15 ವರ್ಷಗಳಿಂದ ತಲೆಮರೆಸಿಕೊಂಡಿದ್ದ 10 ಪ್ರಕರಣಗಳ ಆರೋಪಿಯ ಬಂಧನ
ಉಡುಪಿ, ಮಾ.6: ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಒಟ್ಟು 10 ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ 15ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಕುಂಭಾಶಿ ಕೊರವಾಡಿ ರಸ್ತೆಯ ಮೂಲದ, ಪ್ರಸ್ತುತ ಬೆಂಗಳೂರು ಆರ್‌ಕೆ ಮಠ ಲೇಔಟ್ ಬಾಡಿಗೆಮನೆ ನಿವಾಸಿ ವಿಘ್ನೇಶ್ವರ ಐತಾಳ್(56) ಎಂದು ಗುರುತಿಸಲಾಗಿದೆ. ಈತ ಪ್ರಕರಣ ದಾಖಲಾದ ಬಳಿಕ ಅಂದರೆ 2011ರಿಂದ ತಲೆಮರೆಸಿಕೊಂಡಿದ್ದು, ಆತನ ವಿರುದ್ಧದ ಎಲ್ಲಾ ಪ್ರಕರಣಗಳಲ್ಲಿ ದೋಷರೋಪಣಾ ಪತ್ರ ತಯಾರಿಸಿ ನ್ಯಾಯಾಲಯಕ್ಕೆ ನಿವೇದಿಸಲಾಗಿತ್ತು.
ಆರೋಪಿ ವಿಘ್ನೇಶ್ವರ ಐತಾಳ್ ನ್ಯಾಯಾಲಯಕ್ಕೆ ಹಾಜರಾಗದೇ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದು ಸುಮಾರು 10ಕ್ಕಿಂತಲೂ ಹೆಚ್ಚು ಬಾರಿ ವಾರೆಂಟ್ ಹೊರಡಿಸಲಾಗಿತ್ತು. ಬಳಿಕ ನ್ಯಾಯಾಲಯವು ಆತನ ವಿರುದ್ಧ ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತ್ತು.
ಈತನನ್ನು ಉಡುಪಿ ನಗರ ಪೊಲೀಸ್ ಠಾಣಾ ಪ್ರಭಾರ ನಿರೀಕ್ಷಕ ಮಹೇಶ ಪ್ರಸಾದ್ ಮಾರ್ಗದರ್ಶನದಲ್ಲಿ, ಉಡುಪಿ ನಗರ ಠಾಣಾ ಎಸ್ಸೈ ಭರತೇಶ ಕಂಕಣವಾಡಿ, ಸಿಬ್ಬಂದಿ ಪ್ರಸನ್ನ ಸಿ., ರಮೇಶ, ಆನಂದ ಅವರ ತಂಡ ಮಾ.5ರಂದು ಬೆಂಗಳೂರಿನ ತಲಘಟ್ಟಪುರದಲ್ಲಿ ಪತ್ತೆ ಹಚ್ಚಿ, ವಶಕ್ಕೆ ಪಡೆದುಕೊಂಡಿದೆ. ಮಾ.6ರಂದು ನ್ಯಾಯಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.