ಕೊಂಕಣ ರೈಲ್ವೆ ವಿಲೀನ ಪ್ರಕ್ರಿಯೆ: ಕೇಂದ್ರ, ರಾಜ್ಯ ಸರಕಾರಗಳ ಪ್ರತಿಕ್ರಿಯೆ
ನಿರೀಕ್ಷೆಯಲ್ಲಿ ರೈಲ್ವೆ ಇಲಾಖೆ: ಅಶ್ವಿನಿ ವೈಷ್ಣವ್
ಉಡುಪಿ: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಂಬಂಧಿತ ರಾಜ್ಯ ಸರಕಾರಗಳ ಸಹಕಾರ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಪ್ರಸಾರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಶುಕ್ರವಾರ ಮುಕ್ತಾಯಗೊಂಡ ಲೋಕಸಭಾ ಅಧಿವೇಶದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಳಿದ ಲಿಖಿತ ಪ್ರಶ್ನೆಗೆ ಅವರು ನೀಡಿದ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.
ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವಿಕೆ, ನೆನೆಗುದಿಗೆ ಬಿದ್ದಿರುವ ಕೊಂಕಣ ರೈಲ್ವೆ ಹಳಿಗಳ ದ್ವಿಗುಣ ಗೊಳಿಸುವಿಕೆ, ಕೊಂಕಣ ರೈಲ್ವೆ ವ್ಯಾಪ್ತಿಯ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವುದು, ಹೊಸ ರೈಲು ಗಳ ಸಂಚಾರಕ್ಕೆ ಅನುಮತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಬೆಯಲ್ಲಿ ಲಿಖಿತ ಪ್ರಶ್ನೆಗಳನ್ನು ಕೇಳಿದ್ದರು.
ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಸಂಬಂಧಿತ ರಾಜ್ಯ ಸರಕಾರಗಳ ಸಹಕಾರ ಕೋರಲಾಗಿದೆ ಎಂದ ರೈಲ್ವೆ ಸಚಿವರು, ಕೊಂಕಣ ರೈಲ್ವೆ ಕಾರ್ಪೊರೇಷನ್‌ನ್ನು 1990ರಲ್ಲಿ ರೈಲ್ವೆ ಸಚಿವಾಲಯ ದೊಂದಿಗೆ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳ ಸರಕಾರಗಳ ಸಹಭಾಗಿತ್ವ ದಲ್ಲಿ ಸ್ಥಾಪಿಸಲಾಯಿತು. ಮಹಾರಾಷ್ಟ್ರದ ರೋಹದಿಂದ, ಕರ್ನಾಟಕದ ತೋಕೂರುವರೆಗೆ ಕೊಂಕಣ ರೈಲ್ವೆ ವ್ಯಾಪ್ತಿ ವಿಸ್ತರಿಸಿದೆ ಎಂದು ಅವರು ಕೊಂಕಣ ರೈಲ್ವೆ ಕುರಿತಂತೆ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದರು.
ನಿಗಮಕ್ಕೆ ಭಾರತ ಸರಕಾರ ಶೇ.66.35, ಮಹಾರಾಷ್ಟ್ರ ಶೇ.15.11, ಕರ್ನಾಟಕ ಶೇ.10.30, ಗೋವಾ ಶೇ.4.12 ಹಾಗೂ ಕೇರಳ ಶೇ. 4.2ರಷ್ಟು ಶೇರು ಬಂಡವಾಳ ಒದಗಿಸಿವೆ. ಮೇಲಿನ ರಾಜ್ಯಗಳ ನಿರ್ಧಾರಗಳು ವಿಲೀನ ಪ್ರಕ್ರಿಯೆಗೆ ಚಾಲನೆ ನೀಡುತ್ತವೆ ಎಂದು ಅಶ್ವಿನಿ ವೈಷ್ಣವ್ ವಿವರಿಸಿದರು.
ಪ್ರಸ್ತುತ ಕೊಂಕಣ ರೈಲು ಮಾರ್ಗದಲ್ಲಿ ಮಂಗಳೂರು- ಮುಂಬೈ ನಡುವೆ 28 ರೈಲುಗಳು ಓಡುತ್ತಿದ್ದು, ಮಂಗಳೂರು-ಮಡಗಾಂವ್‌ವರೆಗೆ 33 ರೈಲು ಸೇವೆಗಳನ್ನು ನೀಡಲಾಗುತ್ತಿದೆ. ಭಾರತೀಯ ರೈಲ್ವೆ ವ್ಯಾಪ್ತಿಯಲ್ಲಿ 164 ವಂದೇ ಭಾರತ್ ರೈಲುಗಳು ಕಾರ್ಯ ನಿರ್ವಹಿಸುತಿದ್ದು, ಇವುಗಳಲ್ಲಿ ಮಹಾರಾಷ್ಟ್ರ ದಲ್ಲಿ 24, ಕರ್ನಾಟಕದಲ್ಲಿ 22, ಗೋವಾದಲ್ಲಿ 4, ಕೇರಳದಲ್ಲಿ 6 ವಂದೇ ಭಾರತ್ ರೈಲು ಸಂಚರಿಸುತಿವೆ. ಇವುಗಳಲ್ಲಿ ಮಂಗಳೂರಿನಿಂದ ಮಡಗಾಂವ್ ವರೆಗೆ ಚಲಿಸುವ ರೈಲು ಸೇವೆಯೂ ಸೇರಿದೆ ಎಂದು ಅವರು ತಿಳಿಸಿದರು.
ಕೊಂಕಣ ರೈಲ್ವೆ ವ್ಯಾಪ್ತಿಯ 739 ಕಿ.ಮೀ. ಹಳಿಗಳ ಪೈಕಿ ರೋಹಾ- ವೀರ್ ಮತ್ತು ಮಡಗಾಂವ್ ವಿಭಾಗಗಳಲ್ಲಿ 55 ಕಿ.ಮೀ. ಹಳಿ ದ್ವಿಗುಣಗೊಳಿಸುವ ಕೆಲಸ ಪೂರ್ಣಗೊಂಡಿದೆ. ಉಳಿದ 684 ಕಿ.ಮೀ. ಹಳಿಗಳ ದ್ವಿಗುಣ ಗೊಳಿಸುವ ಅಗತ್ಯವಿದೆ. ಈ ಬಗ್ಗೆ ರಾಜ್ಯ ಸರಕಾರಗಳನ್ನು ಸಂಪರ್ಕಿಸ ಲಾಗುತ್ತಿದೆ. ಈ ಮಧ್ಯೆ ಮಾರ್ಗದ ಸಾಮರ್ಥ್ಯ ಹೆಚ್ಚಿಸಲು ಸುಮಾರು 263 ಕಿ.ಮೀ. ಹಳಿಗಳ ದ್ವಿಗುಣಗೊಳಿಸಲು ಡಿ.ಪಿ.ಆರ್ ಸಿದ್ಧಪಡಿಸುವ ಕೆಲಸವನ್ನು ಕೊಂಕಣ ರೈಲ್ವೆ ಕೈಗೆತ್ತಿಕೊಂಡಿದೆ. ಅಲ್ಲದೇ ಸಂಸದರ ಬೇಡಿಕೆಗಳೂ ಸೇರಿದಂತೆ, ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಅಭಿವೃದ್ಧಿ ಕೆಲಸಗಳು ರೈಲ್ವೆ ಇಲಾಖೆ ಯಲ್ಲಿ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಸಂಸದ ಕೋಟ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.