ಇಎಸ್‌ಐ ಆಸ್ಪತ್ರೆಗೆ ಖಾಯಂ ತಜ್ಞ ವೈದ್ಯರು ಸಹಿತ ವಿವಿಧ ಬೇಡಿಕೆಗೆ ಆಗ್ರಹಿಸಿ ಧರಣಿ
ಕುಂದಾಪುರ, ಮಾ.6: ಕಾರ್ಮಿಕರ ರಾಜ್ಯ ವಿಮಾ ಯೋಜನೆ(ಇಎಸ್‌ಐ) ಉಳಿಸುವಂತೆ, ಖಾಯಂ ತಜ್ಞ ವೈದ್ಯರನ್ನು ನೇಮಕ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಶುಕ್ರವಾರ ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ(ಸಿಐಟಿಯು) ವತಿಯಿಂದ ಕುಂದಾಪುರದ ಇಎಸ್‌ಐ ಕಚೇರಿ ಎದುರು ಧರಣಿ ನಡೆಸಲಾಯಿತು.
ಜಿಲ್ಲಾ ಹಂಚು ಕಾರ್ಮಿಕರ ಸಂಘದ ಅಧ್ಯಕ್ಷ ವಿ.ನರಸಿಂಹ ಮಾತನಾಡಿ, ಕುಂದಾಪುರದ ಇಎಸ್‌ಐ ಡಿಸ್ಪೆನ್ಸರಿ ವ್ಯಾಪ್ತಿ ಯಲ್ಲಿ 15 ಸಾವಿರದಷ್ಟು ವಿಮಾ ದಾರರು, ಕುಟುಂಬದವರಿದ್ದಾರೆ. 11 ವರ್ಷಗಳಿಂದ ಖಾಯಂ ವೈದ್ಯರಿಲ್ಲದೆ, ಈಗ ವೈದ್ಯರೊಬ್ಬರನ್ನು ನೀಡಿದ್ದಾರೆ. ಇದರೊಂದಿಗೆ ಇನ್ನೋರ್ವ ವೈದ್ಯರ ಅಗತ್ಯವಿದೆ. ತುರ್ತು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಅವಕಾಶ ಒದಗಿಸ ಬೇಕಾಗಿದೆ. ಖಾಲಿ ಇರುವ ಹುದ್ದೆಯನ್ನು ಶೀಘ್ರ ಭರ್ತಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ಮಾತನಾಡಿ, ಇಲ್ಲಿ ಔಷಧಿ ಕೊರತೆಯಿದ್ದು, ಎಲ್ಲಿಂದಲೋ ಪೂರೈಕೆ ಮಾಡಲು ಸಿಬಂದಿ ಕಷ್ಟ ಪಡುತ್ತಿದ್ದಾರೆ. ನೂರು ಬೆಡ್‌ನ ಇಎಸ್‌ಐ ಜಿಲ್ಲಾಸ್ಪತ್ರೆ ಮಂಜೂರಾಗಿ 4 ವರ್ಷ ಕಳೆದರೂ, ಇನ್ನೂ ಯಾವುದೇ ಕಾಮಗಾರಿ ಶುರುವಾಗಿಲ್ಲ. ಇದು ಖಾಸಗಿ ಲಾಬಿಯೋ ಅಥವಾ ಆಳುವ ವರ್ಗಕ್ಕೆ ಇಚ್ಚಾಶಕ್ತಿ ಇಲ್ಲವೋ ಎಂದು ಪ್ರಶ್ನಿಸಿದರು.
ಕುಂದಾಪುರ ಡಿಸ್ಪೆನ್ಸರಿ ಮೊದಲ ಮಹಡಿ ಕಟ್ಟಡದಿಂದ ಸಮಸ್ಯೆ ಯಾಗುತ್ತಿದ್ದು, ನೆಲ ಮಾಳಿಗೆಯಲ್ಲಿ ಕಾರ್ಯನಿರ್ವ ಹಿಸುವಂತೆ, ಸ್ಥಳೀಯ ಇಎಸ್‌ಐ ಕಚೇರಿ ಮಂಜೂರು, ಕಾರ್ಮಿಕರ ರಾಜ್ಯ ವಿಮಾ ಯೋಜನೆ ಉಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೆಂಚು ಕಾರ್ಮಿಕರ ಸಂಘದ ಉಪಾಧ್ಯಕ್ಷ ಜಿ.ಡಿ. ಪಂಜು, ಪ್ರಮುಖರಾದ ಚಂದ್ರಶೇಖರ್, ಸುರೇಂದ್ರ ಎಚ್., ಚಂದ್ರ ಪೂಜಾರಿ, ಪ್ರಕಾಶ್ ಕೋಣಿ, ಮಹಾಬಲ ವಡೇರಹೋಬಳಿ, ಆನಂದ ಶೆಟ್ಟಿ, ಲಕ್ಷ್ಮಣ ಮೊದಲಾದವರು ಉಪಸ್ಥಿತರಿದ್ದರು.