ಉಡುಪಿಯಲ್ಲಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ
ಉಡುಪಿ, ಜ.1: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಇಂದು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೋಟ, ಜಕಣಾಚಾರಿ ಅವರ ಶಿಲ್ಪಕಲಾ ಕುಶಲತೆ ಇಂದು ಜಗತ್ತಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿರುವುದು ಅವರ ಪ್ರತಿಭೆಗೆ ಸಿಕ್ಕಿರುವ ಮನ್ನಣೆಯಾಗಿದೆ. ಹಾಗೂ ಶಿಲ್ಪಕಲೆಗೆ ಅವರು ನೀಡಿರುವ ಕೊಡುಗೆಗೆ ಸಾಕ್ಷಿಯಾಗಿದೆ ಎಂದರು.
ಅಮರಶಿಲ್ಪಿ ಜಕಣಾಚಾರಿ ಹೊಯ್ಸಳ ಮತ್ತು ಕಲ್ಯಾಣ ಚಾಲುಕ್ಯ ಶೈಲಿಯ ಅದ್ಭುತ ದೇವಾಲಯಗಳನ್ನು ನಿರ್ಮಿಸಿದ ಶಿಲ್ಪಿ. ಬೇಲೂರು ಮತ್ತು ಹಳೇಬೀಡಿನ ಕೆತ್ತನೆಗಳಿಗೆ ಅವರು ಹೆಸರುವಾಸಿಯಾಗಿದ್ದಾರೆ. ಭಾರತೀಯ ಕಲಾಕ್ಷೇತ್ರಕ್ಕೆ ಅವರು ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ. ಇವರು ನಿರ್ಮಿಸಿದ ದೇವಾಲಯಗಳು ಅತ್ಯಂತ ಸೂಕ್ಷ್ಮ ಮತ್ತು ನಾಜೂಕಾದ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ ಎಂದರು.
ಜಕಣಾಚಾರಿ ಅವರ ಶಿಲ್ಪಕಲೆ, ಕರಕುಶಲತೆ, ಅವರ ಐತಿಹಾಸಿಕ ವಿಚಾರಗಳು ಸಮಾಜಕ್ಕೆ ಆದರ್ಶವಾಗಿದ್ದು, ಮುಂದಿನ ಜನಾಂಗ ಇದನ್ನೆಲ್ಲ ಅರಿತುಕೊಳ್ಳಬೇಕು. ಜಕಣಾಚಾರಿಯವರ ಆದರ್ಶವನ್ನು ಇಟ್ಟುಕೊಂಡು ವಿಶ್ವಕರ್ಮ ಸಮಾಜ ತನ್ನ ಕುಸುರಿ ಕೆಲಸದ ಮೂಲಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದ ಅವರು, ನಶಿಸಿಹೋಗುತ್ತಿರುವ ಕಲೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕುಶಲಕರ್ಮಿಗಳಿಗೆ ಕೇಂದ್ರ ಸರಕಾರ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿದೆ ಎಂದರು.
ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಅಮರಶಿಲ್ಪ ಜಕಣಾಚಾರಿ ನಾಡಿನ ಶಿಲ್ಪಕಲೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುವುದರೊಂದಿಗೆ ಶಿಲ್ಪಕಲಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಇಂತಹ ಅಮರಶಿಲ್ಪಕಾರರು ಹಲವು ಶತಮಾನದವರಿಗೂ ಅವಿಸ್ಮರಣೀಯರಾಗಿದ್ದಾರೆ ಎಂದರು.
ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಜಕಣಾಚಾರಿ ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಶಿಲ್ಪಕಲೆಗೆ ತನ್ನದೇ ಆದ ವೈಶಿಷ್ಟವಿದೆ. ಶಿಲ್ಪಿಗಳು ಭಾವನಾತ್ಮಕವಾಗಿ ಕೆಲಸ ನಿರ್ವಹಿಸುವವರು. ನಾಡಿನ ಪರಂಪರೆ ಹಾಗೂ ಸಂಸ್ಕೃತಿ ವಿಜೃಂಭಿಸುವ ಗುಡಿ-ಗೋಪುರಗಳನ್ನು ನಿರ್ಮಿಸುವುದರೊಂದಿಗೆ, ತಮ್ಮ ಅಂತಃಕರಣಗಳಲ್ಲಿ ರೂಪುಗೊಂಡ ದೇವಾನುದೇವತೆಗಳ ರೂಪಗಳನ್ನು ಯಥಾವತ್ತಾಗಿ ಶಿಲ್ಪ, ಪ್ರತಿಮೆ, ವಿಗ್ರಹ, ಪುತ್ಥಳಿಗಳಲ್ಲಿ ಪಡಿಮೂಡಿಸುತ್ತಾರೆ. ವಿಶ್ವಕರ್ಮ ಪರಂಪರೆ ಪ್ರತಿಭಾ ಸಂಪನ್ನರ, ಸೃಜನಶೀಲರ, ಕ್ರಿಯಾಶೀಲರ ಹಾಗೂ ಜ್ಞಾನವಿಜ್ಞಾನಿಗಳ ಪರಂಪರೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಿಲ್ಪಿ ಕಾರ್ಕಳದ ಕೆ.ಸತೀಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಪಂ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ದ.ಕ ಮತ್ತು ಉಡುಪಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಕುಂಜಿಬೆಟ್ಟು ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾಸಂಘದ ಉಪಾಧ್ಯಕ್ಷ ನಾಗರಾಜ್ ಆಚಾರ್ಯ ಹಾಗೂ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರೆ, ನಿವೃತ್ತ ತಹಶೀಲ್ದಾರ್ ಮುರುಳಿಧರ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.