Pavagada | ಬಾಲಕಿಯರ ವಸತಿಶಾಲೆಯಲ್ಲಿ ವಿದ್ಯಾರ್ಥಿನಿ ಮೃತ್ಯು; ಪ್ರಾಂಶುಪಾಲರು, ವಾರ್ಡನ್ ವಿರುದ್ಧ ತನಿಖೆಗೆ ಪೋಷಕರ ಒತ್ತಾಯ
ಪಾವಗಡ : ತಾಲೂಕಿನ ರಂಗಸಮುದ್ರ ಗ್ರಾಮದ ಕಸ್ತೂರಿ ಬಾ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶನಿವಾರ ವರದಿಯಾಗಿದೆ.
ಪ್ರಿಯಾ(16) ಮೃತಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಬೆಳಗ್ಗೆ 6:30ರ ಸಮಯದಲ್ಲಿ ಕಸ್ತೂರಿ ಬಾ ವಸತಿ ಶಾಲೆಯ ವಿದ್ಯಾರ್ಥಿ ನಿಲಯದಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಪ್ರಾಂಶುಪಾಲರು ಮತ್ತು ವಾರ್ಡನ್ ವಿದ್ಯಾರ್ಥಿನಿಯ ಸ್ಥಿತಿ ನೋಡಿ ಅವರ ಮನೆಗೆ ಫೋನ್ ಮೂಲಕ ಪ್ರಿಯಾ ಪೋಷಕರಿಗೆ ವಿಷಯ ತಿಳಿಸಿದರು. ನಂತರ ಆಂಬ್ಯುಲೆನ್ಸ್‌ಗೆ ಫೋನ್ ಮಾಡಿ ತಿಳಿಸಿದ್ದಾರೆ.
ಆ ವೇಳೆ ವಿದ್ಯಾರ್ಥಿಯ ತಂದೆ ನರಸಿಂಹಪ್ಪ ತಾಯಿ ಶಾರದಮ್ಮ ಮತ್ತು ಸಂಬಂಧಿಕರು ಲಿಂಗದಹಳ್ಳಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಮಾಯಿಸಿ ಸಾವಿನ ತನಿಖೆ ಯಾಗಬೇಕು ಎಂದು ಆಗ್ರಹಿಸಿದರು. ಅರಸೀಕೆರೆ ಠಾಣೆ ಪಿಎಸ್‌ಐ ರಾಜೇಂದ್ರ ಅವರು ವಿದ್ಯಾರ್ಥಿನಿ ಶವವನ್ನು ತುಮಕೂರು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಶವಪರೀಕ್ಷೆ ಮಾಡಿಸಲು ರವಾನಿಸಿದ್ದಾರೆ.
‘ಪ್ರಿಯಾ ಅತ್ಯಂತ ಚುರುಕಾದ ವಿದ್ಯಾರ್ಥಿನಿ. ಸಾವಿಗೆ ಕಸ್ತೂರಿ ಬಾ ವಸತಿ ಶಾಲೆಯ ಸಿಬ್ಬಂದಿಯೇ ಕಾರಣ’ ಎಂದು ಪೋಷಕರು ಆರೋಪಿಸಿದರು.
ತಂದೆ ನರಸಿಂಹಪ್ಪಮಾತಾಡಿ, ಶುಕ್ರವಾರ ಪ್ರಿಯಾಳನ್ನು ರಂಗಸಮುದ್ರದ ಕಸ್ತೂರಿ ಬಾ ವಸತಿ ಶಾಲೆಗೆ ಎಂದಿನಂತೆ ಬಿಟ್ಟು ಬಂದಿದ್ದೆ. ಆ ಸಮಯದಲ್ಲಿ ಯಾವುದೇ ಆರೋಗ್ಯದಲ್ಲಿ ಏರುಪೇರು ಇರಲಿಲ್ಲ. ಹಾಸ್ಟೆಲ್‌ಗೆ ಹೋದ ಸಮಯದಲ್ಲಿ ನನ್ನ ಪುತ್ರಿ ಮೃತಪಟ್ಟಿದ್ದಾಳೆೆ.ಇದು ನಮಗೆ ನಂಬಲಾರದ ವಿಷಯವಾಗಿದೆ. ಈ ಕುರಿತು ತನಿಖೆ ಮಾಡಿಸಿ ಪ್ರಾಂಶುಪಾಲ ಮತ್ತು ವಾರ್ಡನ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವಸತಿ ಶಾಲೆಯ ವಾರ್ಡನ್ ಮತ್ತು ಪ್ರಾಂಶುಪಾಲರನ್ನು ಈ ಕೂಡಲೇ ಅಮಾನತಿನಲ್ಲಿಟ್ಟು ನಿಷ್ಪಕ್ಷ ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದೇನೆ. ಈ ಸಾವಿನ ಹಿಂದಿನ ಸತ್ಯ ಹೊರಬರಲೇಬೇಕು ಎಂದು ಅವರು ಹೇಳಿದರು.
ಪ್ರಕರಣ ಸಂಬಂಧ ವಸತಿ ಶಾಲೆಯ ಪ್ರಾಂಶುಪಾಲರು, ವಾರ್ಡನ್ ಹಾಗೂ ವಿದ್ಯಾರ್ಥಿನಿಯ ಸಹಪಾಠಿಗಳನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.