ನೀವು ಮೃತಪಟ್ಟ ಮೇಲೆ ನಿಮ್ಮ ಸಾಮಾಜಿಕ ಜಾಲತಾಣ ಖಾತೆ ಏನಾಗುತ್ತದೆ? ಮೆಟಾ ಬಳಿ ಉತ್ತರವಿದೆ!
ಸಾಂದರ್ಭಿಕ ಚಿತ್ರ (AI)
ಬಳಕೆದಾರ ದೀರ್ಘಕಾಲ ಸಾಮಾಜಿಕ ಜಾಲತಾಣದಿಂದ ಬ್ರೇಕ್ ತೆಗೆದುಕೊಂಡಲ್ಲಿ ಅಥವಾ ಮೃತಪಟ್ಟಲ್ಲಿ AI ಮಾಡೆಲ್ ಬಳಕೆದಾರನ ರೀತಿಯಲ್ಲಿ ವರ್ತಿಸಲಿದೆ. ಅಂತಹ ಪೇಟೆಂಟ್ ಒಂದನ್ನು ಮೆಟಾ ಪಡೆದುಕೊಂಡಿದೆ!
ನಾವು ಮೃತಪಟ್ಟ ಮೇಲೆ ನಮ್ಮ ಸಾಮಾಜಿಕ ಜಾಲತಾಣ ಖಾತೆ ಏನಾಗುತ್ತದೆ ಎನ್ನುವುದಕ್ಕೆ ಮೆಟಾ ಉತ್ತರ ಕಂಡುಕೊಂಡ ಹಾಗಿದೆ!
ಮಾಧ್ಯಮಗಳ ವರದಿಯಂತೆ ಮೆಟಾ 2025ರಲ್ಲಿ ಪೇಟೆಂಟ್ ಒಂದನ್ನು ಸ್ವೀಕರಿಸಿದೆ. ಅದರಿಂದಾಗಿ ನೀವು ಮೃತಪಟ್ಟ ಮೇಲೆ ಸಾಮಾಜಿಕ ಜಾಲತಾಣದಲ್ಲಿ AI ನಿಮ್ಮಂತೆಯೇ ವರ್ತಿಸಿ ಖಾತೆಯನ್ನು ಮುಂದುವರಿಸಲಿದೆ. ಈ ಪೇಟೆಂಟ್ ಅನ್ನು ಮೆಟಾದ ಮುಖ್ಯ ತಂತ್ರಜ್ಞಾನ ಅಧಿಕಾರಿ ಆಂಡ್ರ್ಯೂ ಬಾಸ್ವರ್ತ್ ಅವರು 2023ರಲ್ಲಿ ಸಲ್ಲಿಸಿದ್ದರು. ಅದರಲ್ಲಿರುವ ವಿವರಗಳ ಪ್ರಕಾರ, ಬೃಹತ್ ಲ್ಯಾಂಗ್ವೇಜ್ ಮಾಡೆಲ್ ಒಂದು ವ್ಯಕ್ತಿಯ ಆನ್ಲೈನ್ ವರ್ತನೆಯನ್ನು ಅವರ ಅನುಪಸ್ಥಿತಿಯಲ್ಲಿ ಅನುಕರಿಸಲಿದೆ!
ಪೇಟೆಂಟ್ ನಲ್ಲಿ ಹೇಳಿರುವ ಪ್ರಕಾರ, ಬಳಕೆದಾರ ದೀರ್ಘಕಾಲ ಸಾಮಾಜಿಕ ಜಾಲತಾಣದಿಂದ ಬ್ರೇಕ್ ತೆಗೆದುಕೊಂಡಲ್ಲಿ ಅಥವಾ ಮೃತಪಟ್ಟಲ್ಲಿ AI ಮಾಡೆಲ್ ಬಳಕೆದಾರನ ರೀತಿಯಲ್ಲಿ ವರ್ತಿಸಲಿದೆ. ಸಿಸ್ಟಂಗೆ “ಬಳಕೆದಾರ-ನಿರ್ದಿಷ್ಟ” ಡಾಟಾವನ್ನು ತುಂಬಲಾಗುವುದು. ಐತಿಹಾಸಿಕ ಪೋಸ್ಟ್ಗಳು, ಕಮೆಂಟ್ಗಳು, ಲೈಕ್ಗಳು ಮತ್ತು ಇತರ ಚಟುವಟಿಕೆಗಳು ಸೇರಿದಂತೆ ಡಿಜಿಟಲ್ ಪರ್ಯಾಯವೊಂದನ್ನು ಸೃಷ್ಟಿಸುವ ಉದ್ದೇಶವನ್ನು ಮೆಟಾ ಹೊಂದಿದೆ. ಈ ಪರ್ಯಾಯವು ಮೂಲ ಖಾತೆಯ ಬಳಕೆದಾರನಂತೆಯೇ ವರ್ತಿಸಲಿದೆ.
ಅಂತಹ ಫೀಚರ್ ಏಕೆ ಅಗತ್ಯ ಎನ್ನುವ ಪ್ರಶ್ನೆ ಏಳುತ್ತದೆ. ಮೆಟಾ ಪ್ರಕಾರ ವೇದಿಕೆಯಲ್ಲಿ ಬಳಕೆದಾರನ ಅದೃಶ್ಯದ ಪರಿಣಾಮ ಕಡಿಮೆಯಾಗಲಿದೆ. ದಾಖಲೆ ಹೇಳುವ ಪ್ರಕಾರ, “ಬಳಕೆದಾರರು ಮೃತಪಟ್ಟರೆ ಮತ್ತು ಸಾಮಾಜಿಕ ಜಾಲತಾಣಕ್ಕೆ ಎಂದಿಗೂ ಹಿಂತಿರುಗಲು ಸಾಧ್ಯವಾಗದೆ ಇದ್ದರೆ, ಬಳಕೆದಾರರ ಮೇಲಿನ ಪರಿಣಾಮವು ಹೆಚ್ಚು ತೀವ್ರ ಮತ್ತು ಶಾಶ್ವತವಾಗಿರುತ್ತದೆ.”
ಈ ನಿಟ್ಟಿನಲ್ಲಿ ಮೃತಪಟ್ಟ ವ್ಯಕ್ತಿಯ ಸಾಮಾಜಿಕ ಮಾಧ್ಯಮವನ್ನು AI ಸ್ವಾಧೀನಪಡಿಸಿಕೊಳ್ಳುವುದರಿಂದ ಅವರ ಆಪ್ತರು ಅವರ ಉಪಸ್ಥಿತಿಯನ್ನು ಕಳೆದುಕೊಳ್ಳುವವರಿಗೆ ವಿಷಯಗಳನ್ನು ಸುಲಭಗೊಳಿಸಬಹುದು. ಇಂತಹ ಪರಿಕಲ್ಪನೆ ಬಗ್ಗೆ ಕೇಳುತ್ತಿರುವುದು ಇದೇ ಮೊದಲಲ್ಲ. ಗ್ರೀಫ್ ಟೆಕ್ ಅಥವಾ ದುಃಖ ತಂತ್ರಜ್ಞಾನ ಎನ್ನುವ ಒಂದು ತಂತ್ರಜ್ಞಾನ ಜನಪ್ರಿಯವಾಗುತ್ತಿದೆ. ಅಂದರೆ, ವ್ಯಕ್ತಿಯ ಸಾವಿನ ನಂತರ ಆತನಿಗೆ ಸಂಬಂಧಿಸಿದ ವಿಷಯಗಳನ್ನು ಸಂರಕ್ಷಿಸುವುದು ಮತ್ತು ಮರುಸೃಷ್ಟಿಸುವುದು. ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಮುಖ್ಯವಾಗಿ AI ಬಳಕೆಯ ಮೂಲಕ ಸಾವನ್ನಪ್ಪಿದವರ ಡಿಜಿಟಲ್, ಸಂವಾದಾತ್ಮಕ ಪ್ರತಿಕೃತಿಗಳನ್ನು ರಚಿಸುವ ಮೂಲಕ ಜನರು ಪ್ರೀತಿಪಾತ್ರರ ನಷ್ಟವನ್ನು ನಿರ್ವಹಿಸಲು, ನಿಭಾಯಿಸಲು ಅಥವಾ ಪ್ರಕ್ರಿಯೆಗೊಳಿಸಲು ಸಹಾಯ ಮಾಡುವ ವಿನ್ಯಾಸಗೊಳಿಸಲಾಗಿದೆ.
Replika and You, Only Virtual ಮೊದಲಾದ ಕಂಪನಿಗಳು ಈಗಾಗಲೇ ಗ್ರೀಫ್ ಟೆಕ್ನ ಭಾಗವಾಗಿ ಕೆಲಸ ಮಾಡುತ್ತಿವೆ. 2021ರಲ್ಲಿ ಮೈಕ್ರೋಸಾಫ್ಟ್ ಮೃತ ವ್ಯಕ್ತಿಗಳನ್ನು ಅನುಕರಿಸುವ ಸಾಮರ್ಥ್ಯವಿರುವ ಚಾಟ್ಬಾಟ್ಗೆ ಪೇಟೆಂಟ್ ಪಡೆದಿದೆ. ಅಂತಹ ತಂತ್ರಜ್ಞಾನವು ಬಳಕೆದಾರರಿಗೆ ತಮ್ಮ ಆಪ್ತರು ನಿಧನರಾದ ನಂತರ ಸಿಮ್ಯುಲೇಟೆಡ್ ಆವೃತ್ತಿಯೊಂದಿಗೆ ಸಂವಹನ ನಡೆಸುವ ಮೂಲಕ ದುಃಖವನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಮತ್ತೊಂದೆಡೆ ನೀವು ಆ್ಯಪ್ನಿಂದ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಂಡರೆ ನಿಮ್ಮ ಸ್ಥಳದಲ್ಲಿ AI ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಜನಪ್ರಿಯತೆ ಕಾಯ್ದುಕೊಳ್ಳಲು AI ಮೃತ ವ್ಯಕ್ತಿಯಂತೆ ನಟಿಸಲು ಪ್ರಾರಂಬಿಸುವ ವರ್ಚುವಲ್ ಯುಗದ ಕಡೆಗೆ ನಾವು ಸಾಗುತ್ತಿರುವಂತೆ ಕಾಣಿಸುತ್ತದೆ. ಈ ನಡುವೆ ತಾನು ಪಡೆದ ಪೇಟೆಂಟ್ ಅನ್ನು ಬಳಸಿಕೊಳ್ಳುವುದಿಲ್ಲ ಎಂದು ಮೆಟಾ ಹೇಳಿದೆ. ಕೆಲವೊಮ್ಮೆ ಕಂಪನಿಗಳು ‘ಪರಿಕಲ್ಪನೆಗಳಿಗೆ’ ಪೇಟೆಂಟ್ಗಳನ್ನು ಪಡೆದುಕೊಂಡರೂ ಬಳಸಿಕೊಳ್ಳುವುದು ಕಡಿಮೆ. ಇಂತಹ ಒಂದು ಪ್ರಕರಣ ಇದು ಆಗಲೂಬಹುದು.