×
Ad

ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ರಾಜ್ಯದಲ್ಲಿ ಶೀಘ್ರವೇ ‘ಅಕ್ಕ ಪಡೆ’: ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2025-09-12 20:06 IST

ಬೈಲೂರು(ಕಾರ್ಕಳ), ಸೆ.12: ರಾಜ್ಯದಲ್ಲಿ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗಾಗಿ ಶೀಘ್ರವೇ ‘ಅಕ್ಕ ಪಡೆ’ಯನ್ನು ರಚಿಸಲಾಗುತ್ತಿದೆ. ಇದು ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ವ್ಯವಸ್ಥಿತವಾಗಿ ಸ್ಪಂದಿಸಲಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಕಾರ್ಕಳ ತಾಲೂಕು ಬೈಲೂರಿನಲ್ಲಿ ನೀರೆ ಕಣಜಾರು ಗ್ರಾಮ ಪಂಚಾಯತ್ ನ ನೂತನ ಆಡಳಿತ ಕಟ್ಟಡ ‘ಗ್ರಾಮಸೌಧ’ದ ಉದ್ಘಾಟನಾ ಸಮಾರಂಭಕ್ಕೆ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಪೊಲೀಸ್ ಮಹಿಳೆಯರು, ಎನ್‌ಸಿಸಿ ತರಬೇತಿ ಪಡೆದವರು ಈ ತಂಡದಲ್ಲಿ ಇರುತ್ತಾರೆ. ಪ್ರತಿ ತಾಲೂಕಿಗೆ ಒಂದು ಪಡೆ ಇರಲಿದೆ. ಸೂಕ್ತ ತರಬೇತಿ ಮತ್ತು ಶಸ್ತ್ರ ವ್ಯವಸ್ಥೆಯನ್ನು ಇದಕ್ಕೆ ಮಾಡಲಾಗುವುದು. ಬಸ್‌ನಿಲ್ದಾಣ, ಜಾತ್ರೆ ಪರಿಸರದಲ್ಲಿ ಹೆಲ್ಪ್‌ಲೈನ್ ಹಾಕುತ್ತೇವೆ. ಮುಂದಿನ ಮೂರು ತಿಂಗಳೊಳಗೆ ಈ ಪಡೆ ಸಜ್ಜುಗೊಳ್ಳಲಿದೆ ಎಂದರು.

ಪ್ರತಿ ಮನೆಗಳಲ್ಲಿ ಆಗುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಮನೆಯೊಳಗೆ ಆಗುವ ಅನ್ಯಾಯಗಳಿಗೂ ಅಕ್ಕ ಪಡೆ ಸ್ಪಂದಿಸಲಿದೆ ಎಂದವರು ಹೇಳಿದರು.

ರಾಜ್ಯದಲ್ಲಿ ಅಂಗನವಾಡಿಗಳು ಶುರುವಾಗಿ 50 ವರ್ಷ ಪೂರ್ಣಗೊಂಡಿದೆ. 50 ವರ್ಷಗಳ ಹಿಂದೆ ಇಂದಿರಾಗಾಂಧಿ ಆರಂಭಿಸಿದ ಕಲ್ಪನೆ ಇದು. ಮೈಸೂರಿನ ಟಿ ನರಸೀಪುರದಲ್ಲಿ ಮೊದಲ ಅಂಗನವಾಡಿ ಆರಂಭಿಸಲಾಗಿತ್ತು ಎಂದರು.

ವಿಪಕ್ಷದಿಂದ ಅಪಪ್ರಚಾರ: ರಾಜ್ಯ ಸರಕಾರವನ್ನು ‘ಹಿಂದು ವಿರೋಧಿ’ ಎಂದು ಬಿಂಬಿಸುವ ಪ್ರಯತ್ನದ ಬಗ್ಗೆ ಪ್ರತಿಕ್ರಿಯಿ ಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸರಕಾರದ ವಿರುದ್ಧ ಆರೋಪ ಮಾಡಲು ವಿಪಕ್ಷಗಳಿಗೆ ಬೇರೆ ವಿಚಾರ ಇಲ್ಲ. ಸರಕಾರ ಬೀಳುತ್ತೆ ಎಂದು ಕಾದು ಕುಳಿತರು, ಗ್ಯಾರಂಟಿ ಜಾರಿ ಆಗಲ್ಲ ಅಂದರು, ಗ್ಯಾರಂಟಿ ಯೋಜನೆ ನಾಲ್ಕೇ ತಿಂಗಳು ನಡೆಯುತ್ತೆ ಅಂದರು. ಆಮೇಲೆ ಆಪರೇಷನ್ ಕಮಲ ಅಂದ್ರು. ಯಾವುದೂ ಕೈಗೂಡಲಿಲ್ಲ ಎಂದವರು ಹೇಳಿದರು.

ರಾಜ್ಯ ಸರಕಾರದ ಜನಪ್ರಿಯತೆಯನ್ನು ಸಹಿಸದ ಬಿಜೆಪಿ ನಾಯಕರು ಅನಗತ್ಯವಾಗಿ ಅಪಪ್ರಚಾರ ಮಾಡುತಿದ್ದು, ಸಮಾಜದಲ್ಲಿ ಕೋಮು ಸೌಹಾರ್ದತೆ ಕೆಡಿಸುವ ಪ್ರಯತ್ನ ನಡೆದಿದೆ. ಇದು ಹಿಂದಿನಿಂದಲೂ ಬಿಜೆಪಿ ನಡೆಸಿಕೊಂಡು ಬಂದ ಅಜೆಂಡಾ ಆಗಿದೆ. ಆದರೆ ರಾಜ್ಯ ಸರಕಾರ ಜನತೆಗೆ ಎಲ್ಲಾ ಅನುಕೂಲತೆ ಮಾಡಿಕೊಟ್ಟಿದೆ. ಇದನ್ನು ಸಹಿಸದ ಬಿಜೆಪಿ ನಾಯಕರು ಸುಖಾಸುಮ್ಮನೆ ಅಪಪ್ರಚಾರ ಮಾಡುತಿದ್ದಾರೆ ಎಂದರು.

ಕಾನೂನಿಗಿಂತ ದೊಡ್ಡವರಿಲ್ಲ: ಬಿಜೆಪಿ ಶಾಸಕ ಸಿ.ಟಿ.ರವಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ವಿಪಕ್ಷಗಳು ಖಂಡಿಸಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, ದ್ವೇಷಪೂರಿತ ಭಾಷಣ ಮಾಡಿದರೆ ಕ್ರಮ ಕೈಗೊಳ್ಳಲು ವಿಧಾನಸಭೆಯಲ್ಲಿ ಶಾಸನ ತರಲಾಗಿದೆ. ಧ್ವೇಷಪೂರಿತ ಭಾಷಣವನ್ನು ಬಿಜೆಪಿ- ಕಾಂಗ್ರೆಸ್ ಯಾರೇ ಮಾಡಿದರೂ ಕ್ರಮ ಕೈಗೊಳ್ಳಲಾ ಗುತ್ತದೆ. ನಾಳೆ ಕಾಂಗ್ರೆಸ್ಸಿಗರು ಮಾತನಾಡಿದರೂ ಕ್ರಮ ಆಗುತ್ತದೆ ಎಂದರು.

ಕಾನೂನು ಎಲ್ಲರಿಗೂ ಒಂದೇ ಅಲ್ವಾ?! ಶಾಂತಿಯನ್ನು ಕದಡುವ ಕೆಲಸ ಮಾಡಿದರೆ ಖಂಡಿತ ಎಫ್‌ಐಆರ್ ಆಗುತ್ತೆ. ನಾಳೆ ನಾನು ಆ ಕೆಲಸ ಮಾಡಿದರೂ ಎಫ್‌ಐಆರ್ ಆಗುತ್ತೆ. ಹೀಗಾಗಿ ಯಾರು ಕೂಡ ಕಾನೂನು ಕೈಯಲ್ಲಿ ತೆಗೆದುಕೊಳ್ಳಬಾರದು. ಯಾವುದೇ ಸಮಾಜ ಕಾನೂನು ಕೈಗೆ ತೆಗೆದುಕೊಂಡರೆ ಖಂಡಿಸುತ್ತೇವೆ ಎಂದರು.

ಭಾನು ಮುಸ್ತಾಕ್ ದಸರಾ ಉದ್ಘಾಟನೆ ವಿವಾದದ ಕುರಿತು ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಬಗ್ಗೆ ಮುಖ್ಯಮಂತ್ರಿಗಳು ಸಾಕಷ್ಟು ಬಾರಿ ಮಾಧ್ಯಮ ಹೇಳಿಕೆ ನೀಡಿದ್ದಾರೆ. ಇದರ ನಂತರ ನಾನು ಮಾತನಾಡುವುದು ಸರಿಯಲ್ಲ ಎಂದರು.

ಧರ್ಮಸ್ಥಳ ಎಸ್‌ಐಟಿ ತನಿಖೆ ನಿಧಾನಗೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ, ನಾನು ಈ ಮೊದಲೇ ಒಂದು ಮಾತನ್ನು ಹೇಳಿದ್ದೇನೆ. ಇವತ್ತಿಗೂ ನನ್ನದು ಅದೇ ಅಭಿಪ್ರಾಯ. ಧರ್ಮಸ್ಥಳ ನಮ್ಮೆಲ್ಲರ ಆರಾಧ್ಯ ಸ್ಥಳ. ಬಹಳಷ್ಟು ಭಕ್ತಿಯಿಂದ ನಡೆದುಕೊಳ್ಳುವ ಸ್ಥಳ. ಏನೆಲ್ಲಾ ಷಡ್ಯಂತ್ರ ಆಗಿದೆ ಎಂಬುದು ಹೊರ ಬರುತ್ತೆ ಸ್ವಲ್ಪ ಕಾಯಿರಿ ಎಂದರು. ಎಸ್‌ಐಟಿ ತನ್ನ ಕೆಲಸ ಏನು ಮಾಡುತ್ತಿದೆ ಎಂದು ಸಾರ್ವಜನಿಕವಾಗಿ ಹೇಳಲು ಬರಲ್ಲ. ಸ್ವಲ್ಪ ದಿನ ಕಾಯಿರಿ ಎಲ್ಲಾ ಸತ್ಯಾಸತ್ಯತೆ ಹೊರಬರುತ್ತದೆ ಎಂದು ಸಚಿವೆ ನುಡಿದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News