ಗಂಗೊಳ್ಳಿ: ಮರಳು ದಿಬ್ಬದ ಸಮಸ್ಯೆ; ಮೀನುಗಾರರು ಹೈರಾಣ!
ಗಂಗೊಳ್ಳಿ (ಕುಂದಾಪುರ), ಫೆ.3: ಕೋಡಿ ಗಂಗೊಳ್ಳಿ ಅಳಿವೆ ಬಾಗಿಲಿನ ‘ಡ್ರೆಜ್ಜಿಂಗ್’ (ಹೂಳೆತ್ತುವಿಕೆ) ಕಾಮಗಾರಿ ಹೆಸರಿನಲ್ಲಿ ಹೂಳು ತೆಗೆಯಲು ಆಳುವ ಸರಕಾರಗಳು ಕೋಟ್ಯಂತರ ರೂಪಾಯಿ ಹಣ ವಿನಿಯೋಗಿಸಿದರೂ ಕೂಡ ಗಂಗೊಳ್ಳಿ ಬಂದರನ್ನು ಬಳಸುವ ಮೀನುಗಾರರ ಬದುಕು ಇನ್ನೂ ಅತಂತ್ರವಾಗಿಯೇ ಉಳಿದಿದೆ.
ಬಂದರಿನ ಅಳಿವೆ ಬಾಗಿಲಿನಲ್ಲಿರುವ ಮರಳು ದಿಬ್ಬಗಳ ನಡುವೆ ಬೋಟ್ ಚಲಾಯಿಸುವುದು, ಪ್ರತಿದಿನ ಸಮುದ್ರ ಹಾಗೂ ಪ್ರಕೃತಿಯೊಂದಿಗೆ ಸೆಣಸುತ್ತಾ ಬದುಕುವ ಮೀನುಗಾರರಿಗೂ ಕಠಿಣ ಸಾಹಸ ಎನ್ನಬಹುದು. ಹಲವು ಬಾರಿ ಇಲ್ಲಿ ಪ್ರಾಣಾಪಾಯದ ಸನ್ನಿವೇಶವೂ ಸೃಷ್ಟಿಯಾದದ್ದಿದೆ. ಹೀಗಾಗಿ ಇಲ್ಲಿ ವ್ಯವಸ್ಥೆಯ ವಿರುದ್ಧ ಆಕ್ರೋಶವೂ ಕೇಳಿಬರುತ್ತಿದೆ.
ಅಳಿವೆಬಾಗಿಲಿನ ಹೂಳಿನ ಸಮಸ್ಯೆ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗಡಿಭಾಗದ ಪ್ರಮುಖ ಮೀನುಗಾರಿಕಾ ಕೇಂದ್ರವಾದ ಗಂಗೊಳ್ಳಿ ಮತ್ತು ಕೋಡಿ ಅಳಿವೆ ಬಾಗಿಲಿನಲ್ಲಿ ಮೀನುಗಾರರಿಗೆ ಪ್ರಮುಖ ತಲೆನೋವಾಗಿದೆ. ಹೂಳಿನ ಸಮಸ್ಯೆ -ಹೂಳೆತ್ತುವ ಬೇಡಿಕೆ- ಕುರಿತಂತೆ ಮೀನುಗಾರರು ಹಲವು ವರ್ಷಗಳಿಂದ ಸರಕಾರಗಳ ಗಮನ ಸೆಳೆಯುತಿದ್ದಾರೆ. ಆದರೆ ಅದು ಮೀನುಗಾರರ ಬೇಡಿಕೆಯಾಗಿಯೇ ಉಳಿದುಕೊಂಡಿದೆ.
ಮರಳು ದಿಬ್ಬಗಳ ತೆರವಿಗೆ ಕಾಮಗಾರಿ ಹೆಸರಿನಲ್ಲಿ ಕೋಟಿ ಕೋಟಿ ಸುರಿದರೂ ಹೂಳು ಸಮಸ್ಯೆಗೆ ಮಾತ್ರ ಇದುವರೆಗೆ ಮುಕ್ತಿ ದೊರಕಿಲ್ಲ. ಕಳೆದ ವರ್ಷ ಮೀನುಗಾರರ ಸತತ ಪ್ರತಿಭಟನೆಗೆ ಮಣಿದ ಸರಕಾರ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಡ್ರೆಜ್ಜಿಂಗ್ (ಹೂಳು ತೆಗೆಯುವ ಕಾಮಗಾರಿ) ನಡೆಸಿತ್ತು. ಡ್ರೆಜ್ಜಿಂಗ್ ಮೂಲಕ ಎತ್ತಿದ ಹೂಳನ್ನು ಸಮುದ್ರದ ಆಳಕ್ಕೆ ಸಾಗಿಸುವ ಬದಲು, ಅಳಿವೆ ಬಾಗಿಲಿನ ಆಸುಪಾಸಿನಲ್ಲೇ ಸುರಿಯಲಾಗಿತ್ತು. ಪರಿಣಾಮವಾಗಿ, ಕಡಲ ಅಲೆಗಳ ಅಬ್ಬರಕ್ಕೆ ಆ ಮರಳು ಮತ್ತೆ ಅಳಿವೆಗೆ ಬಂದು ಸೇರಿದ್ದು, ಪರಿಸ್ಥಿತಿ ಮೊದಲಿಗಿಂತಲೂ ಗಂಭೀರವಾಗಿದೆ.
ಬ್ರೇಕ್ ವಾಟರ್ ಮುಳುವಾಯಿತೇ?: ಸ್ಥಳೀಯ ಮೀನುಗಾರರ ಪ್ರಕಾರ, ಅಳಿವೆಯಲ್ಲಿ ವೈಜ್ಞಾನಿಕವಾಗಿ ನಡೆಸದ ಬ್ರೇಕ್‌ವಾಟರ್ (ತಡೆಗೋಡೆ) ಕಾಮಗಾರಿಯೇ ಈ ಹೂಳು ತುಂಬಲು ಮುಖ್ಯ ಕಾರಣ ಎನ್ನಲಾಗುತ್ತಿದೆ. ನದಿ ನೀರು ಸರಾಗವಾಗಿ ಸಮುದ್ರ ಸೇರಲು ಅಡ್ಡಿಯಾಗುತ್ತಿದ್ದು, ಪಂಚಗಂಗಾವಳಿ ನದಿಯ ನೀರು ತಂದ ಹೂಳು ಸಂಗಮ ಸ್ಥಾನದಲ್ಲೇ ಶೇಖರಣೆಯಾಗುತ್ತಿದೆ. ಪ್ರಸ್ತುತ ಅಳಿವೆಯ ಪಂಚಗಂಗಾವಳಿ ಸಂಗಮ ಸ್ಥಾನದಿಂದ ಹಿನ್ನೀರುವರೆಗೆ ಬೃಹತ್ ಮರಳು ದಿಬ್ಬ ರಚನೆಯಾಗಿದೆ.
ಇದು ಮೀನುಗಾರಿಕೆಗಾಗಿ ಬಂದರಿನಿಂದ ತೆರಳುವ ಬೋಟ್‌ಗಳ ಸಂಚಾರಕ್ಕೆ ವಿಪರೀತ ಅಡ್ಡಿಯಾಗುತ್ತಿದೆ. ಅನೇಕ ಬೋಟ್‌ಗಳು ಮರಳು ದಿಬ್ಬಕ್ಕೆ ಸಿಲುಕಿ ಹಾನಿಗೊಂಡಿವೆ. ಮೀನುಗಾರಿಕೆ ಮುಗಿಸಿ ಬರುವ ಬೋಟುಗಳು ಅಪಾಯಕ್ಕೆ ಸಿಲುಕುವ ಹಲವು ನಿದರ್ಶನಗಳು ಇಲ್ಲಿದೆ.
ಕೋಟ್ಯಂತರ ರೂ. ತೆರಿಗೆ ಪಾವತಿಸುವ ಮೀನುಗಾರಿಕಾ ವಲಯಕ್ಕೆ ಕನಿಷ್ಠ ಸಂಚಾರ ವ್ಯವಸ್ಥೆಯನ್ನೂ ಕಲ್ಪಿಸಿ ಕೊಟ್ಟಿಲ್ಲ. ಹೂಳು ತೆಗೆಯುವ ಹೆಸರಿನಲ್ಲಿ ಹಣ ಲೂಟಿ ಮಾಡುವುದನ್ನು ನಿಲ್ಲಿಸಿ, ನುರಿತ ತಜ್ಞರಿಂದ ಸರ್ವೆ ಮಾಡಿಸಿ, ಶಾಶ್ವತವಾಗಿ ಹೂಳು ತೆಗೆಯುವ ತಂತ್ರಜ್ಞಾನ ಬಳಸಿ ಎಂಬುದು ಕೋಡಿ- ಗಂಗೊಳ್ಳಿ ಮೀನುಗಾರರ ಒಕ್ಕೊರಲ ಒತ್ತಾಯವಾಗಿದೆ.
ಒಂದು ವೇಳೆ ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಸಮುದ್ರಕ್ಕಿಳಿಯುವ ಬದಲು ಬೋಟ್ ಗಳನ್ನು ದಡದಲ್ಲೇ ನಿಲ್ಲಿಸಿ ಪ್ರತಿಭಟಿಸುವ ಎಚ್ಚರಿಕೆಯನ್ನು ಮೀನುಗಾರ ಮುಖಂಡರಾದ ನಾಗರಾಜ್ ಕಾಂಚನ್ ಮತ್ತು ಸುನಿಲ್ ಪೂಜಾರಿ ಕೋಡಿ ನೀಡಿದ್ದಾರೆ.
ಕೋಡಿ ಜೆಟ್ಟಿಯಲ್ಲಿ 50ಕ್ಕೂ ಮಿಕ್ಕಿ ಮೀನುಗಾರಿಕಾ ಬೋಟ್‌ಗಳಿದ್ದು, ನೂರಾರು ಯಾಂತ್ರೀಕೃತ ನಾಡದೋಣಿಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ಕೋಡಿ-ಗಂಗೊಳ್ಳಿ ಅಳಿವೆಯಲ್ಲಿ ಹೂಳು ದಿಗ್ಬಂಧನದ ಕಾರಣ ಬ್ರಹ್ಮಾವರ ತಾಲೂಕಿನ ಕೋಡಿಕನ್ಯಾಣದಿಂದ ಕೋಟ, ಪಡುಕರೆ, ಮಣೂರು, ಕುಂದಾಪುರ ತಾಲೂಕಿನ ಬೀಜಾಡಿ, ಗೋಪಾಡಿ, ಕೋಟೇಶ್ವರ ಹಳೆಅಳಿವೆ ಭಾಗದ ಮೀನುಗಾರರ ಕೇಂದ್ರ ಸ್ಥಾನವಾಗಿರುವ ಕೋಡಿ ಜೆಟ್ಟಿಯಲ್ಲಿ ಬೋಟ್ ನಿಲುಗಡೆಗೂ ಸಂಕಷ್ಟ ಎದುರಾಗಿದೆ.
ಪ್ರವಾಸೋದ್ಯಮಕ್ಕೂ ಹೊಡೆತ: ಅಳಿವೆ ಪ್ರದೇಶಗಳಲ್ಲಿ ಹೂಳು ತುಂಬಿರುವುದರಿಂದ ಮೀನುಗಾರಿಕಾ ಬೋಟ್ ಗಳಿಗೆ ಮಾತ್ರವಲ್ಲದೆ, ಪ್ರವಾಸಿ ಬೋಟ್‌ಗಳ ಸಂಚಾರಕ್ಕೂ ಇಲ್ಲಿ ಸಂಚಕಾರ ಬಂದಿದೆ. ಅವುಗಳ ಇಲ್ಲಿ ತಮ್ಮ ಸಂಚಾರವನ್ನೇ ಸ್ಥಗಿತಗೊಳಿಸಿವೆ. ಇದರಿಂದ ಪ್ರವಾಸೋದ್ಯಕ್ಕೆ ಮಾತ್ರವಲ್ಲದೇ ಸ್ಥಳೀಯ ವ್ಯಾಪಾರಸ್ಥರಿಗೂ ಆರ್ಥಿಕ ಹೊಡೆತ ಬಿದ್ದಿದೆ ಎನ್ನಲಾಗಿದೆ.