ಅದಾನಿ ಫೌಂಡೇಶನ್‌ನಿಂದ ಪಡುಬಿದ್ರಿ ಗ್ರಾಪಂಗೆ ಕಸ ನಿರ್ವಹಣಾ ವಾಹನ ಹಸ್ತಾಂತರ
ಉಡುಪಿ, ಫೆ.3: ಅದಾನಿ ಪವರ್ ಲಿಮಿಟೆಡ್ ಉಡುಪಿ, ಅದಾನಿ ಫೌಂಡೇಶನ್‌ನ ಸಹಯೋಗದಲ್ಲಿ ಸಿಎಸ್‌ಆರ್ ಕಾರ್ಯಕ್ರಮದ ಭಾಗವಾಗಿ ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಉಪಕ್ರಮದ ಅಡಿಯಲ್ಲಿ ಪಡುಬಿದ್ರಿ ಗ್ರಾಪಂಗೆ 14 ಲಕ್ಷ ರೂ. ವೆಚ್ಚದಲ್ಲಿ ವಿಶೇಷವಾಗಿ ವಿನ್ಯಾಸ ಗೊಳಿಸಿದ ಕಸದ ಸಂಗ್ರಹಣಾ ವಾಹನವನ್ನು ಹಸ್ತಾಂತರಿಸಲಾಯಿತು.
ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ಅನುಕೂಲವಾಗುವ ಹೈಡ್ರಾಲಿಕ್ ಡೆಕ್ ಹೊಂದಿರುವ ಈ ವಾಹನದ ಕೀಲಿ ಯನ್ನು ಅದಾನಿ ಗ್ರೂಪ್‌ನ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಅವರಿಗೆ ಗ್ರಾಪಂ ಕಚೇರಿ ಆವರಣದಲ್ಲಿ ಅಧಿಕೃತವಾಗಿ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಕಿಶೋರ್ ಆಳ್ವ, ಉಡುಪಿ ತಾಪ ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ಪಡುಬಿದ್ರೆ ಸಹಿತ ಏಳು ಗ್ರಾಪಂಗಳಿಗೆ ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮಾತ್ರ ಮೀಸಲಾದ ವಿಶೇಷ ಸಿಎಸ್‌ಆರ್ ಅನುದಾನವನ್ನು ಅದಾನಿ ಗ್ರೂಪ್ ನೀಡಿರುವುದಾಗಿ ತಿಳಿಸಿದರು. ಜೊತೆಗೆ ಶಿಕ್ಷಣ, ಆರೋಗ್ಯ, ಗ್ರಾಮೀಣ ಕ್ರೀಡೆಗಳ ಉತ್ತೇಜನ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿಯೂ ಆದಾನಿ ಸಂಸ್ಥೆಯ ಸಿಎಸ್‌ಆರ್ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
ಈವರೆಗೆ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯಲ್ಲಿ ಸಮುದಾಯ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮಾತ್ರ ಅದಾನಿ ಫೌಂಡೇಶನ್ ವತಿಯಿಂದ 1.92 ಕೋಟಿ ರೂ. ಮೊತ್ತದ ಸಿಎಸ್‌ಆರ್ ಅನುದಾನವನ್ನು ವೆಚ್ಚ ಮಾಡಲಾ ಗಿದೆ ಎಂದು ಅವರು ತಿಳಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ, ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ಹೇಮಚಂದ್ರ ಹಾಗೂ ಸದಸ್ಯರಾದ ರವಿ ಶೆಟ್ಟಿ, ಜ್ಯೋತಿ ಮೆನನ್, ಸುನಂದಾ, ಮುಬೀನಾ, ಶೋಭಾ ಶೆಟ್ಟಿ, ಸಂದೇಶ್, ಅಶೋಕ್, ಹರೀಶ್ ಶೆಟ್ಟಿ, ನವೀನ್ ಶೆಟ್ಟಿ, ಸುಜಾತಾ ಆಚಾರ್ಯ, ಶಶಿ ಹಾಗೂ ನಿಯಾಝ್, ಅದಾನಿ ಪವರ್ ಲಿಮಿಟೆಡ್ ಉಡುಪಿ ತಾಪ ವಿದ್ಯುತ್ ಸ್ಥಾವರದ ಪರವಾಗಿ ಸಹಾಯಕ ಮಹಾಪ್ರಬಂಧಕ ರವಿ ಆರ್. ಜೇರೆ ಹಾಗೂ ಆದಾನಿ ಫೌಂಡೇಶನ್‌ನ ಅನುದೀಪ್ ಉಪಸ್ಥಿತರಿದ್ದರು.