ಬ್ರಾಹ್ಮಣಶಾಹಿ ನವಪೇಶ್ವೆ ವಾದಿಗಳ ವಿರುದ್ಧ ಹೋರಾಟ ಅಗತ್ಯ: ಪ್ರೊ.ಫಣಿರಾಜ್
ಭೀಮಾ ಕೋರೇಗಾಂವ್ ವಿಜಯೋತ್ಸವ: ಪಂಜಿನ ಮೆರವಣಿಗೆ
ಉಡುಪಿ, ಜ.1: ದಲಿತರ ಸ್ವಾಭಿಮಾನದ ಪ್ರತೀಕ, ದಲಿತರ ಅಸ್ಮಿತೆಯ ಸಂಕೇತವಾಗಿರುವ ಭೀಮಾ ಕೋರೇಗಾಂವ್ ವಿಜಯೋತ್ಸವವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ಉಡುಪಿಯಲ್ಲಿ ಗುರುವಾರ ಸಂಜೆ ವೇಳೆ ಪಂಜಿನ ಮೆರವಣಿಗೆ ನಡೆಸುವ ಮೂಲಕ ಆಚರಿಸಲಾಯಿತು.
ಉಡುಪಿಯ ಕೆಥೋಲಿಕ್ ಸೆಂಟರ್ ಬಳಿ ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಯಲ್ಲಿ ಸಾಗಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಕ್ಲಾಕ್ ಟವರ್ ಎದುರು ಸಮಾಪ್ತಿಗೊಂಡಿತು.
ಬಳಿಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಚಿಂತಕ ಪ್ರೋ.ಫಣಿರಾಜ್, ನವ ಪೇಶ್ವೆವಾದಿಗಳು ಇನ್ನೂ ಕೂಡ ದಲಿತರ ಮೇಲಿನ ದಮನವನ್ನು ಕಡಿಮೆ ಮಾಡಿಲ್ಲ. ಹಾಗಾಗಿ ಈ ಮಹರ್ ಪ್ರತಿಭಟನೆ ಇಂದಿಗೂ ಮುಂದುವರಿಯಬೇಕಾದ ಅಗತ್ಯವಿದೆ. ನವ ಪೇಶ್ವೆವಾದಿ ಆಡಳಿತವನ್ನು ಕೊನೆಗಾಣಿಸುವವರೆಗೂ ಭೀಮಾ ಕೋರೇಗಾಂವ್ ಹೋರಾಟ ಮುಂದುವರಿಯಬೇಕಾಗಿದೆ ಎಂದು ತಿಳಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ಇದೊಂದು ವಿಜಯೋತ್ಸವ ಮಾತ್ರವಲ್ಲ ದಲಿತರ ಪ್ರತಿರೋಧದ ಪ್ರತೀಕವಾಗಿ ಬ್ರಾಹ್ಮಣಶಾಹಿ ನವ ಪೇಶ್ವೆವಾದಿಗಳ ವಿರುದ್ಧ ಸಂಘಟನಾತ್ಮಕ ಹೋರಾಟ ಮಾಡಬೇಕಾಗುದೆ. ಆ ಮೂಲಕ ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಮುಖಂಡರಾದ ರಾಜು ಕೆಸಿ ಬೆಟ್ಟಿನಮನೆ, ಶ್ಯಾಮ್ ಸುಂದರ್ ತೆಕ್ಕಟ್ಟೆ, ಅಣ್ಣಪ್ಪ ನಕ್ರೆ, ದೇವು ಹೆಬ್ರಿ, ರಾಜೇಂದ್ರ ಮಾಸ್ತರ್, ಶಂಕರ್ ದಾಸ್ ಚೇಂಡ್ಕಳ, ಜನಪರ ಕೊರಗರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಡೆ, ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡಾ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಇದ್ರೀಸ್ ಹೂಡೆ ಮೊದಲಾದವರು ಉಪಸ್ಥಿತರಿದ್ದರು.