ತುಮಕೂರು ಜಿಲ್ಲೆಯಲ್ಲಿ ಜೀತ ಪದ್ಧತಿ ಜೀವಂತ; ಅಧಿಕಾರಿಗಳಿಂದ ಗಣಿ ಕಾರ್ಮಿಕರ ರಕ್ಷಣೆ
ಕುಣಿಗಲ್ : ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಪಾವಸಂದ್ರ ಗ್ರಾಮದ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯಲ್ಲಿ ಇಪ್ಪತ್ತು ವರ್ಷಗಳಿಂದ ಜೀತ ಪದ್ದತಿಯಲ್ಲಿ ದುಡಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳು, ಐವರು ಮಹಿಳೆಯರು, ನಾಲ್ವರು ಪುರುಷರು ಸೇರಿದಂತೆ 11ಮಂದಿಯನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಮೈಸೂರು ಕೆಆರ್‌ಎಸ್ ಮೂಲದ ಕಲ್ಲು ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಕರೆತಂದು ಹಣ ನೀಡಿ ಜೀತಕ್ಕೆ ದುಡಿಸಿಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಮುಕ್ತಿ ಸಂಸ್ಥೆಯ ದೂರು ಹಿನ್ನೆಲೆಯಲ್ಲಿ ಮಂಗಳವಾರ ಉಪ ವಿಭಾಗಾಧಿಕಾರಿ ನಾಹೀದಾ ಝಮ್ ಝಮ್ ನೇತೃತ್ವದ ಅಧಿಕಾರಿಗಳು ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿಕೊಂಡು ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಕಾರ್ಮಿಕರ ರಕ್ಷಣೆ ಮಾಡಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿ ಪ್ರಾಕೃತಿಕ ಸಂಪತ್ತನ್ನು ದೋಚಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವವರ ಮೇಲೆ ಅಧಿಕಾರಿಗಳು ಇದುವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಸಿದ್ದಾರೆ.
ದಾಳಿ ವೇಳೆ ಕುಣಿಗಲ್ ತಹಶೀಲ್ದಾರ್ ಕರಿಯನಾಯ್ಕ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಯ್ಯ, ಸಿಡಿಪಿಒ ಕಮಲಾ, ಕಾರ್ಮಿಕ ಇಲಾಖೆಯ ಅಧಿಕಾರಿ ಪುರುಷೋತ್ತಮ್, ಕಂದಾಯ ನಿರೀಕ್ಷಕ ರಘು, ಗ್ರಾಮ ಆಡಳಿತ ಅಧಿಕಾರಿ ಭವ್ಯಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಈ ವೇಳೆ ಉಪಸ್ಥಿತರಿದ್ದರು