×
Ad

ಉಡುಪಿ: ಸಮೀಕ್ಷೆಯಿಂದ ದೂರ ಉಳಿದ ಜಿಲ್ಲೆಯ ಬಹುಸಂಖ್ಯಾತ ಶಿಕ್ಷಕರು

► ನಡೆಯದ ಹಿಂದುಳಿದ ವರ್ಗಗಳ ಆಯೋಗ ಮೊದಲ ದಿನದ ಗಣತಿ ► ಮಂಗಳವಾರದಿಂದ ಪೂರ್ಣಪ್ರಮಾಣದಲ್ಲಿ ಸಮೀಕ್ಷೆ: ಡಿಸಿ

Update: 2025-09-22 20:26 IST

ದಿನಕರ ಶೆಟ್ಟಿ, ಪ್ರಶಾಂತ್ ಶೆಟ್ಟಿ

ಉಡುಪಿ, ಸೆ.22: ತಮ್ಮ ಏಳೆಂಟು ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲೆಯ ಶಿಕ್ಷಕರು ಇಂದಿನಿಂದ ಜಿಲ್ಲೆಯಲ್ಲಿ ಪ್ರಾರಂಭ ಗೊಳ್ಳಬೇಕಿದ್ದ ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಗಣತಿಯಿಂದ ದೂರ ಉಳಿದ ಕಾರಣ, ಮೊದಲ ದಿನದ ಸಮೀಕ್ಷೆ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಯಲಿಲ್ಲ.

ಸೆ.22ರಿಂದ ಅ.7ರವರೆಗೆ ರಾಜ್ಯಾದ್ಯಂತ ನಡೆಯಬೇಕಿರುವ ಈ ಮಹತ್ವದ ಸಮೀಕ್ಷೆಗೆ ಸರಕಾರ ಬಳಸಿದ ಕ್ರಮ ಅವೈಜ್ಞಾನಿಕ ಎಂಬುದು ಶಿಕ್ಷಕರ ವಿರೋಧಕ್ಕೆ ಕಾರಣ. ಅಲ್ಲದೇ ಅವರು ಇನ್ನೂ ಏಳು ಬೇಡಿಕೆಗಳನ್ನಿಟ್ಟು ಈಡೇರಿಕೆಗೆ ಆಗ್ರಹಿಸಿ ಮೊದಲ ದಿನದ ಸಮೀಕ್ಷೆಯಿಂದ ದೂರ ಉಳಿದಿದ್ದಾರೆ. ತಮ್ಮ ಬೇಡಿಕೆ ಈಡೇರದ ಹೊರತು ಗಣತಿ ಕಾರ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ಜಿಲ್ಲಾ ಶಿಕ್ಷಕರ ಸಂಘದ ಪ್ರಮುಖರು ಒಕ್ಕೊರಲಿನಿಂದ ತಿಳಿಸಿದ್ದಾರೆ.

ಪ್ರಮುಖವಾಗಿ ಗಣತಿಗೆ ಶಿಕ್ಷಕರ ಕೊರತೆ ಇದೆ. ಪೂರ್ಣಪ್ರಮಾಣದ ಸಮೀಕ್ಷೆಗೆ ಜಿಲ್ಲೆಯಲ್ಲಿ ಸುಮಾರು ಮೂರು ಸಾವಿರ ಗಣತಿದಾರರ ಅಗತ್ಯವಿದೆ. ಪ್ರಸ್ತುತ ಜಿಲ್ಲೆಯಲ್ಲಿ 1800 ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 800ರಷ್ಟು ಪ್ರೌಢ ಶಾಲಾ ಶಿಕ್ಷಕರು ಕಾರ್ಯನಿರ್ವಹಿಸುತಿದ್ದಾರೆ. ಕೊರತೆಯಾಗುವ ಗಣತಿದಾರರಿಗೆ ಏನು ಅಂತ ಇನ್ನೂ ಸ್ಪಷ್ಟತೆ ಇಲ್ಲ ಎಂದು ಸಂಘ, ಇದರ ವಿರುದ್ಧ ಪ್ರತಿಭಟನೆ ನಡೆಸಲು ಅನುಮತಿ ನೀಡುವಂತೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿದ ಮನವಿ ಪತ್ರದಲ್ಲಿ ತಿಳಿಸಿದೆ.

ಹೀಗಾಗಿ ಗಣತಿಗೆ ಇತರ ಸರಕಾರಿ ಇಲಾಖೆಗಳ ನೌಕರರನ್ನು ಬಳಸಿ ಕೊಳ್ಳುವಂತೆ ಸಂಘ ಆಗ್ರಹಿಸಿದೆ. ಇದರೊಂದಿಗೆ ಗಂಭೀರ ಆರೋಗ್ಯ ಸಮಸ್ಯೆ ಇರುವ ಶಿಕ್ಷಕರನ್ನು, 59 ವರ್ಷ ಮೇಲ್ಪಟ್ಟ ಅಶಕ್ತ ಶಿಕ್ಷಕರನ್ನು, ವಿಕಲಚೇತನ ಶಿಕ್ಷಕರನ್ನು, ಗರ್ಭಿಣಿ ಶಿಕ್ಷಕಿಯರನ್ನು ಸಹ ಸಮೀಕ್ಷೆಗೆ ನೇಮಿಸಲಾಗಿದ್ದು, ಇವರನ್ನು ಪಟ್ಟಿಯಿಂದ ಕೈಬಿಡುವಂತೆ ಈ ಮೊದಲೇ ಮನವಿ ಮಾಡಿದ್ದರೂ, ಅವರಿಗೆ ವಿನಾಯಿತಿ ನೀಡಿಲ್ಲ ಎಂದು ಸಂಘ ತಿಳಿಸಿದೆ.

ಅಲ್ಲದೇ ಕಳೆದ ಎಪ್ರಿಲ್‌ನಲ್ಲಿ ಮಾಡಿದ ಪರಿಶಿಷ್ಟ ಜಾತಿ ಒಳ ಮೀಸಲಾತಿ ಗಣತಿಯ ಗೌರವ ಧನ ಗಣತಿದಾರರಿಗೆ ಇನ್ನೂ ಸಿಕ್ಕಿಲ್ಲ. ಶಿಕ್ಷಕರಿಗೆ ಅನುಕೂಲ ವಾಗುವಂತೆ ಅವರ ಶಾಲೆಯ ಆಸುಪಾಸಿನಲ್ಲೇ ಗಣತಿಗೆ ಸೂಚಿಸಬೇಕು. ಗಣತಿಗೆ ಶ್ರೇಷ್ಠ ದರ್ಜೆಯ ಆ್ಯಪ್‌ನ್ನು ಸಿದ್ಧಪಡಿಸಬೇಕು. ಅದರ ಬಳಕೆಗೆ ಸೂಕ್ತ ತರಬೇತಿ ನೀಡಬೇಕು. ಇಲ್ಲವಾದರೆ ಸಮೀಕ್ಷೆಗೆ ತೊಂದರೆಯಾಗುತ್ತದೆ. ಗಣತಿ ಬಗ್ಗೆ ಗ್ರಾಪಂಗಳ ಮೂಲಕ ಪ್ರತಿ ಮನೆಯವರಿಗೆ ಸಮೀಕ್ಷೆ ಬಗ್ಗೆ ಮನವ ರಿಕೆ ಮಾಡಿ ಗಣತಿ ಯಶಸ್ವಿಯಾಗಲು ಸಹಕಾರ ನೀಡಬೇಕು. ಗಣತಿ ಮುಗಿದ ತಕ್ಷಣ ಗೌರವ ಧನ ನೀಡಬೇಕು ಎಂದು ಸಂಘ ಮನವಿಯಲ್ಲಿ ತಿಳಿಸಿದೆ.

ಒಂದು ಮನೆಯಲ್ಲಿ 60 ಕಾಲಂಗಳನ್ನು ಭರ್ತಿ ಮಾಡಲು ಇರುವ ಕಾರಣ 15 ದಿನಗಳಲ್ಲಿ 150 ಮನೆಗಳನ್ನು ಒಬ್ಬ ಗಣತಿದಾರ ನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರತಿ ಶಿಕ್ಷಕರಿಗೆ 75 ಮನೆಗಳನ್ನು ಸೀಮಿತಗೊಳಿಸ ಬೇಕು. ಈಗಾಗಲೇ ಬಿಎಲ್‌ಓ ಕಾರ್ಯಕ್ಕೆ ನಿಯೋಜಿಸಿದ ಶಿಕ್ಷಕರನ್ನು ಗಣತಿಯಿಂದ ಹೊರತುಪಡಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ನಾವು ಗಣತಿ ಕಾರ್ಯದಿಂದ ದೂರವುಳಿದಿದ್ದೇವೆ ಎಂದು ಶಿಕ್ಷಕರಾದ ಪ್ರಶಾಂತ್ ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಜೊತೆ ಮಾತುಕತೆ ಯಶಸ್ವಿ: ಮಂಗಳವಾರದಿಂದ ಸಮೀಕ್ಷೆ

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ

ಇಂದಿನಿಂದ ಪ್ರಾರಂಭಗೊಳ್ಳಬೇಕಿದ್ದ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಿಂದ ದೂರ ಉಳಿದ ಶಿಕ್ಷಕ ಗಣತಿದಾರರೊಂದಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹಾಗೂ ಎಡಿಸಿ ಅಬಿದ್ ಗದ್ಯಾಳ್ ಮಾತುಕತೆ ನಡೆಸಿದ್ದು, ಅದು ಯಶಸ್ವಿಯಾಗಿದೆ. ನಾಳೆಯಿಂದ ಜಿಲ್ಲೆಯ ಎಲ್ಲಾ ನಿಯೋಜಿತ ಶಿಕ್ಷಕರು ಸಮೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಸದ್ಯ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 2200 ಮಂದಿ ಶಿಕ್ಷಕರು ನಾಳೆಯಿಂದ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಕೊರತೆಯಾಗುವ ಸುಮಾರು 550 ಮಂದಿ ಗಣತಿದಾರರನ್ನು ಅರಣ್ಯ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಿಂದ ನಿಯೋಜಿಸಲು ಡಿಸಿ ಒಪ್ಪಿಕೊಂಡಿದ್ದಾರೆ. ಸಮೀಕ್ಷೆಗೆ ಬಳಸುವ ಆ್ಯಪ್ ಲಭ್ಯವಾಗಿದ್ದು, ಅದರಲ್ಲಿರುವ ಗೊಂದಲ ಹಾಗೂ ತೊಂದರೆಯನ್ನು ನಾಳೆ ಒಳಗೆ ಸರಿಪಡಿಸುವ ಭರವಸೆ ದೊರಕಿದೆ ಎಂದು ಅವರು ಹೇಳಿದರು.

ಹಿಂದಿನ ಗಣತಿಯ ಗೌರವಧನವನ್ನು ಕೂಡಲೇ ನೀಡುವ ಭರವಸೆಯನ್ನು ಜಿಲ್ಲಾದಿಕಾರಿಗಳು ನೀಡಿದ್ದಾರೆ ಎಂದಿರುವ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಅಂಪಾರು ದಿನಕರ ಶೆಟ್ಟಿ, ಇಂದು ಜಿಲ್ಲೆಯಲ್ಲಿ 10ರಿಂದ 20 ಮಂದಿ ಶಿಕ್ಷಕರನ್ನು ಹೊರತು ಪಡಿಸಿ ಉಳಿದ ಎಲ್ಲರೂ ಸಮೀಕ್ಷೆಯಿಂದ ದೂರ ಉಳಿದಿದ್ದಾರೆ. ನಾಳೆಯಿಂದ ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಲು ಸಂಘ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಇಂದು ಪೂರ್ಣಪ್ರಮಾಣದಲ್ಲಿ ಅಲ್ಲದಿದ್ದರೂ, ಸಮೀಕ್ಷೆ ಯನ್ನು ಪ್ರಾರಂಭಿಸಲಾಗಿದೆ. ಗಣತಿದಾರರು ಶಿಕ್ಷಕರ ಸಂಘದ ಮೂಲಕ ಕೆಲವು ಬೇಡಿಕೆಗಳನ್ನು ಮುಂದಿರಿಸಿದ್ದು, ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅವರ ಮನ ಒಲಿಸಲಾಗಿದೆ. ನಾಳೆಯಿಂದ ಜಿಲ್ಲೆಯಲ್ಲಿ ಪೂರ್ಣಪ್ರಮಾಣದಲ್ಲಿ ಸಮೀಕ್ಷೆ ನಡೆಯಲಿದೆ.’

-ಸ್ವರೂಪ ಟಿ.ಕೆ., ಜಿಲ್ಲಾಧಿಕಾರಿ ಉಡುಪಿ.

‘ಜಿಲ್ಲೆಯಲ್ಲಿ ಸಮೀಕ್ಷೆ ಇಂದು ಪ್ರಾರಂಭಗೊಂಡಿದೆ. ದೂರವುಳಿದ ಗಣತಿ ದಾರರ ಪ್ರತಿನಿಧಿಗಳೊಂದಿಗೆ ಮಾತನಾಡಲಾಗಿದೆ.ನಾಳೆಯಿಂದ ಗಣತಿಗೆ ಅವರು ಸಮ್ಮತಿಸಿದ್ದಾರೆ.’

-ಅಬಿದ್ ಗದ್ಯಾಳ್, ಎಡಿಸಿ ಉಡುಪಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News