×
Ad

ಕೋಡಿಬೇಂಗ್ರೆ- ಹಂಗಾರಕಟ್ಟೆ ನಡುವೆ ಬಾರ್ಜ್ ಸೇವೆ ಲೋಕಾರ್ಪಣೆ

Update: 2025-10-08 21:05 IST

ಉಡುಪಿ, ಅ.8: ಸುಮಾರು 2.05 ಕೋಟಿ ರೂ. ವೆಚ್ಚದಲ್ಲಿ ಕೋಡಿ ಬೇಂಗ್ರೆ ಹಾಗೂ ಹಂಗಾರಕಟ್ಟೆ ನಡುವೆ ನದಿಯ ಮೂಲಕ ಸಂಪರ್ಕ ಕಲ್ಪಿಸುವ ಮದ್ಯಮ ಗಾತ್ರದ ಹೊಸ ಬಾರ್ಜ್ ‘ಕಾವೇರಿ’ಯನ್ನು ರಾಜ್ಯ ಮೀನುಗಾರಿಕಾ ಸಚಿವ ಮಂಕಾಳ ಎಸ್.ವೈದ್ಯ ಅವರು ಇಂದು ಹಂಗಾರಕಟ್ಟೆ ಬಂದರಿನಲ್ಲಿ ಲೋಕಾರ್ಪಣೆಗೊಳಿಸಿದರು.

ದ್ವೀಪದಂತಿರುವ ಕೋಡಿಬೇಂಗ್ರೆಯ ಜನರಿಗೆ ಅಗತ್ಯ ವಸ್ತುಗಳಿಗಾಗಿ ಈ ಬಾಗದೊಂದಿಗೆ ಸಂಪರ್ಕ ಕಲ್ಪಿಸಲು ಬಳಸುವ ಬಾರ್ಜ್‌ನ್ನು ಲೋರ್ಕಾಪಣೆ ಗೊಳಿಸಿ ಮಾತನಾಡಿದ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಾಂಕಾಳ ವೈದ್ಯ, ಈ ಬಾರ್ಜ್‌ನಿಂದಾಗಿ ಸ್ಥಳೀಯ ಜನರಿಗೆ ಹಾಗೂ ಪ್ರವಾಸಕ್ಕೆಂದು ಆಗಮಿಸುವ ಪ್ರವಾಸಿಗರಿಗೆ ಕಡಿಮೆ ಅವಧಿಯಲ್ಲಿ ಪ್ರಯಾಣ ಬೆಳಸಲು ಇದು ಅನುಕೂಲವಾಗಲಿದೆ. ಬಾರ್ಜ್ ಇಲ್ಲದಿದ್ದಲ್ಲಿ ರಸ್ತೆ ಮೂಲಕ ಸುತ್ತುಬಳಸಿ ಹೋಗಬೇಕಿತ್ತು ಎಂದರು.

ಮುಂದಿನ ದಿನಗಳಲ್ಲಿ ಸ್ಥಳೀಯ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆಯನ್ನು ನೀಡಿದರು.

ಹಂಗಾರಕಟ್ಟೆ ಬಂದರಿನಲ್ಲಿ ಮೀನುಗಾರಿಕೆಗೆ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವ ರೀತಿ ಯಲ್ಲಿ ಬಂದರಿನ ಅಭಿವೃದ್ದಿ ಕಾರ್ಯ ಗಳನ್ನು ಕೈಗೊಳ್ಳಲಾಗುವುದು. ಹಾಗೂ ಇದರ ಜೊತೆಯಲ್ಲಿ ಹೂಳೆತ್ತುವ ಕಾರ್ಯವನ್ನು ಸಹ ಮಾಡಲಾಗುವುದು ಎಂದರು.

ಬಂದರಿನಲ್ಲಿ ಶೆಡ್‌ನ ನಿರ್ಮಾಣದ ಕಾಮಗಾರಿಯನ್ನು 50ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಇದನ್ನು ಉನ್ನತೀಕರಣಗೊಳಿಸಿ ಅಭಿವೃದಿ ಪಡಿಸಬೇಕಾಗಿದೆ. ಇದಕ್ಕೆ ಸರಕಾರದ ಮಟ್ಟದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಕೋಡಿ ಬೆಂಗ್ರೆ ಗ್ರಾಮವನ್ನು ಈಗಾಗಲೇ ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ. ಸ್ಥಳೀಯ ಜನರು ವ್ಯಸನ ಮುಕ್ತವಾಗಿರುವುದು ಒಂದು ಉತ್ತಮ ಕಾರ್ಯವಾಗಿದ್ದು ಇದರಿಂದ ಜನರ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಸಾಧ್ಯವಾಗಲಿದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕುಸುಮ, ಮುಖಂಡರಾದ ದಿನೇಶ್ ಹೆಗ್ಡೆ,ರಾಜು ಬಂಗೇರ, ಪ್ರಸಾದ್ ತಿಂಗಳಾಯ ಮತ್ತಿತರರು ಉಪಸ್ಥಿತರಿದ್ದರು.






 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News