ಪ್ರಚೋದನಕಾರಿ ಪೋಸ್ಟ್| ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಎಫ್ಐಆರ್ ದಾಖಲು
Photo| hindustantimes
ಪಶ್ಚಿಮ ಬಂಗಾಳ: ಕೋಮು ಸೌಹಾರ್ದತೆಗೆ ಬೆದರಿಕೆ ಒಡ್ಡುವಂತಹ ಹಾಗೂ ಭಾರತದ ಸಾರ್ವಭೌಮತೆಗೆ ಧಕ್ಕೆ ತರುವಂತಹ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿದ ಆರೋಪದಲ್ಲಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಪಶ್ಚಿಮ ಬಂಗಾಳದ ನರೇಂದ್ರಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಡಿಸೆಂಬರ್ 19ರಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅಮಿತ್ ಮಾಳವಿಯಾ ಪ್ರಚೋದನಕಾರಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಟಿಎಂಸಿ ನಾಯಕ ತನ್ಮೋಯ್ ಘೋಷ್ ನರೇಂದ್ರ ಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ದೂರಿನಲ್ಲಿ ನಿರ್ದಿಷ್ಟ ಪೋಸ್ಟ್ ಒಂದನ್ನು ಉಲ್ಲೇಖಿಸಲಾಗಿದ್ದು, ಇದು ಕೋಮು ಸೌಹಾರ್ದತೆಯ ವಿರುದ್ಧ ಪ್ರಚೋದನೆ ನೀಡುವಂತಿದೆ ಎಂದು ಆರೋಪಿಸಲಾಗಿದೆ. ಇದರಿಂದ ಭಾರತದ ಸಾರ್ವಭೌಮತೆಗೆ ಗಮನಾರ್ಹ ಬೆದರಿಕೆ ಎದುರಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
"ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುತ್ತಿರುವ ಧ್ವಂಸ ಕಾರ್ಯಾಚರಣೆ ಒಂದು ಎಚ್ಚರಿಕೆಯಾಗಿದೆ. ಭಯೋತ್ಪಾದನೆಯನ್ನು ತುಷ್ಟೀಕರಣ ಮಾಡಿದಾಗ ಹಾಗೂ ಕಾನೂನು ರಾಹಿತ್ಯವನ್ನು ಸಹಜವೆಂಬಂತೆ ಸ್ವೀಕರಿಸಿದಾಗ ಹೇಗೆ ಸಮಾಜದ ಹೆಣಿಗೆ ಬಿಚ್ಚಿಕೊಳ್ಳುತ್ತದೆ ಎಂಬುದಕ್ಕೆ ಇದು ನಿದರ್ಶನ” ಎಂದು ಅಮಿತ್ ಮಾಳವಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.