Ice cream ತಿಂದಾಗ ಕೆಲ ಕ್ಷಣ ಬ್ರೇನ್ ಫ್ರೀಝ್ ಆಗುವುದು ಏಕೆ?
ಸಾಂದರ್ಭಿಕ ಚಿತ್ರ(AI)
ಬಹಳಷ್ಟು ಮಂದಿಗೆ Ice cream ಅಥವಾ ತಂಪು ತಿನಿಸುಗಳನ್ನು ಆನಂದಿಸುತ್ತಿರುವಾಗ ಬ್ರೇನ್ ಫ್ರೀಝ್ ಆದ ಅನುಭವವಾಗುತ್ತದೆ. ಆದರೆ ಹೀಗೇಕಾಗುತ್ತದೆ?
ಐಸ್ಕ್ರೀಮ್ ಸೇವನೆಯಿಂದ ತಲೆನೋವು ಬರುತ್ತದೆ ಎನ್ನುವುದು ನಿಮಗೆ ಗೊತ್ತೆ? ಈ ಐಸ್ಕ್ರೀಮ್ಗೆ ಸಂಬಂಧಿಸಿದ ತಲೆನೋವನ್ನು ಬ್ರೇನ್ ಫ್ರೀಝ್ ಎಂದು ಕರೆಯುತ್ತೇವೆ. ಬಹಳಷ್ಟು ಮಂದಿಗೆ Ice cream ಆನಂದಿಸುತ್ತಿರುವಾಗ ಹೀಗಾಗುತ್ತದೆ. ಆದರೆ ಹೀಗೆ Ice cream ತಿಂದ ತಕ್ಷಣ ತಲೆ ನೋವಾಗಲು ಕಾರಣವೇನು ಎಂದು ಯೋಚಿಸಿದ್ದೀರಾ?
►ಐಸ್ ಕ್ರೀಮ್ ನಿಂದ ಬ್ರೇನ್ ಫ್ರೀಝ್ ಆಗುವುದೇಕೆ?
ಬ್ರೇನ್ ಫ್ರೀಝ್ ಎಂದರೆ Ice cream, ಐಸ್ ಕ್ಯೂಬ್ಗಳು, ಐಸ್ ಪಾಪಿಕಲ್ಸ್ ಅಥವಾ ಹೆಪ್ಪುಗಟ್ಟಿದ ಅಥವಾ ಶೈತ್ಯೀಕರಿಸಿದ ಪಾನೀಯಗಳಂತಹ ತಣ್ಣನೆಯ ಆಹಾರವನ್ನು ತಿನ್ನುವಾಗ ಅಥವಾ ಕುಡಿಯುವಾಗ ತಲೆಯಲ್ಲಿ ಉಂಟಾಗುವ ತೀವ್ರವಾದ ನೋವಿನ ಸಂವೇದನೆ. ಇದೇನೂ ಗಂಭೀರವಾಗಿರುವುದಿಲ್ಲ. ಕೆಲವು ಸೆಕೆಂಡುಗಳು ಅಥವಾ ನಿಮಿಷಗಳಲ್ಲಿ ಹೋಗುತ್ತದೆ. ಬ್ರೇನ್ ಫ್ರೀಝ್ ಗೆ ವೈಜ್ಞಾನಿಕ ಪದ ಸ್ಫೆನೋಪ್ಯಾಲಟೈನ್ ಗ್ಯಾಂಗ್ಲಿಯೊನ್ಯೂರಾಲ್ಜಿಯ ಎಂದಾಗಿರುತ್ತದೆ.
ಹಾರ್ವರ್ಡ್ ಹೆಲ್ತ್ನ ವರದಿಯ ಪ್ರಕಾರ, ತಣ್ಣನೆಯ ಆಹಾರವನ್ನು ಹಠಾತ್ತಾಗಿ ಸೇವಿಸುವುದರಿಂದ ಬಾಯಿಯ ಮೇಲ್ಭಾಗ ಮತ್ತು ಗಂಟಲಿನ ಹಿಂಭಾಗದ ಉಷ್ಣತೆಯು ತೀವ್ರವಾಗಿ ಕಡಿಮೆಯಾದಾಗ ಬ್ರೇನ್ ಫ್ರೀಝ್ ಆಗುತ್ತದೆ. ಇದರಿಂದ ಚೈನ್ ರಿಯಾಕ್ಷನ್ ಆಗಿಬಿಡುತ್ತದೆ. ಬಾಯಿಯ ಮೇಲ್ಭಾಗದಲ್ಲಿರುವ ರಕ್ತನಾಳಗಳು ವೇಗವಾಗಿ ಕಿರಿದಾಗುತ್ತವೆ ಮತ್ತು ಮೆದುಳಿನ ಆರ್ಟರಿಗಳು (artery) ಹಿಗ್ಗಿಬಿಡುವಂತೆ ಪ್ರಚೋದಿಸುತ್ತವೆ.
ನಿಖರವಾಗಿ ದೇಹದಲ್ಲಿ ಆಗುವ ಬದಲಾವಣೆಯ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಆದರೆ, ಆರ್ಟರಿ ವಾಲ್ನ (artery wall) ಹಠಾತ್ ಹಿಗ್ಗುವಿಕೆಯು, ನರ ಮುಖ ಮತ್ತು ತಲೆಯಿಂದ ಸಂವೇದನಾ ಮಾಹಿತಿಯನ್ನು ಮೆದುಳಿಗೆ ರವಾನಿಸುವ ಟ್ರೈಜಿಮಿನಲ್ ನರವನ್ನು ಸಕ್ರಿಯಗೊಳಿಸುವ ಸಾಧ್ಯತೆಯಿದೆ.
►ಬ್ರೇನ್ ಫ್ರೀಝ್ ಆಗದಂತೆ ತಡೆಯುವುದು ಹೇಗೆ?
ಬ್ರೇನ್ ಫ್ರೀಝ್ ಸಾಮಾನ್ಯವಾಗಿ 30 ಸೆಕೆಂಡುಗಳಲ್ಲಿ ಕಣ್ಮರೆಯಾಗಿಬಿಡುತ್ತದೆ. ಆದರೆ ವೇಗವಾಗಿ ನಿವಾರಿಸಬೇಕೆಂದರೆ ನಿಮ್ಮ ನಾಲಿಗೆ ಅಥವಾ ಹೆಬ್ಬೆರಳನ್ನು ನಿಮ್ಮ ಬಾಯಿಯ ಮೇಲ್ಭಾಗಕ್ಕೆ ತಳ್ಳಬಹುದು. ಹಾಗೆ ಮಾಡುವುದರಿಂದ ಆ ಪ್ರದೇಶ ಬೆಚ್ಚಗಾಗಲು ಸಹಾಯವಾಗುತ್ತದೆ. ಅಥವಾ Ice cream ಅನ್ನು ನಿಧಾನವಾಗಿ ತಿನ್ನಬಹುದು.
►ಯಾರಿಗೆ ಬ್ರೇನ್ ಫ್ರೀಝ್ ಅಪಾಯವಿದೆ?
ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಯಾರಿಗೇ ಆದರೂ ಈ ಸಮಸ್ಯೆ ಬರಬಹುದು. ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳು Ice cream ನಿಧಾನವಾಗಿ ತಿನ್ನುವುದನ್ನು ಕಲಿತಿಲ್ಲದೆ ಇರಬಹುದು. ಮೈಗ್ರೇನ್ ಸಮಸ್ಯೆ ಇದ್ದವರಲ್ಲಿ ಬ್ರೇನ್ ಫ್ರೀಝ್ ಹೆಚ್ಚಾಗಿ ಕಂಡುಬರುತ್ತದೆ.
►ಬ್ರೇನ್ ಫ್ರೀಝ್ ಮತ್ತು ಇತರ ತಲೆನೋವಿನ ನಡುವಿನ ವ್ಯತ್ಯಾಸವೇನು?
ಇತರ ತಲೆನೋವು ಗಂಭೀರ ಲಕ್ಷಣಗಳನ್ನು ಹೊಂದಿರುತ್ತವೆ. ಆದರೆ ಬ್ರೇನ್ ಫ್ರೀಝ್ ಆಕಸ್ಮಿಕವಾಗಿ ಬಂದು ಹೋಗುತ್ತದೆ. ಉದಾಹರಣೆಗೆ, ಮೈಗ್ರೇನ್ ಇದ್ದಾಗ ವಾಕರಿಕೆ ಸಮಸ್ಯೆ ಇರಬಹುದು. ಇನ್ನು ಕೆಲವು ತಲೆನೋವುಗಳ ಸಂದರ್ಭದಲ್ಲಿ ಪ್ರಕಾಶಮಾನ ಬೆಳಕು ಅಥವಾ ದೊಡ್ಡ ಧ್ವನಿ ಸಹಿಸಲು ಕಷ್ಟವಾಗಬಹುದು. ಆದರೆ ಬ್ರೇನ್ ಫ್ರೀಝ್ ಸಂದರ್ಭದಲ್ಲಿ ಈ ಸಮಸ್ಯೆಗಳು ಇರುವುದಿಲ್ಲ.
ಸೂಚನೆ: ಈ ಲೇಖನವನ್ನು ಮಾಧ್ಯಮಗಳ ಮೂಲದಿಂದ ಪಡೆದ ಮಾಹಿತಿಯಿಂದ ಬರೆಯಲಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ವೈದ್ಯಕೀಯ ಪ್ರಶ್ನೆಗಳಿದ್ದರೆ ಯಾವಾಗಲೂ ನಿಮ್ಮ ವಿಶ್ವಾಸಾರ್ಹ ವೃತ್ತಿಪರ ವೈದ್ಯರನ್ನು ಸಂಪರ್ಕಿಸಿ.