ರಕ್ತದಾನ ಶಿಬಿರ: ಶಾಲೆಯ ಮಕ್ಕಳಿಗೆ ಚಿತ್ರಕಲೆ ಸ್ವರ್ಧೆ
ಉಡುಪಿ, ಆ.26: ಆರೋಗ್ಯ ರಕ್ಷಣಾ ಕಮಿಷನ್, ಉಡುಪಿ ಶೋಕ ಮಾತಾ ಚರ್ಚ್, ಉಡುಪಿ ಜಿಲ್ಲಾ ಪೋಲಿಸ್ ಇಲಾಖೆ, ಉಡುಪಿ ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಘಟಕ, ಕುಂದಾಪುರ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರ ಅಪೂರ್ವ ಮಹಾಸಂಘ ಕೆನರಾ ಬ್ಯಾಂಕ್ ಮತ್ತು ಗೊರೆಟ್ಟಿ ಆಸ್ಪತ್ರೆ ಕಲ್ಯಾಣಪುರ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವು ಇತ್ತೀಚೆಗೆ ಉಡುಪಿಯ ಶೋಕ ಮಾತಾ ಚರ್ಚ್‌ನ ಸಭಾಂಗಣದಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಉಡುಪಿ ಡಯಾಸಿಸ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ತೊಟ್ಟಂ ಚರ್ಚಿನ ಧರ್ಮಗುರು ರೆ.ಫಾ.ಡೆನಿಸ್ ಡೇಸಾ ಮಾತನಾಡಿ, ನಮ್ಮ ಬದುಕಿನಲ್ಲಿ ನಾವು ನಿಜವಾಗಿ ಮಾಡಬಹುದಾದ ಪವಿತ್ರದಾನವೆಂದರೆ ಅಂಗದಾನಗಳು ಮತ್ತು ರಕ್ತದಾನ. ಅದು ಇನ್ನೊಬ್ಬರ ಬದುಕನ್ನು ಬೆಳಗಿಸುತ್ತದೆ ಎಂದರು.
ಕುಂದಾಪುರ ರೆಡ್‌ಕ್ರಾಸ್ ಸಭಾಪತಿ ಜಯಕರ ಶೆಟ್ಟಿ ರಕ್ತದಾನದ ಉಪಯುಕ್ತತೆಯನ್ನು ವಿವರಿಸಿದರು. ಸ್ಥಳದಲ್ಲಿ ಪ್ರತಿ ರಕ್ತದಾನಿ ಒಬ್ಬ ಸೂಪರ್ ಹೀರೋ ಎಂಬ ನುಡಿಯಿರುವ ಸ್ಟ್ಯಾಂಡಿಯನ್ನು ಪ್ರದರ್ಶಿಸಲಾಯಿತು. ರಕ್ತದಾನದ ಮಹತ್ವವನ್ನು ಜಾಗೃತಗೊಳಿಸುವ ಉದ್ದೇಶದಿಂದ ಸ್ಟೆಂಟ್ ಮೆರೀಸ್ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಚಿತ್ರಕಲೆ ಸ್ವರ್ಧೆಯನ್ನು ಆಯೋಜಿಸಲಾಗಿತ್ತು.
ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾನವನ ಜೀವನದಲ್ಲಿ ರಕ್ತದ ಅಗತ್ಯತೆಯನ್ನು ತೋರಿಸುವ ಸಜೀವ ಮಾದರಿಯನ್ನು ಪ್ರದರ್ಶಿಸಿದರು. ಜಿಲ್ಲಾ ರೆಡ್‌ಕ್ರಾಸ್ ಕಾರ್ಯದರ್ಶಿ ಗಣನಾಥ ಎಕ್ಕಾರು ರಕ್ತದಾನಿಗಳನ್ನು ಪರಿಚಯಿಸಿದರು.
ಪ್ರಸ್ಟೋಲ್ ಕಮಿಷನ್‌ನ ಕುಲಪತಿ ರೆ.ಫಾ.ಸ್ಟೀಫನ್ ಡಿಸೋಜ, ಧರ್ಮ ಗುರು ಫಾ.ಚಾಲ್ಸ್ ಮೆನೇಜಸ್, ಕೆನರಾ ಬ್ಯಾಂಕ್ ಉಪಪ್ರಬಂಧಕ ಪವಿತ್ರ ಕುಮಾರ್ ದಾಸ್, ಗೊರೆಟ್ಟಿ ಆಸ್ಪತ್ರೆಯ ಆಡಳಿತಾಧಿಕಾರಿ ಜರಿನಾ ಲೊಬೊ, ಅಪೂರ್ವ ಮಹಾ ಸಂಘದ ಅಧ್ಯಕ್ಷೆ ಸುಮನಾ ಬರ್ಬೊಝಾ, ಶಾಲಾ ಮುಖ್ಯೋಪಾಧ್ಯಾಯ ರೆ.ಫಾ.ವಿಜಯ್ ಡಿಸೋಜ, ಅಗ್ನೇಸ್ ಪೆರೇರಾ ಉಪಸ್ಥಿತರಿದ್ದರು.
ಆರೋಗ್ಯ ಕಮಿಷನ್‌ನ ನಿರ್ದೇಶಕ ಡಾ.ಎಡ್ವರ್ಡ್ ಲೋಬೋ ಸ್ವಾಗತಿದರು. ಕಾರ್ಯಕ್ರಮದ ಸಂಯೋಜಕಿ ಹಿಲ್ಡಾ ಕರ್ನೇಲಿಯೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಚರ್ಚಿನ ಹೆಲ್ತ್ ಕಮಿಷನ್ ಸಂಯೋಜಕಿ ಗ್ಲಾಡಿ ಸಾಲ್ದಾನ್ಹಾ ವಂದಿಸಿದರು. ಆರೋಗ್ಯ ಕಮಿಷನ್ ಸದಸ್ಯೆ ಡಾ.ಸೋನಿ ಡಿ. ಕೊಸ್ಟಾ ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ 80ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ದೇವದಾಸ ಪಾಟ್ಕರ್ ಹಾಗೂ 75 ಬಾರಿ ರಕ್ತದಾನ ಮಾಡಿದ ರಾಘವೇಂದ್ರ ಪ್ರಭು ಕರ್ವಾಲು ಅವರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಪೋಲಿಸರು ಹಾಗೂ ಸಾರ್ವಜನಿಕರು ಬಹುಸಂಖ್ಯೆಯಲ್ಲಿ ರಕ್ತದಾನ ಮಾಡಿದರು.