×
Ad

ನಟಿ ಮಾನಸಿಗೆ ಅಲೆವೂರು ಗ್ರೂಪ್ ಅವಾರ್ಡ್ ಪ್ರದಾನ

Update: 2025-12-20 22:14 IST

ಉಡುಪಿ, ಡಿ.20: ಮಕ್ಕಳ ಮನಸ್ಸಿನಲ್ಲಿ ಪರಸ್ಪರ ಪ್ರೀತಿ ಹಂಚುವ ಮನೋಭಾವನೆ ಹುಟ್ಟಿಸುವ ಕೆಲಸ ಶಾಲಾ ಹಂತದಲ್ಲಿ ನಡೆಯಬೇಕು ಎಂದು ನಟಿ, ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್ ಹೇಳಿದ್ದಾರೆ.

ಉಡುಪಿ ಅಲೆವೂರಿನ ಶಾಂತಿನಿಕೇತನ ಆಂಗ್ಲಮಾಧ್ಯಮ ಶಾಲೆಯ 21ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಲೆವೂರು ಗ್ರೂಪ್ ಫಾರ್ ಎಜ್ಯುಕೇಷನ್ ವತಿಯಿಂದ ಕೊಡಮಾಡುವ 2025ನೇ ಸಾಲಿನ ಅಲೆವೂರು ಗ್ರೂಪ್ ಅವಾರ್ಡ್ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಕಲಾವಿದನ ಯಶಸ್ಸಿನಲ್ಲಿ ನಿರ್ದೇಶಕರು, ಸಂಗೀತಗಾರರು, ಮೇಕಪ್ ಮ್ಯಾನ್, ಗೀತೆ ರಚನಾಕಾರರು, ತಂತ್ರಜ್ಞರು ಹೀಗೆ ಹಿಮ್ಮೇಳದಲ್ಲಿ ಹಲವರ ಜೊತೆಗೆ ಕಲಾ ಪೋಷಕರು, ಕಲಾಭಿಮಾನಿಗಳು ಹಾಗೂ ಮುಖ್ಯವಾಗಿ ಪ್ರೇಕ್ಷಕರ ಬೆಂಬಲ ಪ್ರಮುಖವಿರುತ್ತದೆ ಎಂದರು.

ಮಾನಸಿ ಅವರಿಗೆ ಬೆಳ್ಳಿ ಫಲಕ ಸಹಿತ ಅಲೆವೂರು ಗ್ರೂಪ್ ಪ್ರಶಸ್ತಿ ಪ್ರದಾನ ಮಾಡಿದ ಮಾಜಿ ಸಚಿವ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಶಿಕ್ಷಣವು ಉದ್ಯೋಗಾಕಾಂಕ್ಷಿಗಳನ್ನು ಸೃಷ್ಠಿಸುವುದಕ್ಕೆ ಮಾತ್ರ ಸೀಮಿತಗೊಳ್ಳದೆ ಸ್ವ- ಉದ್ಯೋಗ ಸೃಷ್ಟಿಯ ಮಾಧ್ಯಮ ವಾಗಬೇಕು. ಶಾಲಾ ಮಟ್ಟದಲ್ಲಿಯೇ ಜೀವನಕಲೆ ರೂಪಿಸುವ ವಾತಾವರಣ ರೂಪುಗೊಳ್ಳಬೇಕು ಎಂದರು.

ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಡಾ.ಲೀನಾ ಸಿಕ್ವೆರಾ ಮುಖ್ಯ ಅತಿಥಿಯಾಗಿ ಮಾತನಾಡಿ ದರು. ಅಲೆವೂರು ಗ್ರೂಪ್ ಫಾರ್ ಎಜುಕೇಶನ್ ಅಧ್ಯಕ್ಷ ಅಲೆವೂರು ಗಣಪತಿ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ವಿಜೇತರಾದ ಹಾಗೂ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಳುಗಳನ್ನು ಗೌರವಿಸಲಾಯಿತು.

ಶಾಲಾ ಸಂಚಾಲಕ ಅಲೆವೂರು ದಿನೇಶ್ ಕಿಣಿ ಸ್ವಾಗತಿಸಿದರು. ಮುಖ್ಯೇಪಾಧ್ಯಾಯಿನಿ ರೂಪಾ ಡಿ.ಕಿಣಿ ಶಾಲಾ ವಾರ್ಷಿಕ ವರದಿ ವಾಚಿಸಿದರು. ಆಡಳಿತ ಮಂಡಳಿಯ ಕೋಶಾಧಿಕಾರಿ ಅಲೆವೂರು ಹರೀಶ್ ಕಿಣಿ ಮಾನಸಿ ಅವರನ್ನು ಪರಿಚಯಿಸಿದರು. ಶಿಕ್ಷಕಿ ಶ್ರುತಿ ವಂದಿಸಿದರು. ಶಿಕ್ಷಕರಾರ ಸುಹಾಸಿನಿ ನಾರಾಯಣ ಸರಳಾಯ ಹಾಗೂ ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News