ಪ್ರಿಯತಮೆಯನ್ನು ಮೆಚ್ಚಿಸಲು ಭದ್ರತಾ ಸಿಬ್ಬಂದಿಯನ್ನು ಕೊಲೆ ಮಾಡಿ ಬಿಸ್ಕತ್ತು ಫ್ಯಾಕ್ಟರಿಯಲ್ಲಿ ಹಣ ಕಳ್ಳತನ ಮಾಡಿದ ವಿದ್ಯಾರ್ಥಿ
ಸಾಂಧರ್ಬಿಕ ಚಿತ್ರ
ಬರೇಲಿ: ಉತ್ತರಪ್ರದೇಶದ ಬರೇಲಿಯಲ್ಲಿ ಗೆಳತಿಯನ್ನು ಮೆಚ್ಚಿಸಲು, ಶಾಪಿಂಗ್ ಗೆ ಕರೆದೊಯ್ಯಲು ಹಣಕ್ಕಾಗಿ ವಿದ್ಯಾರ್ಥಿಯೋರ್ವ ಕಳ್ಳತನ ಮಾಡಿದ್ದು, ಕೃತ್ಯವನ್ನು ಮರೆಮಾಚಲು ಬಿಸ್ಕತ್ತು ಫ್ಯಾಕ್ಟರಿಯ ಭದ್ರತಾ ಸಿಬ್ಬಂದಿಯನ್ನು ಕೊಲೆ ಮಾಡಿದ್ದಾನೆ.
ಅಶುತೋಷ್ ಕುಮಾರ್ ಅಲಿಯಾಸ್ ಆಶು ಬಂಧಿತ ಆರೋಪಿ. ಈತ ಬರೇಲಿಯ ಬಿಸ್ಕತ್ತು ಕಾರ್ಖಾನೆಯ ಭದ್ರತಾ ಸಿಬ್ಬಂದಿ ಕೇಸರ್ ಪ್ರಸಾದ್ ಎಂಬಾತನನ್ನು ಕೊಲೆ ಮಾಡಿದ್ದು, ಫ್ಯಾಕ್ಟರಿಯ ಕೊಠಡಿಯಿಂದ 55,000ರೂ. ಕಳ್ಳತನ ಮಾಡಿದ್ದಾನೆ.
ಜನವರಿ 10ರಂದು ಬರೇಲಿಯ ಪರ್ಸ ಖೇರಾದಲ್ಲಿರುವ ಫ್ಯಾಕ್ಟರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಕೇಸರ್ ಪ್ರಸಾದ್ ಕೊಲೆಯಾಗಿ ಪತ್ತೆಯಾಗಿದ್ದ. ಫ್ಯಾಕ್ಟರಿಯ ಮಾಲಕ ವಿನೀತ್ ಕುಮಾರ್ ಸಕ್ಸೇನಾ ಈ ಕುರಿತು ಸಿಬಿ ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಫ್ಯಾಕ್ಟರಿಯ ಒಳಗಿನ ಕೊಠಡಿಯಲ್ಲಿ ಬೀಗ ಮುರಿದಿರುವುದು ಕಂಡು ಬಂದಿದೆ. ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಅಶುತೋಷ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಈ ವೇಳೆ 21,503 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ತನಿಖೆಯ ವೇಳೆ ಕೇಸರ್ ಪ್ರಸಾದ್ ನನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಅಶುತೋಷ್ ಕುಮಾರ್ ಒಪ್ಪಿಕೊಂಡಿದ್ದಾನೆ. ಈತನ ಕೃತ್ಯಕ್ಕೆ ಗೆಳೆಯ ಸಾಥ್ ನೀಡಿದ್ದಾನೆ ಎನ್ನುವುದು ತನಿಖೆಯಿಂದ ಬಯಲಾಗಿದೆ. ʼನಾನು ಮಧ್ಯಂತರ ಪರೀಕ್ಷೆಯಲ್ಲಿ 77% ಅಂಕಗಳೊಂದಿಗೆ ಉತ್ತೀರ್ಣನಾಗಿದ್ದೇನೆ, ನನ್ನ ಗೆಳತಿಯನ್ನು ಮದುವೆಯಾಗಲು ಹಣವಿಲ್ಲದ ಕಾರಣ ಅಪರಾಧ ಎಸಗಿದ್ದೇನೆ. ಗುತ್ತಿಗೆದಾರನಾಗಿದ್ದ ನನ್ನ ತಂದೆ ಎರಡು ವಿವಾಹವಾಗಿದ್ದರು. ನಾನು ತಂದೆಯೊಂದಿಗೆ ಆ ಫ್ಯಾಕ್ಟರಿಗೆ ಹೋಗುತ್ತಿದ್ದೆ, ಸ್ವಲ್ಪ ಸಮಯದವರೆಗೆ ಅಲ್ಲಿ ಕೆಲಸ ಮಾಡುತ್ತಿದ್ದೆʼ ಎಂದು ತನಿಖೆಯ ವೇಳೆ ಅಶುತೋಷ್ ಹೇಳಿದ್ದಾನೆ.
ಕಳ್ಳತನದ ಹಣದಲ್ಲಿ ಪ್ರಿಯತಮೆಯನ್ನು ಶಾಪಿಂಗ್ ಗೆ ಕರೆದೊಯ್ದಿದ್ದ ಆರೋಪಿ!
ಅಶುತೋಷ್ ಕುಮಾರ್ ಗೆಳತಿಯನ್ನು ಮೆಚ್ಚಿಸಲು ಹಣಕ್ಕಾಗಿ ಕಳ್ಳತನ ಮತ್ತು ಕೊಲೆ ಕೃತ್ಯವನ್ನು ಎಸಗಿದ್ದ. ಅದರಂತೆ ಕಳ್ಳತನ ಮಾಡಿದ ಹಣದಲ್ಲಿ ಗೆಳತಿಯನ್ನು ಮೆಚ್ಚಿಸಲು ಬೈಕ್ ಖರೀದಿಸಿದ್ದಾನೆ. ಇದಲ್ಲದೆ ಆಕೆಯನ್ನು ರೆಸ್ಟೋರೆಂಟ್ ಗೆ ಮತ್ತು ಶಾಪಿಂಗ್ ಗೆ ಕರೆದುಕೊಂಡು ಹೋಗಿದ್ದಾನೆ ಎನ್ನುವುದು ತನಿಖೆಯ ವೇಳೆ ಬಯಲಾಗಿದೆ. ಈತನಿಂದ ಬಾಕಿ ಉಳಿದಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬರೇಲಿ ಎಸ್ ಪಿ ಸಿಟಿ ಮನುಷ್ ಪರೀಕ್ ಈ ಕುರಿತು ಪ್ರತಿಕ್ರಿಯಿಸಿದ್ದು, ಕೊಲೆ ಪ್ರಕರಣ ವರದಿಯಾದಾಗ ಹಲವು ತಂಡಗಳನ್ನು ರಚಿಸಿ ನಾವು ತನಿಖೆಯನ್ನು ಕೈಗೊಂಡಿದ್ದೇವೆ, ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ಪರಿಶೀಲಿಸಿದಾಗ ಅಶುತೋಷ್ ಕುಮಾರ್ ಈ ಕೃತ್ಯ ಎಸಗಿರುವುದು ಕಂಡು ಬಂದಿದೆ. ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.