×
Ad

ರಾ.ಹೆ.ಕಾಮಗಾರಿ| ಹಾನಿಗೊಂಡ ನೀರಿನ ಪೈಪ್‌ಲೈನ್ ದುರಸ್ಥಿ ಮಾಡಿ: ಹೆದ್ದಾರಿ ಪ್ರಾಧಿಕಾರಕ್ಕೆ ಸಂಸದ ಕೋಟ ಸೂಚನೆ

Update: 2026-01-01 19:54 IST

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಹಾನಿಗೊಂಡಿರುವ ಗ್ರಾಮಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರು ಸರಬರಾಜಿನ ಪೈಪ್‌ಲೈನ್‌ನ್ನು ದುರಸ್ತಿಗೊಳಿಸಿ, ಮರು ಅಳವಡಿಕೆ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಬೇಕೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಯಲ್ಲಿ ಆದ ಸಮಸ್ಯೆಯ ಬಗ್ಗೆ ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿಗಳನ್ನು ಕುಂದಾಪುರ ತಾಲೂಕಿನ ಕೋಟೇಶ್ವರ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ ಹಾಗೂ ಬ್ರಹ್ಮಾವರದ ಸಾಲಿಗ್ರಾಮ, ಕೋಟತಟ್ಟು, ಕೋಟ, ಮಣೂರು, ಪಾಂಡೇಶ್ವರ ಹಾಗೂ ಸಾಸ್ತಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡಿದ್ದು, ಈ ವೇಳೆ ವಿವಿಧ ಯೋಜನೆ ಯಡಿ ಅಳವಡಿಸಿರುವ ಸಾರ್ವಜನಿಕ ಕುಡಿಯುವ ನೀರು ಸರಬರಾಜಿನ ಪೈಪ್‌ಲೈನ್‌ಗಳು ಹಾನಿಗೊಂಡು ಸಾರ್ವಜನಿಕರ ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತಿದೆ. ಇವುಗಳ ದುರಸ್ತಿ ಕಾರ್ಯಗಳನ್ನು ಆದ್ಯತೆಯ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಬೇಕೆಂದು ಸೂಚಿಸಿದರು.

ಅಗಲೀಕರಣ ಕಾಮಗಾರಿಯಿಂದ ಮುಂದಿನ ದಿನಗಳಲ್ಲಿಯೂ ಪೈಪ್‌ಲೈನ್ ಹಾನಿಗೊಳಗಾಗುವ ಸಾಧ್ಯತೆಗಳಿವೆ. ಅಲ್ಲದೇ ಪೈಪ್‌ಲೈನ್‌ಗಳು ರಸ್ತೆ ಕ್ಯಾರೇಜ್ ವೇ ಮಧ್ಯದಲ್ಲಿ ಬರುತ್ತಿರುವುದರಿಂದ ಪ್ರತ್ಯೇಕ ಪೈಪ್‌ಲೈನ್ ಅಳವಡಿಕೆ ಅವಶ್ಯಕತೆ ಇದೆ. ದುರಸ್ತಿ ಹಾಗೂ ಪ್ರತ್ಯೇಕ ಪೈಪ್‌ಲೈನ್ ಅಳವಡಿಕೆಗೆ ಗ್ರಾಮ ಪಂಚಾಯತ್‌ಗಳಲ್ಲಾಗಲಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅನುದಾನದ ಲಭ್ಯತೆ ಇಲ್ಲದೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಲೇ ದುರಸ್ತಿ ಸೇರಿದಂತೆ ಇತರ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ ಎಂದವರು ನುಡಿದರು.

ಹಾಲಿ ರಸ್ತೆ ಮಧ್ಯ ಭಾಗದಲ್ಲಿರುವ ಪೈಪ್‌ಲೈನ್‌ಗಳಿಗೆ ಬದಲಿಯಾಗಿ ಹೊಸದಾಗಿ ಪೈಪ್‌ಲೈನ್ ಕಾಮಗಾರಿಗಳನ್ನು ಸರ್ವಿಸ್ ರಸ್ತೆಯಲ್ಲಿ ಬಾಕಿ ಉಳಿದಿರುವ 2.5 ಮೀಟರ್ ಜಾಗದಲ್ಲಿ ಅಳವಡಿಸುವುದು ಸೂಕ್ತ ಎಂದು ಸಂಸದ ಕೋಟ ಹೇಳಿದರು.

ಪ್ರಸ್ತುತ ದುರಸ್ತಿ ಸೇರಿದಂತೆ ಹೊಸ ಪೈಪ್‌ಲೈನ್‌ಗಳನ್ನು ಅಳವಡಿಸಲು ತಯಾರಿಸಿರುವ ಅಂದಾಜು ಪಟ್ಟಿಯ ವೆಚ್ಚ ಹೆಚ್ಚಿದ್ದು, ಈ ಬಗ್ಗೆ ಮರು ಪರಿಶೀಲಿಸಿ, ಸರಿಯಾದ ಅಂದಾಜು ವೆಚ್ಚ ತಯಾರಿಸಿ ನೀಡಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರಿಗೆ ತಿಳಿಸಿದ ಅವರು, ಇಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೈಗೊಂಡ ನಿರ್ಣಯದ ನಡವಳಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಕಚೇರಿಗೆ ಕಳುಹಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರಾದ ಯಶ್‌ಪಾಲ್ ಎ ಸುವರ್ಣ ಹಾಗೂ ಎ.ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಕಮಿಷನರ್ ರಶ್ಮಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ಅಭಿಯಂತರರು ಹಾಗೂ ಇತರರು ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News