ಉಡುಪಿ| ರಾಜ್ಯ ಬಜೆಟ್ - 2026: ಗಣ್ಯರ ಪ್ರತಿಕ್ರಿಯೆಗಳು...
"ಸಮತೋಲಿತ, ದೂರದೃಷ್ಟಿಯ ಬಜೆಟ್"
ಉಡುಪಿ : ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಮಂಡಿಸಿದ 17ನೇ ಬಜೆಟ್ ಮೂಲಕ ತಾವು ಆರ್ಥಿಕ ತಜ್ಞ ರೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಬಜೆಟ್ ದೂರದೃಷ್ಟಿಯುಳ್ಳ ಹಾಗೂ ಆರ್ಥಿಕ ಶಿಸ್ತಿನ ಬಜೆಟ್ ಆಗಿದ್ದು, ರಾಜ್ಯದ ಎಲ್ಲಾ ವರ್ಗದ ಜನರು, ಎಲ್ಲಾ ಪ್ರದೇಶಗಳು ಹಾಗೂ ವಿವಿಧ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಮಂಡಿಸಲಾಗಿದೆ.
ವಿಶೇಷವಾಗಿ ಆರೋಗ್ಯ, ಶಿಕ್ಷಣ, ಕೃಷಿ, ಜಲಸಂಪನ್ಮೂಲ ಮತ್ತು ಉದ್ಯೋಗ ಸೃಷ್ಟಿ ಸೇರಿದಂತೆ ಮೂಲಭೂತ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ರಾಜ್ಯದ ಅಭಿವೃದ್ಧಿಗೆ ಬಲ ನೀಡಲಿದೆ. ಕೃಷಿ ವಿಸ್ತಾರ ಯೋಜನೆಗೆ 100 ಕೋಟಿ ರೂ. ಮೀಸಲಿಟ್ಟಿರುವುದು ಕೃಷಿಕರಿಗೆ ಉತ್ತೇಜನ ನೀಡಲಿದೆ. ಪಂಚ ಗ್ಯಾರಂಟಿ ಯೋಜನೆಗಳಿಗೆ ಅಗತ್ಯ ಹಣ ಮೀಸಲಿಟ್ಟು ಯಾವುದೇ ಕಾರಣಕ್ಕೂ ಈ ಯೋಜನೆಗಳು ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿರುವುದು ಜನ ಸಾಮಾನ್ಯರಿಗೆ ಭರವಸೆ ನೀಡಿದೆ.
ಗೃಹಲಕ್ಷ್ಮೀ ಯೋಜನೆಗೆ 28,608 ಕೋಟಿ ಸೇರಿದಂತೆ ಮಹಿಳಾ ಪರ ಯೋಜನೆಗಳಿಗೆ ಒಟ್ಟು 94,663 ಕೋಟಿ ರೂ. ಮೀಸಲಿಟ್ಟಿರುವುದು ಮಹಿಳಾ ಸಬಲೀಕರಣದತ್ತ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಪೌಷ್ಠಿಕ ಆಹಾರ ಒದಗಿಸುವ ಯೋಜನೆ ಪುನಃ ಆರಂಭಿಸುವುದು ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ದೊಡ್ಡ ಸಹಾಯವಾಗಲಿದೆ.
ಧಾರವಾಡ ಮತ್ತು ಬೆಂಗಳೂರಿನಲ್ಲಿ 18 ವರ್ಷದೊಳಗಿನ ಮಕ್ಕಳಿಗಾಗಿ ಮಾದಕ ವ್ಯಸನ ಮುಕ್ತಿ ಕೇಂದ್ರಗಳನ್ನು ಆರಂಭಿಸುವ ನಿರ್ಧಾರ ಹಾಗೂ ಜಿಲ್ಲಾ ಮಟ್ಟದಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲು ಅನುದಾನ ನೀಡಿರು ವುದು ಮಕ್ಕಳ ಭವಿಷ್ಯವನ್ನು ರಕ್ಷಿಸುವ ದೃಷ್ಟಿಯಿಂದ ಮಹತ್ವದ್ದಾಗಿದೆ. ಅನಿಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆಯಡಿ ಲಕ್ಷಾಂತರ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಅಪೌಷ್ಠಿಕತೆ ನಿವಾರಣೆಗೆ ಹೊಸ ಪೌಷ್ಠಿಕ ಪುನಶ್ಚೇತನ ಕೇಂದ್ರಗಳನ್ನು ಸ್ಥಾಪಿಸುವ ನಿರ್ಧಾರವೂ ಆರೋಗ್ಯ ಕ್ಷೇತ್ರಕ್ಕೆ ಬಲ ನೀಡಲಿದೆ.
-ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ.
ಬಜೆಟ್ ಒಟ್ಟಾರೆ ಹೂರಣ ಬೃಹತ್ ಶೂನ್ಯ
ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನ ಒಟ್ಟಾರೆ ಹೂರಣ ಬೃಹತ್ ಶೂನ್ಯ. ಹೊಸ ಹೊಸ ಪದಪುಂಜಗಳನ್ನು ಹೊಸೆಯುವುದಕ್ಕೆ ಸಿದ್ದರಾಮಯ್ಯ ನೀಡಿದ ಆದ್ಯತೆಯನ್ನು ಹೊಸ ಹೊಸ ಯೋಜನೆಗಳ ಸೃಷ್ಟಿಗೆ ನೀಡದೇ ಇರುವುದು ರಾಜ್ಯದ ದೌರ್ಭಾಗ್ಯ. ಈ ಬಾರಿಯ ಬಜೆಟ್‌ನ್ನು ‘11ಜಿ’ ಮಾದರಿಯಲ್ಲಿ ರೂಪಿಸಲಾ ಗಿದೆ ಎಂದು ಸಿದ್ದರಾಮಯ್ಯ ಬಜೆಟ್ ಪೂರ್ವಪೀಠಿಕೆಯಲ್ಲಿ ಹೆಮ್ಮೆಯಿಂದ ಹೇಳಿದ್ದಾರೆ. ಆದರೆ ಇಲಾಖಾವಾರು ಬಜೆಟ್ ವಿಶ್ಲೇಷಣೆ ನಡೆಸಿದಾಗ ಇದು 11ಜಿ ಬಜೆಟ್ ಬದಲು ‘11ಲೈ’ (ಹನ್ನೊಂದು ಸುಳ್ಳು) ಬಜೆಟ್ ಎಂದು ವಿಶ್ಲೇಷಿಸಬಹುದಾಗಿದೆ.
ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಸಾಲದ ಹೊರೆಯನ್ನು ಸಿದ್ದರಾಮಯ್ಯ ಈ ಬಜೆಟ್ ಮೂಲಕ ಹೊರಿಸಿ ದ್ದಾರೆ. ಬರೋಬ್ಬರಿ 1,32,000 ಕೋಟಿ ರೂ.ಸಾಲ ಮಾಡಲಾಗಿದ್ದು, ರಾಜ್ಯದ ಒಟ್ಟು ಹೊಣೆಗಾರಿಕೆ 8,24,389 ಕೋಟಿ ರೂ.ಗೆ ಏರಿಕೆಯಾಗಿರುವುದು ಕಳವಳದ ಸಂಗತಿಯಾಗಿದ್ದು, ಬಂಡವಾಳ ವೆಚ್ಚವನ್ನು 74,682 ಕೋಟಿ ರೂ.ಗೆ ಇಳಿಕೆ ಮಾಡಲಾಗಿದೆ. ಯಾವ ದೃಷ್ಠಿಯಿಂದ ನೋಡಿದರೂ ಇದು ವಿತ್ತೀಯ ಶಿಸ್ತಿನ ಪರಿಮಿತಿಯೊಳ ಗಿರುವ ಆಯವ್ಯಯ ಎಂದು ಒಪ್ಪಿಕೊಳ್ಳುವುದಕ್ಕೆ ಅಸಾಧ್ಯ.
-ಸುನಿಲ್‌ಕುಮಾರ್ ವಿ., ಕಾರ್ಕಳ ಶಾಸಕ.
ಕರಾವಳಿ ಪಾಲಿಗೆ ಕರಾಳ ಬಜೆಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಕರಾವಳಿ ಜನತೆಯ ಪಾಲಿಗೆ ಕರಾಳ ಬಜೆಟ್ ಆಗಿದೆ. ಕರಾವಳಿ ಜಿಲ್ಲೆಯನ್ನು ಸಂಪೂರ್ಣ ಹೊರಗಿಟ್ಟು ಕರಾವಳಿ ಜಿಲ್ಲೆಯ ಬಗ್ಗೆ ತಮ್ಮ ನಿರಂತರ ಕಡೆಗಣನೆ ಮುಂದುವರಿಸಿದ್ದಾರೆ. ಜಿಲ್ಲೆಯ ಆರೋಗ್ಯ, ಶಿಕ್ಷಣ, ಧಾರ್ಮಿಕ, ಮೀನುಗಾರಿಕೆ, ಪ್ರವಾಸೋದ್ಯಮ ಸಹಿತ ಮೂಲ ಸೌಕರ್ಯಗಳ ಬಗ್ಗೆ ಜಿಲ್ಲೆಯ ಜನತೆಯ ನಿರೀಕ್ಷೆಗೆ ಈ ಬಾರಿಯ ಬಜೆಟ್ ನಲ್ಲಿ ತಣ್ಣೀರು ಎರಚಿದ್ದಾರೆ.
ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಅನುದಾನದ ಬೇಡಿಕೆಗೆ ಬಜೆಟ್‌ನಲ್ಲಿ ಯಾವುದೇ ಅನುದಾನ ಒದಗಿಸಿಲ್ಲ, ಪ್ರತಿ ಬಾರಿಯಂತೆ ಸಿದ್ದರಾಮಯ್ಯ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೇ ಇರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗೆ ಯಾವುದೇ ಅನುದಾನ ಅಭಿವೃದ್ಧಿ ಯೋಜನೆಗಳನ್ನು ನೀಡದೇ ಸೇಡಿನ ರಾಜಕೀಯ ಮಾಡಲು ಮುಂದಾಗಿದ್ದಾರೆ.
-ಯಶಪಾಲ್ ಎ.ಸುವರ್ಣ, ಉಡುಪಿ ಶಾಸಕ
ಕರಾವಳಿ ಜಿಲ್ಲೆಗಳಿಗೆ ಮತ್ತೆ ಅನ್ಯಾಯ
ಕಾಂಗ್ರೆಸ್ ಸರಕಾರದ ಬಜೆಟ್ ಎಂಬುದು ಪ್ರಾದೇಶಿಕ ಅಸಮತೋಲನದ ಗೂಡಾಗಿದೆ. ಓಟ್ ಬ್ಯಾಂಕ್ ಮತ್ತು ಸ್ಥಳೀಯಾಡಳಿತ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಜನರ ಆಶಾಭಾವನೆಗಳಿಗೆ ವಿರುದ್ಧವಾದ ಬಜೆಟ್ ಇದಾಗಿದೆ. ಸಂಪತ್ತಿನ ಸಮಾನ ಹಂಚಿಕೆ ಎಂಬುದು ಸಿದ್ದರಾಮಯ್ಯ ಸರ್ಕಾರದಲ್ಲಿ ಮರಿಚೀಕೆ ಯಾಗಿದೆ. ಉಡುಪಿ ಜಿಲ್ಲೆಯನ್ನು ಕಡೆಗಣಿಸುತ್ತಿರುವುದು ಖಂಡನೀಯ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿ ದಂತೆ ಉಡುಪಿ ಜಿಲ್ಲೆಗೆ ಯಾವುದೇ ರೀತಿಯ ಉತ್ತೇಜನ ನೀಡಿಲ್ಲ.
-ಗುರ್ಮೆ ಸುರೇಶ್ ಶೆಟ್ಟಿ, ಕಾಪು ಶಾಸಕರು.
ನಿಧಿ ಬಳಕೆಗೆ ತೀವ್ರ ವಿರೋಧ
ಬಜೆಟ್‌ನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ 600 ಕೋಟಿ ರೂ. ವೆಚ್ಚದಲ್ಲಿ ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾಪಿಸಿರುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ. ತರಬೇತಿ ಕೇಂದ್ರ ಸ್ಥಾಪನೆ ರಾಜ್ಯ ಸರಕಾರದ ಕೆಲಸ. ಅದಕ್ಕೆ ಕಾರ್ಮಿಕ ಕಲ್ಯಾಣ ಮಂಡಳಿಯ 600ಕೋಟಿ ವೆಚ್ಚ ಮಾಡುವ ನಿರ್ಧಾರ ಕಾರ್ಮಿಕರಿಗೆ ಬಗೆಯುವ ದ್ರೋಹ.
-ಬಾಲಕೃಷ್ಣ ಶೆಟ್ಟಿ, ಅಧ್ಯಕ್ಷರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್.
ಸರ್ವಾಂಗೀಣ ಅಭಿವೃದ್ಧಿ ಚಿಂತನೆಯ ಬಜೆಟ್
ಆರೋಗ್ಯ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳಿಗೆ ಒತ್ತು ನೀಡಿ ಅನುದಾನ ಬಿಡುಗಡೆ, ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಯೋಜನೆಗಳು, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆಗಳು, ಕುಕ್ಕೆ, ಕೊಲ್ಲೂರು ದೇವಸ್ಥಾನಗಳ ಅಭಿವೃದ್ಧಿಗೆ ಪ್ರಾಧಿಕಾರ ರಚನೆ, ಪುತ್ತೂರಿಗೆ 300 ಹಾಸಿಗೆಗಳ ಆಸ್ಪತ್ರೆ, ಶಾಲೆಗಳ ಉನ್ನತೀಕರಣ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಜಾನಪದ ಸಂಗಮ, ಅನಂತಮೂರ್ತಿ ಹಾಗೂ ಕುವೆಂಪು ಹೆಸರಲ್ಲಿ ಅಧ್ಯಯನ ಪೀಠ, ಮೆಟ್ರೋ ಅಭಿವೃದ್ಧಿ, ಕೃಷಿ ಇಲಾಖೆಗೆ ಅನುದಾನ, ವಿವಿಧ ಇಲಾಖೆಯಲ್ಲಿನ ಹುದ್ದೆಗಳ ಭರ್ತಿ, ವೈಷ್ಣೋದೇವಿ ಯಾತ್ರೆಗೆ ಅನುದಾನ, ಕರಾವಳಿ ಪ್ರದೇಶದ ಸಮುದ್ರ ಕೃಷಿಗೆ ಪ್ರೋತ್ಸಾಹಕ ಅನುದಾನ....ಹೀಗೆ ಎಲ್ಲಾ ವರ್ಗಗಳನ್ನು ಬಜೆಟ್‌ನಲ್ಲಿ ಪರಿಗಣಿಸಲಾಗಿದ್ದು, ಇದೊಂದು ಉತ್ತಮ ಬಜೆಟ್.
-ಅಶೋಕ್ ಕುಮಾರ್ ಕೊಡವೂರು, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ.
ಗಾಯದ ಮೇಲೆ ಬರೆ ಎಳೆದ ಅಭಿವೃದ್ಧಿ ಶೂನ್ಯ ಬಜೆಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ರಾಜ್ಯವನ್ನು ಸಾಲದ ಶೂಲಕ್ಕೇರಿಸುವ ಜೊತೆಗೆ ಈಗಾಗಲೇ ವಿಧಿಸಿರುವ ದುಬಾರಿ ತೆರಿಗೆಗಳ ಮೂಲಕ ಗಾಯದ ಮೇಲೆ ಬರೆ ಎಳೆದ ಅಭಿವೃದ್ಧಿ ಶೂನ್ಯ ಬಜೆಟ್. ಅಧಿಕಾರ ಕ್ಕಾಗಿ ಜಾರಿಗೊಳಿಸಿದ್ದ ಗ್ಯಾರಂಟಿಗಳ ನಿರ್ವಹಣೆಗೆ ಪರದಾಡುತ್ತಿರುವ ರಾಜ್ಯ ಸರಕಾರ ಯುವ ನಿಧಿ ಗ್ಯಾರಂಟಿಗೆ ಎಳ್ಳು ನೀರು ಬಿಟ್ಟಂತಾಗಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಯಾವುದೇ ದೃಢ ಯೋಜನೆಗಳನ್ನು ರೂಪಿಸಿಲ್ಲ. ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ದಿವ್ಯ ನಿರ್ಲಕ್ಷ್ಯ ಧೋರಣೆ ತಳೆದ ರಾಜಕೀಯ ಪ್ರೇರಿತ ಬಜೆಟ್ ಇದಾಗಿದೆ.
-ಕುತ್ಯಾರು ನವೀನ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಉಡುಪಿ.
ದಾಖಲೆಗೆ ಮಾತ್ರ ಬಜೆಟ್...
ಕರ್ನಾಟಕ ರಾಜ್ಯದ 17ನೇ ಬಜೆಟ್ ದಾಖಲೆಗೆ ಮಾತ್ರ. ಇದರಲ್ಲಿ ರಾಜ್ಯದ ಸರ್ವತೋಮುಖ ಬೆಳವಣಿಗೆ ಖಂಡಿತಾ ಇಲ್ಲ. 16 ವರ್ಷದ ಕೆಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ್ದು ಒಪ್ಪುವಂತ ನಿರ್ಧಾರ. ಆದರೆ ಬಜೆಟ್‌ನ ಕೆಲವು ಘೋಷಣೆಗಳು, ಘೋಷಣೆಗೆ ಮಾತ್ರ. ಜಾರಿಯಾಗುವುದು ಕಷ್ಟ. ವಿತ್ತೀಯ ಕೊರತೆ ಹೆಚ್ಚಾಗಿದೆ. ಒಟ್ಟಾರೆಯಾಗಿ ಸಾಲದ ಪ್ರಮಾಣವು ಹೆಚ್ಚಾಗಿದೆ. ನೀರಸ ಬಜೆಟ್. ಜನಸಾಮಾನ್ಯರಿಗೆ ಮಧ್ಯಮ ವರ್ಗದವರಿಗೆ ಯಾವುದೇ ಪ್ರಯೋಜನವಿಲ್ಲ. ರಾಜ್ಯ ಸರ್ಕಾರದ ಬಜೆಟ್ ಅಂಕಿ ಅಂಶಗಳೇ ಪ್ರಶ್ನಾತೀತ. ಕರಾವಳಿಯ ಜಿಲ್ಲೆಗಳಿಗೆ ಏನು ಇಲ್ಲದ ಬಜೆಟ್.
-ಯೋಗೇಶ್ ವಿ ಶೆಟ್ಟಿ, ಜಿಲ್ಲಾಧ್ಯಕ್ಷ ಜಾತ್ಯತೀತ ಜನತಾದಳ.
ಗ್ಯಾರಂಟಿ, ಅಭಿವೃದ್ಧಿ ಯೋಜನೆಗಳ ಸಮತೋಲನದ ಬಜೆಟ್
ಮನೆ ಹಂಚಿಕೆಯಲ್ಲಿ ಸಾಮಾನ್ಯವರ್ಗಕ್ಕೆ ಸಹಾಯ ಧನ ಏರಿಕೆ, ಕೃಷಿಕರಿಗೆ ಶೂನ್ಯ ಬಡ್ಡಿ ಸಾಲ ಯೋಜನೆ. ಅನ್ನ ಭಾಗ್ಯ, ಗೃಹಲಕ್ಷ್ಮಿ, ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆಗಳಿಗೆ ಅನುದಾನ ಬಿಡುಗಡೆ. ವಿವಿಧ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರಿನ ಕ್ಯಾನ್ಸರ್ ಆಸ್ಪತ್ರೆ ಅಭಿವೃದ್ಧಿಗೆ ಬಂಪರ್ ಕೊಡುಗೆ, ಆರೋಗ್ಯ-ಶಿಕ್ಷಣಕ್ಕೆ ಒತ್ತು ನೀಡಿ ಅನುದಾನ ಬಿಡುಗಡೆ, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ..ಬಜೆಟ್‌ನಲ್ಲಿ ಎಲ್ಲಾ ಸಮುದಾಯ ಗಳನ್ನು ಪರಿಗಣಿಸಿ ಅನುದಾನ ಬಿಡುಗಡೆ. ಹೀಗೆ ಎಲ್ಲ ರೀತಿಯಲ್ಲೂ ಸಮತೋಲನದ ಬಜೆಟ್.
-ಭಾಸ್ಕರ ರಾವ್ ಕಿದಿಯೂರು, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ.
ಜನ ಕೇಂದ್ರಿತ ಅಭಿವೃದ್ಧಿಗೆ ಒತ್ತು
2026-27ರ ರಾಜ್ಯ ಬಜೆಟ್ ಜನಕೇಂದ್ರಿತ ಅಭಿವೃದ್ಧಿ, ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ನ್ಯಾಯವನ್ನು ಒಟ್ಟಿಗೆ ಮುಂದುವರಿಸುವ ದೃಷ್ಟಿಯಿಂದ ರೂಪಿಸಲಾಗಿದೆ. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಆದ್ಯತೆ ನೀಡುತ್ತಾ ಗ್ಯಾರಂಟಿ ಯೋಜನೆ ಗಳ ಮೂಲಕ ಜನರ ಜೀವನಮಟ್ಟವನ್ನು ಸುಧಾರಿಸುವ ಸರಕಾರದ ಸಂಕಲ್ಪದ ಪ್ರತಿಬಿಂಬ. ಸಾರ್ವಜನಿಕ ಶಿಕ್ಷಣ, ಆರೋಗ್ಯ, ಕೃಷಿ, ಮೂಲಸೌಕರ್ಯ, ಉದ್ಯೋಗ ಸೃಷ್ಟಿ, ಕೈಗಾರಿಕೆ ಹಾಗೂ ಹೂಡಿಕೆಗಳ ಉತ್ತೇಜನದ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಲ ನೀಡಲಾಗಿದೆ. ವಿದೇಶಿ ಹೂಡಿಕೆ ಆಕರ್ಷಣೆ, ತಂತ್ರಜ್ಞಾನ ಮತ್ತು ಕೈಗಾರಿಕಾ ಬೆಳವಣಿಗೆಯೊಂದಿಗೆ ಕರ್ನಾಟಕ ವನ್ನು ಜಾಗತಿಕ ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿಡುವ ಸರಕಾರದ ದೃಢಸಂಕಲ್ಪಕ್ಕೆ ಒತ್ತು.
- ಚಂದ್ರಶೇಖರ ಶೆಟ್ಟಿ, ರಾಜ್ಯ ಉಪಾಧ್ಯಕ್ಷರು ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸೆಲ್.
ರಾಜ್ಯ ಬಜೆಟ್ ಐತಿಹಾಸಿಕ
ಈ ಬಾರಿಯ ರಾಜ್ಯ ಬಜೆಟ್ ಐತಿಹಾಸಿಕವಾದುದು. 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧವು ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಪೂರಕವಾದ ಕಾಯ್ದೆ. ಆದರೆ ಇದರಲ್ಲಿ ಯುವ ಆಯೋಗ ರಚನೆ ಮಾಡ ಬೇಕಾಗಿತ್ತು. ಅದು ಸಾಧ್ಯವಾಗದೇ ಇರುವುದು ಯುವ ಜನತೆಯಲ್ಲಿ ನಿರಾಸೆ ಮೂಡಿಸಿದೆ. ಯು.ಆರ್.ಅನಂತ ಮೂರ್ತಿ ಮತ್ತು ಕುವೆಂಪು ಅಧ್ಯಯನ ಪೀಠಗಳು ಘೋಷಣೆಯಾಗಿರುವುದು ನಿಜಕ್ಕೂ ಸ್ವಾಗತಾರ್ಹ. ಸರಕಾರಿ ವೈದ್ಯಕೀಯ ಕಾಲೇಜು ಉಡುಪಿ ಜಿಲ್ಲೆಯಲ್ಲಿ ಸ್ಥಾಪನೆಯಾಗ ಬೇಕೆಂಬುದು ಹಲವು ದಶಕಗಳ ಬೇಡಿಕೆ. ಆದರೆ ನಮ್ಮ ಜಿಲ್ಲೆಗೆ ಸಿಗದೆ ನೆರೆಯ ದ.ಕ. ಜಿಲ್ಲೆಗೆ ದೊರೆತಿದೆ.
-ರಾಮಾಂಜಿ, ನಮ್ಮಭೂಮಿ ಉಡುಪಿ.