×
Ad

ಸ್ವಚ್ಛ ಸುಜಲ ಗ್ರಾಮ ಪ್ರತಿಜ್ಞಾನುಷ್ಟಾನ ರಾಷ್ಟ್ರೀಯ ಸ್ಪರ್ಧೆ: ಕಾಡೂರು ಗ್ರಾಪಂ ದ್ವಿತೀಯ ಸ್ಥಾನ

Update: 2025-08-31 19:47 IST

ಬ್ರಹ್ಮಾವರ, ಆ.31: ಕೇಂದ್ರ ಸರ್ಕಾರದ ಸರಪಂಚ್ ಸಂವಾದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಸುಜಲ -ಜನಸಹಭಾಗಿತ್ವ ಪ್ರತಿಜ್ಞಾ ಅನುಷ್ಠಾನ ಸ್ಪರ್ಧೆಯಲ್ಲಿ ಬ್ರಹ್ಮಾವರ ತಾಲೂಕಿನ ಕಾಡೂರು ಗ್ರಾಮ ಪಂಚಾಯತ್ ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಗುಣಮಟ್ಟ ನಿಯಂತ್ರಣ ವಿಭಾಗದ ಮೂಲಕ ನಿರ್ವಹಣೆ ಮಾಡಲಾಗುವ ಸರಪಂಚ್ ಸಂವಾದ್ ಮೂಲಕ ಪ್ರತಿ ತಿಂಗಳು ಹಮ್ಮಿಕೊಳ್ಳಲಾಗುವ ಸ್ಪರ್ಧೆಗಳಲ್ಲಿ ಕಾಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಲಂದರ್ ಶೆಟ್ಟಿ ಭಾಗವಹಿಸಿದ್ದು, ಈ ಪೈಕಿ ಸ್ವಚ್ಛ- ಸುಜಲ ಗ್ರಾಮ ಅಡಿಯಲ್ಲಿ ನಾಗರಿಕ ಸಹಭಾಗಿತ್ವ ಹಾಗೂ ಪ್ರತಿಜ್ಞಾ ಅನುಷ್ಠಾನದ ಕಾರ್ಯದಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಂಡಿದ್ದರು.

ಗ್ರಾಪಂ ವ್ಯಾಪ್ತಿಯ ಶಾಲೆ, ಅಂಗನವಾಡಿ, ಸರಕಾರಿ ಕಚೇರಿ, ನಾಗರಿಕರು, ಸ್ವಚ್ಛತಾ ಕಾರ್ಯದಲ್ಲಿ ಗ್ರಾಪಂನೊಂದಿಗೆ ಸಹಭಾಗಿತ್ವ ಹೊಂದಿರುವುದನ್ನು ಖಾತರಿಪಡಿಸುವ ಸ್ಪರ್ಧೆ ಇದಾಗಿದ್ದು, ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಗ್ರಾಪಂಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪಂಚಾಯತ್ ಮಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮಗಳ ಆಯೋಜನೆ, ಜಾಗೃತಿ ಕಾರ್ಯಕ್ರಮಗಳು, ನಾಗರಿಕರು ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವ ಮತ್ತು ದಾಖಲೀಕರಣದ ಬಗ್ಗೆ ತಂತ್ರಾಂಶದ ಮೂಲಕ ಪರಿಶೀಲಿಸುವ ಆಯಾಮಗಳನ್ನು ಸ್ಪರ್ಧೆ ಒಳಗೊಂಡಿತ್ತು.

‘ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಈ ಸ್ಪರ್ಧೆಗಳ ಕುರಿತು ಜಿಲ್ಲಾ ಹಂತದಲ್ಲಿ ಮಾರ್ಗ ದರ್ಶನ ಮಾಡಿದ್ದಾರೆ. ಪಂಚಾಯತ್ ಹಂತದಲ್ಲಿ ಅಧಿಕಾರಿಗಳು, ಸಿಬ್ಬಂದಿ, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮದ ಹಿರಿಯರು ಹಾಗೂ ನಾಗರಿಕರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ಅನುಷ್ಠಾನ ಮಾಡಿದ್ದು, ರಾಷ್ಟ್ರೀಯ ಹಂತದ ಮನ್ನಣೆ ಲಭಿಸಿರುವುದಕ್ಕೆ ಸಂತಸವಾಗಿದೆ’ ಎಂದು ಕಾಡೂರು ಗ್ರಾಪಂ ಅಧ್ಯಕ್ಷ ಜಲಂಧರ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News