ತಲಪಾಡಿಯಿಂದ ಕಾರವಾರದವರೆಗೆ ಹೊಸ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣಕ್ಕೆ ಪ್ರಸ್ತಾವನೆ: ಸಂಸದ ಕೋಟ
ಸಾಂದರ್ಭಿಕ ಚಿತ್ರ
ಉಡುಪಿ, ಡಿ.20: ಕರಾವಳಿ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ವಿಪರೀತವಾಗುತ್ತಿದ್ದು, ದಿನನಿತ್ಯ ಸರಣಿ ಅಪಘಾತಗಳು ನಡೆಯು ತ್ತಿರುವ ಹಿನ್ನೆಲೆಯಲ್ಲಿ ಕೇರಳದ ಗಡಿ ತಲಪಾಡಿಯಿಂದ ಬೈಂದೂರು ಮೂಲಕ ಕಾರವಾರದವರೆಗೆ ರೈಲ್ವೆ ಹಳಿಗಳ ಸನಿಹದಲ್ಲಿ ಹೊಸ ಎಕ್ಸ್‌ಪ್ರೆಸ್ ಹೆದ್ದಾರಿಯೊಂದನ್ನು ನಿರ್ಮಿಸಬೇಕೆಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಲೋಕಸಭೆಯಲ್ಲಿ ನಿಯಮ 377ರ ಅನ್ವಯ ಕೇಂದ್ರ ಸರಕಾರದ ಮುಂದೆ ಈ ಪ್ರಸ್ತಾವನೆ ಸಲ್ಲಿಸಿರುವ ಅವರು ಇದರಿಂದ ಕರಾವಳಿ ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜನ ದೊರಕಲಿದೆ. ಮಂಗಳೂರಿನಿಂದ ಗೋವಾದವರೆಗೆ ಕರಾವಳಿ ಕರ್ನಾಟಕ ಅಭಿವೃದ್ಧಿಯ ಹೊಸ ಶಖೆ ಪ್ರಾರಂಭವಾಗಲಿದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.
ಆಗುಂಬೆ (ಎನ್.ಹೆಚ್.169ಎ) ಶೃಂಗೇರಿ, ಅಗಲಗುಂಡಿ, ಜಯಪುರ, ಬಾಳೆಹೊನ್ನೂರು, ಹೈರಂಬಿ, ಆಲ್ದೂರು, ನದಿಪುರ, ಚಿಕ್ಕಮಗಳೂರು ಸಂಪರ್ಕದ ಸರಿಸುಮಾರು 120 ಕಿ.ಮೀ ಲೋಕೋಪಯೋಗಿ ಇಲಾಖಾ ರಸ್ತೆಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ ಅಭಿವೃದ್ಧಿ ಮಾಡಬೇಕೆಂದೂ ಅವರು ಬೇಡಿಕೆ ಸಲ್ಲಿಸಿದ್ದಾರೆ.
ಇದರಿಂದ ಶೃಂಗೇರಿಯಂತಹ ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುವ ಭಕ್ತಾದಿ ಗಳಿಗೆ ಹಾಗೂ ಕೃಷಿ ಪ್ರದೇಶದಲ್ಲಿ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸಂಸದ ಕೋಟ ಉಲ್ಲೇಖಿಸಿದ್ದಾರೆ. ಅಲ್ಲದೆ, ಕುಂದಾಪುರ, ಕೋಟೇಶ್ವರ, ಹಾಲಾಡಿ, ಸೋಮೇಶ್ವರ, ಆಗುಂಬೆ ಶೃಂಗೇರಿ ತಲುಪುವ 88 ಕಿ.ಮೀ ರಸ್ತೆಯನ್ನು ಎನ್.ಹೆಚ್ ಆಗಿ ಘೋಷಿಸಿ ಅಭಿವೃದ್ಧಿಪಡಿಸಲು ಸಹ ಅವರು ಮನವಿ ಮಾಡಿದ್ದಾರೆ.