×
Ad

ಬೆಂಗಳೂರು ಮೂಲದ ದಂಪತಿಗಳಿಗೆ ದತ್ತು ಪಡೆಯಲು ಆದೇಶ ನೀಡಿದ ಉಡುಪಿ ಡಿಸಿ ಸ್ವರೂಪ ಟಿ.ಕೆ

Update: 2025-09-16 19:45 IST

ಸ್ವರೂಪ ಟಿ.ಕೆ 

ಉಡುಪಿ, ಸೆ.16: ಬೆಂಗಳೂರು ಮೂಲದ ದಂಪತಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಇತ್ತೀಚೆಗೆ ತಮ್ಮ ಕಚೇರಿಯಲ್ಲಿ ಮಗುವನ್ನು ದತ್ತು ಪಡೆಯಲು ಆದೇಶ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬ ವಾತಾವರಣ ಕಲ್ಪಿಸುವುದರಿಂದ ಕೌಟುಂಬಿಕ ವ್ಯವಸ್ಥೆಯಲ್ಲಿ ಮಕ್ಕಳು ಬೆಳೆಯಬೇಕು. ದತ್ತು ಪ್ರಕ್ರಿಯೆಯು ಕಾನೂನು ಬದ್ಧವಾಗಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯಿದೆ 2021ರ ಸೆಕ್ಷನ್ 56 (1) 58 ಮತ್ತು 61ರ ಅಡಿಯಲ್ಲಿ ಕುಟುಂಬದ ಪ್ರೀತಿ ವಂಚಿತ, ಪೋಷಕರನ್ನು ಕಳೆದುಕೊಂಡ, ಪಾಲನೆ ಪೋಷಣೆ ವಂಚಿತ ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳನ್ನು ಮಾತ್ರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ಮುಕ್ತ ಆದೇಶ ಪಡೆದು ದತ್ತು ನೀಡಲು ಅರ್ಹರಾಗಿರುತ್ತಾರೆ ಎಂದರು.

ದತ್ತು ಪಡೆಯಲು ಇಚ್ಛಿಸುವ ದಂಪತಿಗಳು ಕಾನೂನು ಬದ್ಧವಾಗಿ ದತ್ತು ಪ್ರಕ್ರಿಯೆ ಮೂಲಕ ದತ್ತು ಪಡೆಯಬಹುದಾ ಗಿದೆ. ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಎಸೆ ಯದೇ ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಬಹುದು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಸಂತೆಕಟ್ಟೆಯ ಶ್ರೀಕೃಷ್ಣಾನುಗ್ರಹ ದತ್ತು ಕೇಂದ್ರ, ಉಡುಪಿಯ ಬಿ.ಆರ್.ಶೆಟ್ಟಿ ಆಸ್ಪತ್ರೆ ಹಾಗೂ ನಿಟ್ಟೂರಿನ ಸರಕಾರಿ ಬಾಲಕಿಯರ ಬಾಲಮಂದಿರ ಇಲ್ಲಿ ಮಮತೆಯ ತೊಟ್ಟಿಲುಗಳನ್ನು ಇರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ, ಮಹೇಶ್, ಸುರಕ್ಷಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News