×
Ad

ಮೊಬೈಲ್ ಸಂಖ್ಯೆ ನೀಡದೆಯೇ ಚಾಟ್ ಮಾಡಿ; ವಾಟ್ಸ್‌ಆ್ಯಪ್ ತರುತ್ತಿದೆ ಹೊಸ ಫೀಚರ್

Update: 2026-06-30 20:19 IST

Photo Credit : WhatsApp

ವಾಟ್ಸ್‌ಆ್ಯಪ್ CEO ಕುಣಾಲ್ ಶಾ ಪ್ರಮುಖ ಗೌಪ್ಯತೆ-ಕೇಂದ್ರಿತ ಅಪ್‌ಡೇಟ್‌ ಗಳಲ್ಲಿ ಒಂದಾಗಿ ಬಳಕೆದಾರರ ಹೆಸರುಗಳ ಮೂಲಕ ವಾಟ್ಸ್‌ಆ್ಯಪ್ ಬಳಕೆಯ ಹೊಸ ಫೀಚರ್ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.

ವಾಟ್ಸ್‌ಆ್ಯಪ್ ಇದೀಗ ನಮ್ಮ ದೈನಂದಿನ ಜೀವನದ ಅಂಗವಾಗಿದೆ. ಸಂಭಾಷಣೆ ಪ್ರಾರಂಭಿಸುವುದು ಎಂದರೆ ಫೋನ್ ಸಂಖ್ಯೆಯನ್ನು ಹಂಚಿಕೊಳ್ಳುವುದು ಎಂದರ್ಥ. ಹೊಸ ವ್ಯಕ್ತಿಯೊಂದಿಗೆ ಮಾತನಾಡುವುದು ಎಂದರೆ ವೈಯಕ್ತಿಕ ಫೋನ್ ಸಂಖ್ಯೆಯನ್ನು ಮೊದಲೇ ನೀಡಬೇಕಾಗುತ್ತದೆ. ಆದರೆ ಈ ಸಮಸ್ಯೆಗೆ ವಾಟ್ಸ್‌ಆ್ಯಪ್ ಕೊನೆಗೂ ಪರಿಹಾರ ನೀಡಿದೆ.

ವಾಟ್ಸ್‌ಆ್ಯಪ್ CEO ಕುಣಾಲ್ ಶಾ, ಪ್ರಮುಖ ಗೌಪ್ಯತೆ-ಕೇಂದ್ರಿತ ಅಪ್‌ಡೇಟ್‌ ಗಳಲ್ಲಿ ಒಂದಾಗಿ ಬಳಕೆದಾರರ ಹೆಸರುಗಳ (unique username) ಮೂಲಕ ವಾಟ್ಸ್‌ಆ್ಯಪ್ ಬಳಕೆಗೆ ಅವಕಾಶ ಮಾಡಿಕೊಡುವ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.

ಪ್ರತಿಯೊಬ್ಬರೂ ತಮಗಾಗಿ ಒಂದು ವಿಶಿಷ್ಟ ಬಳಕೆದಾರ ಹೆಸರನ್ನು ಆಯ್ಕೆ ಮಾಡಿಕೊಳ್ಳುವ ಹೊಸ ವ್ಯವಸ್ಥೆಯನ್ನು ಕಂಪನಿ ಪರಿಚಯಿಸುತ್ತಿದ್ದು, ಅಗತ್ಯವಿದ್ದರೆ ಮೆಟಾ ಮಾಲೀಕತ್ವದ ಇತರ ವೇದಿಕೆಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಬಳಕೆಗೂ ಈ ಬಳಕೆದಾರ ಹೆಸರನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಮೆಟಾ ಮಾಲೀಕತ್ವದ ಸಂದೇಶ ವಿನಿಮಯ ವೇದಿಕೆಯಾದ ವಾಟ್ಸ್‌ಆ್ಯಪ್ ಅಧಿಕೃತವಾಗಿ ಘೋಷಿಸಿರುವ ಪ್ರಕಾರ, ಜನರು ತಮ್ಮ ಮೊಬೈಲ್ ಸಂಖ್ಯೆಯ ಬದಲಿಗೆ ಈ ಬಳಕೆದಾರ ಹೆಸರನ್ನು ಬಳಸಿಕೊಂಡು ಸಂಪರ್ಕ ಸಾಧಿಸಲು ಅನುವು ಮಾಡಿಕೊಡಲಾಗುತ್ತದೆ. ಬಳಕೆದಾರ ಹೆಸರನ್ನು ನೀವು ಈಗಾಗಲೇ ಮನಸ್ಸಿನಲ್ಲಿಟ್ಟುಕೊಂಡಿದ್ದರೆ, ಅದನ್ನು ಕಾಯ್ದಿರಿಸಲು ವಾಟ್ಸ್‌ಆ್ಯಪ್ ಅವಕಾಶ ನೀಡಿದೆ.

2026ರ ಕೊನೆಗೆ ಈ ವೈಶಿಷ್ಟ್ಯವನ್ನು ವ್ಯಾಪಕವಾಗಿ ಬಿಡುಗಡೆ ಮಾಡುವ ಮುನ್ನ, ಜೂನ್ 29ರಿಂದ ವಾಟ್ಸ್‌ಆ್ಯಪ್ ನಿಮ್ಮ ಬಳಕೆದಾರ ಹೆಸರನ್ನು ಕಾಯ್ದಿರಿಸಲು ಅವಕಾಶ ಕಲ್ಪಿಸಿದೆ. ಆಯ್ಕೆಯು ತಮ್ಮ ಪ್ರದೇಶದಲ್ಲಿ ಲಭ್ಯವಾದಾಗ ಬಳಕೆದಾರರು ಅಪ್ಲಿಕೇಶನ್‌ನೊಳಗೆ ಅಧಿಸೂಚನೆ ಸ್ವೀಕರಿಸುತ್ತಾರೆ.

ಈ ಕುರಿತು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿರುವ ಕುಣಾಲ್ ಶಾ, "ಸಮಯವೇ ಎಲ್ಲವೂ. ನಾನು ನನ್ನ ಬಳಕೆದಾರ ಹೆಸರನ್ನು ಜಗತ್ತಿಗೆ ಬಿಡುಗಡೆ ಮಾಡುವ ಮೊದಲು ವಾಟ್ಸ್‌ಆ್ಯಪ್‌ಗೆ ಬೇಗನೇ ಸೇರಿಕೊಂಡೆ. ನಿಮ್ಮ ಬಳಕೆದಾರ ಹೆಸರನ್ನು ಪಡೆಯುವ ಸಮಯ ಬಂದಿದೆ" ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ನೆಚ್ಚಿನ ಹೆಸರುಗಳು ಲಭ್ಯವಿಲ್ಲದಂತೆ ಆಗುವ ಮೊದಲು ಅವುಗಳನ್ನು ಕಾಯ್ದಿರಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದಾರೆ.

ಬಳಕೆದಾರ ಹೆಸರನ್ನು ಕಾಯ್ದಿರಿಸುವುದು ಹೇಗೆ?

• ಬಳಕೆದಾರರು ತಮ್ಮ ವಾಟ್ಸ್‌ಆ್ಯಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳಬೇಕು.

• ನಂತರ ಸೆಟ್ಟಿಂಗ್ಸ್‌ಗೆ (Settings) ಹೋಗಬೇಕು.

• ಅಲ್ಲಿ ಖಾತೆ (Account) ಆಯ್ಕೆಗೆ ತೆರಳಬೇಕು.

• ಅಲ್ಲಿ ನಿಮಗೆ ಬಳಕೆದಾರ ಹೆಸರು (Username) ಎನ್ನುವ ಆಯ್ಕೆ ಲಭ್ಯವಿರುತ್ತದೆ.

• ಅದರಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಲಭ್ಯವಿರುವ ಆಯ್ಕೆಯನ್ನು ಖಚಿತಪಡಿಸಿ ದೃಢೀಕರಿಸಬೇಕು. ಇದೀಗ ಬಳಕೆದಾರ ಹೆಸರನ್ನು ಮುಂಗಡವಾಗಿ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ವರ್ಷಾಂತ್ಯದಲ್ಲಿ ಬಳಕೆದಾರ ಹೆಸರು ವೈಶಿಷ್ಟ್ಯ ಲಭ್ಯವಾಗುವ ಸಾಧ್ಯತೆಯಿದೆ.

ವಾಟ್ಸ್‌ಆ್ಯಪ್ ಬಳಕೆದಾರ ಹೆಸರನ್ನು ಪರಿಚಯಿಸಿರುವುದೇಕೆ?

ಕಂಪನಿಯ ಪ್ರಕಾರ, ಮುಖ್ಯ ಕಾರಣ ಗೌಪ್ಯತೆ. ಜನರು ತಮ್ಮ ವೈಯಕ್ತಿಕ ಫೋನ್ ಸಂಖ್ಯೆಗಳನ್ನು ಬಹಿರಂಗಪಡಿಸದೆ ಸಂಪರ್ಕದಲ್ಲಿರಲು ಬಯಸುವ ಸಂದರ್ಭಗಳು ಸಾಕಷ್ಟಿರುತ್ತವೆ. ಹೊಸ ಪರಿಚಯದ ಸಂದರ್ಭದಲ್ಲಿ ಫೋನ್ ಸಂಖ್ಯೆ ನೀಡಲು ಬಯಸದಿದ್ದರೆ, ವಾಟ್ಸ್‌ಆ್ಯಪ್ ಬಳಕೆದಾರ ಹೆಸರನ್ನು ನೀಡಿ ಸಂಪರ್ಕದಲ್ಲಿರಬಹುದು. ಹಾಗೆಂದು ವಾಟ್ಸ್‌ಆ್ಯಪ್ ಮತ್ತೊಂದು ಸಾಮಾಜಿಕ ಮಾಧ್ಯಮವಾಗುತ್ತದೆ ಎಂದುಕೊಳ್ಳಬೇಕಾಗಿಲ್ಲ. ಗೌಪ್ಯತೆಗಾಗಿ ಬಳಕೆದಾರ ಹೆಸರನ್ನು ಪರಿಚಯಿಸಲಾಗಿದೆ ಎಂದು ಕಂಪನಿ ಹೇಳಿದೆ.

ಇನ್‌ಸ್ಟಾಗ್ರಾಂ ಅಥವಾ ಎಕ್ಸ್‌ಗಿಂತ ಭಿನ್ನವಾಗಿ, ಜನರು ಬಳಕೆದಾರ ಹೆಸರನ್ನು ಬ್ರೌಸ್ ಮಾಡುವ ಡೈರೆಕ್ಟರಿಯನ್ನು ಒದಗಿಸಲಾಗುವುದಿಲ್ಲ. ಅಥವಾ ವಾಟ್ಸ್‌ಆ್ಯಪ್ ಇತರರಿಗೆ ಬಳಕೆದಾರ ಹೆಸರುಗಳನ್ನು ಸೂಚಿಸುವುದಿಲ್ಲ. ಬದಲಾಗಿ, ಮೊದಲ ಬಾರಿಗೆ ಸಂದೇಶ ಕಳುಹಿಸಬೇಕೆಂದರೆ ನಿಮ್ಮ ನಿಖರವಾದ ಬಳಕೆದಾರ ಹೆಸರು ಮತ್ತು ವಿಶಿಷ್ಟ ಕೀಯನ್ನು ತಿಳಿದಿರಬೇಕಾಗುತ್ತದೆ.

ವಾಟ್ಸ್‌ಆ್ಯಪ್ ಬಳಕೆದಾರರ ವಿಶಿಷ್ಟ ಕೀ ಎಂದರೇನು?

ವಾಟ್ಸ್‌ಆ್ಯಪ್ ಬಳಕೆದಾರ ಹೆಸರು ಕೀ ಎಂಬ ಎರಡನೇ ಹಂತದ ರಕ್ಷಣೆಯನ್ನು ಒದಗಿಸಲಾಗುತ್ತದೆ. ಈ ಐಚ್ಛಿಕ ಭದ್ರತಾ ವೈಶಿಷ್ಟ್ಯವು ಬಳಕೆದಾರರಿಗೆ ಹೆಚ್ಚುವರಿ ಕೀಲಿಯನ್ನು ರಚಿಸಲು ಅನುಮತಿಸುತ್ತದೆ. ಮೊದಲ ಬಾರಿಗೆ ಸಂಪರ್ಕಿಸುವವರು ಬಳಕೆದಾರ ಹೆಸರನ್ನು ಬಳಸಿಕೊಂಡು ಸಂದೇಶ ಕಳುಹಿಸುವ ಮೊದಲು ಕೀಯನ್ನು ನಮೂದಿಸಬೇಕು. ಕೀಯನ್ನು ಯಾವುದೇ ಸಮಯದಲ್ಲಿ ಬದಲಿಸಬಹುದು. ಬಳಕೆದಾರರಿಗೆ ತಮ್ಮನ್ನು ಯಾರು ಸಂಪರ್ಕಿಸಬಹುದು ಎಂಬುದರ ಮೇಲೆ ಇನ್ನಷ್ಟು ನಿಯಂತ್ರಣವನ್ನು ಈ ಕೀ ನೀಡುತ್ತದೆ ಎಂದು ಕಂಪನಿ ಹೇಳಿದೆ.

ಬಳಕೆದಾರರು ಯಾವುದೇ ಸಮಯದಲ್ಲಿ ತಮ್ಮ ಹೆಸರುಗಳನ್ನು ಬದಲಿಸಲು ಮತ್ತು ತೆಗೆದುಹಾಕಲು ಸಾಧ್ಯವಿದೆ. ಪ್ರಸಿದ್ಧ ಸಾರ್ವಜನಿಕ ವ್ಯಕ್ತಿಗಳು ಹಾಗೂ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಬಳಕೆದಾರ ಹೆಸರುಗಳನ್ನು ಕಾಯ್ದಿರಿಸಲಾಗುವುದು ಎಂದು ಕಂಪನಿ ಹೇಳಿದೆ.

ಅಸ್ತಿತ್ವದಲ್ಲಿರುವ ಚಾಟ್‌ ಗಳು ಬದಲಾಗುವುದಿಲ್ಲ

ಅಸ್ತಿತ್ವದಲ್ಲಿರುವ ಚಾಟ್‌ ಗಳು ಬದಲಾಗುವುದಿಲ್ಲ. ಪ್ರಸ್ತುತ ಸಂಪರ್ಕಗಳು ಹಿಂದಿನಂತೆಯೇ ನಿಮಗೆ ಸಂದೇಶ ಕಳುಹಿಸುವುದನ್ನು ಮುಂದುವರಿಸುತ್ತವೆ. ನಿರ್ಬಂಧಿಸುವುದು, ವರದಿ ಮಾಡುವುದು ಮತ್ತು ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ವೈಶಿಷ್ಟ್ಯಗಳು ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತವೆ.

ಎಲ್ಲರಿಗೂ ತಕ್ಷಣವೇ ಈ ವೈಶಿಷ್ಟ್ಯ ಕಾಣಿಸುವುದಿಲ್ಲ. ಬಳಕೆದಾರ ಹೆಸರು ಕಾಯ್ದಿರಿಸುವಿಕೆಗಳು ತಮ್ಮ ಪ್ರದೇಶದಲ್ಲಿ ಲಭ್ಯವಾದ ನಂತರ ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಅಧಿಸೂಚನೆ ಸ್ವೀಕರಿಸುತ್ತಾರೆ ಎಂದು ವಾಟ್ಸ್‌ಆ್ಯಪ್ ತಿಳಿಸಿದೆ. ವರ್ಷದ ಕೊನೆಯಲ್ಲಿ ಪೂರ್ಣ ವೈಶಿಷ್ಟ್ಯವನ್ನು ಪರಿಚಯಿಸಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News