×
Ad

ಡಿಕೆಶಿಯಿಂದ ಸಂವಿಧಾನದ ಮೂಲ ಆಶಯಕ್ಕೆ ಮಸಿ: ಶ್ಯಾಮರಾಜ್ ಬಿರ್ತಿ

Update: 2025-08-25 18:41 IST

ಶ್ಯಾಮರಾಜ್ ಬಿರ್ತಿ

ಉಡುಪಿ, ಆ.25: ಆರ್‌ಎಸ್‌ಎಸ್‌ನ ಪ್ರಾರ್ಥನೆಯನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ಪಠಿಸುವ ಮೂಲಕ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪವಿತ್ರ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಸಂವಿಧಾನದ ಜಾತ್ಯಾತೀತ ಚೌಕಟ್ಟಿನ ಅಡಿಯಲ್ಲಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ಡಿಕೆಶಿ ಸಂವಿಧಾನದ ಮೂಲ ಆಶಯಕ್ಕೇ ಮಸಿ ಬಳಿದಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಟೀಕಿಸಿದ್ದಾರೆ.

ಸನಾತನ ಧರ್ಮ, ಜಾತೀವಾದ, ಏಕ ಧರ್ಮವನ್ನು ಪೋಷಿಸುವ ಆರ್‌ಎಸ್‌ಎಸ್‌ನ ಪ್ರಾರ್ಥನೆಯನ್ನು ಬಹಿರಂಗ ವಾಗಿ ವಿಧಾನಸಭೆಯಲ್ಲೇ ಪ್ರಾರ್ಥಿಸುವ ಮೂಲಕ ತಮ್ಮ ನಿಜ ಹಿಂದುತ್ವವನ್ನು ಘೋಷಣೆ ಮಾಡಿ ಸಂವಿಧಾನದ ಜಾತ್ಯತೀತತೆಗೆ ಕೊಡಲಿ ಏಟು ಕೊಟ್ಟಿದ್ದಾರೆ. ಸಂವಿಧಾನ, ರಾಷ್ಟ್ರ ಧ್ವಜ ವಿರೋಧಿ ಮತ್ತು ಶ್ರೇಣಿಕೃತ ಜಾತಿವಾದಿ ಹಿಂದು ಧರ್ಮವನ್ನು ಪ್ರತಿಪಾದಿಸುವ ಆರ್‌ಎಸ್‌ಎಸ್‌ನ್ನು ಹಿಂಬಾಗಿನಿಂದ ಪ್ರತಿಪಾಧಿಸುವ ಪ್ರಯತ್ನ ಮಾಡಿ ಈ ನಾಡಿನ ಅಸ್ಪಶ್ರ್ಯತೆಗೆ ಬೆಂಬಲಿಸುವ ಸೂಚನೆ ನೀಡಿದ್ದಾರೆ. ಈ ನಾಡಿನ ಶೋಷಿತ ಸಮುದಾಯದ ಬಗ್ಗೆ ಅವರಿಗೆ ಇರುವ ಅಸಹನೆ, ತಾತ್ಸಾರ, ನಿಕೃಷ್ಟ ಭಾವನೆಯ ಅನಾವರಣ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

ಬಾಬಾ ಸಾಹೇಬರ ಸಂವಿಧಾನ ಜಾರಿಗೆ ಬರಬಾರದು ಎಂದು ಪ್ರತಿಭಟನೆ ನಡೆಸಿದ, ಕಾಲು ಶತಮಾನಗಳವರೆಗೂ ತಮ್ಮ ಆರ್‌ಎಸ್‌ಎಸ್‌ನ ಕೇಂದ್ರ ಕಛೇರಿ ನಾಗ್ಪುರದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸದ ಮತ್ತು ಇಂಡಿಯಾವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿರುವ ಆರ್‌ಎಸ್‌ಎಸ್‌ನ ಪ್ರಾರ್ಥನೆಯನ್ನು ವಿಧಾನ ಮಂಡಲದ ಅಧೀವೇಶನದಲ್ಲಿ ಪ್ರಾರ್ಥಿಸುವ ಮೂಲಕ ತಾನೂ ಒಬ್ಬ ಹಿಂದುತ್ವವಾದಿ ಎನ್ನುವುದನ್ನು ಉಪ ಮುಖ್ಯಮಂತ್ರಿ ಸಾಬೀತುಪಡಿಸಿದ್ದಾರೆ. ಆ ಮೂಲಕ ಅವರ ಅಸಲಿ ಮನೋಭಾವನೆಯನ್ನು ಹೊರಗೆಡವಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News