ಚಿತ್ತೂರಿನಲ್ಲಿ ಯಕ್ಷ ಕಿಶೋರ ಯಕ್ಷಗಾನ ಉದ್ಘಾಟನೆ
ಉಡುಪಿ, ಡಿ.30: ಬೈಂದೂರು ತಾಲೂಕು ಚಿತ್ತೂರಿನ ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆಯಲ್ಲಿ ಮೂರು ದಿನಗಳ ಕಿಶೋರ ಯಕ್ಷಗಾನ ಸೋಮವಾರ ಸಂಜೆ ಉದ್ಘಾಟನೆಗೊಂಡಿತು.
ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ನಡೆದಿರುವ ಈ ಕಿಶೋರ ಯಕ್ಷಗಾನ ಸಂಭ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಶಾಸಕ ಗುರುರಾಜ ಗಂಟಿಹೊಳೆ, ಯಕ್ಷಗಾನ ಕಲಾರಂಗದ ಕಾರ್ಯ ವಿಸ್ತಾರವನ್ನು ಶ್ಲಾಘಿಸಿದರು. ಕಾರ್ಯಕ್ರಮ ನೀಡುವಲ್ಲಿ ಅವರು ತೋರುವ ಕಾಳಜಿ, ಅಚ್ಚುಕಟ್ಟುತನ, ಸಮಯಪಾಲನೆ ಸಾಮಾಜಿಕವಾಗಿ ಕೆಲಸ ಮಾಡುವ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.
ಕೊಲ್ಲೂರು ದೇವಳದ ಆಡಳಿತ ಸಮಿತಿ ಸದಸ್ಯ ಮಹಾಲಿಂಗ ನಾಯಕ್ ಮಾತನಾಡಿ, ಪ್ರೌಢಶಾಲೆಗಳಲ್ಲಿ ಯಕ್ಷ ಶಿಕ್ಷಣ ತರಬೇತಿ ನೀಡುವುದು ಅತ್ಯುತ್ತಮ ಕಾರ್ಯಕ್ರಮ. ಇದಕ್ಕೆ ದೇವಳದಿಂದ ಪ್ರತಿವಷರ್ ಅನುದಾನ ನೀಡಲಾಗುವುದು ಎಂದರು.
ಉದ್ಯಮಿಗಳಾದ ಕೆ.ಎಲ್.ಜಯರಾಮ್ ಶೆಟ್ಟಿ, ರಾಜೀವ್ ಶೆಟ್ಟಿ ಜಿ.ಕೆ., ರವಿರಾಜ್ ಶೆಟ್ಟಿ, ಮುಖ್ಯಶಿಕ್ಷಕ ಸದಾನಂದ ಶೆಟ್ಟಿ ಕೆರಾಡಿ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸುಗುಣ, ನಾರಾಯಣ ಎಂ. ಹೆಗಡೆ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಗರಾಜ್ ಶೆಟ್ಟಿ ನೈಕಂಬ್ಳಿ ಸ್ವಾಗತಿಸಿದರು. ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮೊದಲ ದಿನದಂದು ಆಲೂರು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ‘ರೇವತಿ ಪರಿಣಯ’ ಮತ್ತು ಕೊಲ್ಲೂರು ಮೂಕಾಂಬಿಕಾ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಚಕ್ರವ್ಯೆಹ-ಪದ್ಮವ್ಯೆಹ ಪ್ರಸಂಗಗಳು ಪ್ರದರ್ಶನಗೊಂಡವು.