತಾ ನೀತಿ

ಈ ದುರಂತದ ನಂತರ ಬಾಕ್ಸಿಂಗ್ ಪಂದ್ಯಗಳ ತೀರ್ಪುಗಾರರ ಮಾನದಂಡಗಳು ಮತ್ತು ವೈದ್ಯಕೀಯ ರಕ್ಷಣೆಯ ಕುರಿತು ವ್ಯಾಪಕ ಚರ್ಚೆಗಳು ನಡೆದವು. ಇದರ ಪರಿಣಾಮವಾಗಿ, ಮುಂದಿನ ಬಾಕ್ಸರ್ಗಳನ್ನು ರಕ್ಷಿಸಲು ವರ್ಲ್ಡ್ ಬಾಕ್ಸಿಂಗ್ ಕೌನ್ಸಿಲ್ (WBC) 2016ರಲ್ಲಿ ಅಧಿಕೃತವಾಗಿ ‘ಪ್ರಿಚರ್ಡ್ ಕೊಲೊನ್ ನಿಯಮ’ ಜಾರಿಗೆ ತಂದಿತು.

ಈ ನಿಯಮದಡಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಯಿತು:

ಪೂರ್ವ ಸೂಚನೆ: ಪಂದ್ಯಕ್ಕೂ ಮುನ್ನವೇ ರೆಫರಿಗಳು ಆಟಗಾರರಿಗೆ ರ್ಯಾ ಬಿಟ್ ಪಂಚ್ನಿಂದಾಗುವ ನರಮಂಡಲದ ಅಪಾಯಗಳ ಬಗ್ಗೆ ಸ್ಪಷ್ಟವಾಗಿ ಎಚ್ಚರಿಸಬೇಕು.

►ತಕ್ಷಣದ ಕ್ರಮ:

ತಲೆಯ ಹಿಂಭಾಗಕ್ಕೆ ಹೊಡೆಯುವ ಆಟಗಾರರಿಗೆ ತಕ್ಷಣವೇ ಅಧಿಕೃತ ಎಚ್ಚರಿಕೆ ನೀಡುವುದು, ಪಾಯಿಂಟ್ ಕಡಿತಗೊಳಿಸುವುದು ಅಥವಾ ಪಂದ್ಯದಿಂದ ಅನರ್ಹಗೊಳಿಸಲು ರೆಫರಿಗೆ ಅಧಿಕಾರ ನೀಡಲಾಯಿತು.

►ವೈದ್ಯಕೀಯ ತಪಾಸಣೆ:

ಪೆಟ್ಟು ತಿಂದ ಆಟಗಾರನಿಗೆ ಚೇತರಿಸಿಕೊಳ್ಳಲು ಸಮಯ ನೀಡಲಾಗುತ್ತದೆ ಮತ್ತು ವೈದ್ಯರು ತಕ್ಷಣವೇ ಅವರ ತಪಾಸಣೆ ನಡೆಸಲು ಅವಕಾಶ ನೀಡಲಾಗುತ್ತದೆ.

2021ರಲ್ಲಿ WBC ಅಧ್ಯಕ್ಷ ಮೌರೀಸಿಯೊ ಸುಲೈಮಾನ್ ಅವರು ಪ್ರಿಚರ್ಡ್ ಕೊಲೊನ್ ಅವರಿಗೆ ಗೌರವಪೂರ್ವಕವಾಗಿ ‘WBC World Champion’ ಬೆಲ್ಟ್ ನೀಡಿ, ಅವರನ್ನು ಜೀವಮಾನ ಗೌರವ ಚಾಂಪಿಯನ್ ಎಂದು ಘೋಷಿಸಿದರು.

ಸೌಜನ್ಯ: english.mathrubhumi.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News