×
Ad

ಶಿಷ್ಟಾಚಾರದ ಉಲ್ಲಂಘನೆ: ಉಡುಪಿ ಜಿಲ್ಲಾಡಳಿತದ ವಿರುದ್ಧ ಶಾಸಕರ ಆಕ್ರೋಶ

ತ್ರೈಮಾಸಿಕ ಕೆಡಿಪಿಯಲ್ಲಿ ಕಾವೇರಿದ ಚರ್ಚೆ

Update: 2026-05-16 19:58 IST

ಉಡುಪಿ, ಮೇ 16: ಜಿಲ್ಲೆಯಲ್ಲಿ ಸರಕಾರಿ ಕಾರ್ಯಕ್ರಮದ ವೇಳೆ ಸಂಬಂಧಿತ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡದೇ ಉಲ್ಲಂಘಿಸಲಾಗುತಿದ್ದು, ಕ್ಷೇತ್ರದ ಶಾಸಕರನ್ನು ಕಡೆಗಣಿಸಲಾಗುತ್ತಿರುವ ಬಗ್ಗೆ ಜಿಲ್ಲೆಯ ಐವರು ಶಾಸಕರು ಸುಮಾರು ಏಳು ತಿಂಗಳ ಬಳಿಕ ಶನಿವಾರ ಕರೆಯಲಾದ ಉಡುಪಿ ಜಿಲ್ಲಾ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯಲ್ಲಿ ಶಿಷ್ಟಾಚಾರದ ಉಲ್ಲಂಘನೆ ಪದೇ ಪದೇ ಆಗುತಿದ್ದು, ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರೇ ಇದ್ದಾರೆ ಎಂಬ ಕಾರಣಕ್ಕಾಗಿ ಈ ರೀತಿಯಲ್ಲಿ ನಿರ್ಲಕ್ಷ ಮಾಡಲಾಗುತ್ತಿದೆ ಎಂಬ ಮಾತು ವೇದಿಕೆಯಲ್ಲಿ ಕೇಳಿಬಂತು. ಈ ವಿಷಯದ ಕುರಿತು ಚರ್ಚೆ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯಿತು.

ಪ್ರತಿ ಸಭೆಯಲ್ಲಿ ಇದೇ ಚರ್ಚೆ ಪ್ರಧಾನವಾಗಿ ನಡೆಯುತ್ತಿದ್ದು, ಇದಕ್ಕೆ ಪರಿಹಾರವೇ ಇಲ್ಲದಂತಾಗಿದೆ. ಉಸ್ತುವಾರಿ ಸಚಿವರ ಹಾಗೂ ಜಿಲ್ಲಾಧಿಕಾರಿ ಗಳ ಗಮನಕ್ಕೆ ಬಾರದೇ ಇವು ನಡೆಯುತ್ತಿದೆಯೇ ಎಂದು ಪ್ರಶ್ನಿಸಿದ ಶಾಸಕರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಒಂದು ಹಂತದಲ್ಲಿ ಸಭಾ ತ್ಯಾಗದ ಮಾತನ್ನೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರಸ್ತಾಪಿಸಿದರೂ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಹೆಬ್ಬಾಳ್ಕರ್ ಕಟುವಾದ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ವಿಷಯ ತಣ್ಣಗಾಯಿತು.

ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಅವರು ಕ್ಷೇತ್ರದ ಶಾಸಕರ ಗಮನಕ್ಕೆ ಬಾರದೇ ಅಧಿಕಾರಿಗಳೇ ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳುತ್ತಿರುವ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಆರಂಭಗೊಂಡ ಶಿಷ್ಟಾಚಾರ ಪಾಲನೆ ಕುರಿತ ಚರ್ಚೆ ಮುಂದೆ ಸುನಿಲ್‌ ಕುಮಾರ್ ಅವರ ಮಧ್ಯಪ್ರವೇಶದೊಂದಿಗೆ ತೀವ್ರಗತಿಯನ್ನು ಪಡೆಯಿತು. ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಬೈಂದೂರು ಶಾಸಕ ಗಂಟಿಹೊಳೆ ಅವರು ಇದಕ್ಕೆ ಧ್ವನಿಗೂಡಿಸಿದರು.

ಕಾರ್ಕಳದ ತಹಶೀಲ್ದಾರರು ತಮ್ಮ ಗಮನಕ್ಕೆ ತಾರದೇ ಕಾಂಗ್ರೆಸ್ ಕಚೇರಿಯಲ್ಲಿ ಹಕ್ಕುಪತ್ರವನ್ನು ವಿತರಿಸಿದ್ದಾರೆ ಎಂದು ಕಿಡಿ ಕಾರಿದರ ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿರುವ ರಂಗಾಯಣದ ಕಿರುಪುಸ್ತಿಕೆಯಲ್ಲಿ ಶಾಸಕರ ಹಾಗೂ ಸಂಸದರ ಭಾವಚಿತ್ರವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಇದರಿಂದ ತೀವ್ರ ಇರುಸುಮುರಿಸಿಗೊಳಗಾದ ಉಸ್ತುವಾರಿ ಸಚಿವೆ ಗರಂ ಆಗಿ ಕಾರ್ಕಳ ತಹಶೀಲ್ದಾರ್‌ರಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾರಿಂದ ವಿವರಣೆಯನ್ನು ಕೋರಿದರು. ಅವರು ತಮ್ಮ ಸಮಜಾಯಿಷಿಯನ್ನು ನೀಡಿದರಾದರೂ ಅದು ಶಾಸಕರಿಗೆ ಹಾಗೂ ಸಚಿವರಿಗೆ ಸಂಪೂರ್ಣ ತೃಪ್ತಿಯನ್ನು ನೀಡಲಿಲ್ಲ. ಕಾರ್ಕಳ ತಹಶೀಲ್ದಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಯಾವುದೇ ರೀತಿಯ ಸರಕಾರಿ ಸಭೆ, ಸಮಾರಂಭಗಳನ್ನು ಆಯೋಜಿಸಿ, ಆಹ್ವಾನ ಪತ್ರಿಕೆ ಮುದ್ರಿಸುವಾಗ ಸರಕಾರ ಸೂಚಿಸಿರುವ ಹಾಗೆ ಶಿಷ್ಠಾಚಾರದ ಪ್ರಕಾರ ಜನಪ್ರತಿನಿಧಿಗಳ ಹೆಸರನ್ನು ನಮೂದಿಸಬೇಕು. ಕಾರ್ಯಕ್ರಮ ಮಾಡುವಾಗ ಸ್ಥಳೀಯ ಶಾಸಕರ ಗಮನಕ್ಕೆ ಕಡ್ಡಾಯವಾಗಿ ತರಬೇಕು. ಈ ಬಗ್ಗೆ ಕಳೆದ ಸಭೆಯಲ್ಲಿ ಸೂಚಿಸಿದ್ದರೂ ಸಹ ಪಾಲನೆ ಆಗುತ್ತಿಲ್ಲ ಎಂಬ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕಾರ್ಕಳ ತಹಶೀಲ್ದಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಶಿಷ್ಠಾಚಾರ ಉಲ್ಲಂಘಿಸಿದ ಬಗ್ಗೆ ಕಾರಣ ಕೇಳಿ ನೋಟೀಸ್ ನೀಡುವಂತೆ ಸೂಚಿಸಿದಲ್ಲದೇ, ಮುಂಬರುವ ದಿನಗಳಲ್ಲಿ ಇದು ಪುನರಾವರ್ತನೆ ಆದಲ್ಲಿ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಕಟುವಾದ ಎಚ್ಚರಿಕೆ ನೀಡಿದರು.

ನಂತರ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಇಲಾಖೆಯ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಸಂಬಂಧಿಸಿ ದಂತೆ ಇನ್ನೊಮ್ಮೆ ಇದೇ ವಿಷಯ ಚರ್ಚೆಗೆ ಬಂತು. ಸಚಿವೆ ಮತ್ತೆ ಡಿಎಚ್‌ಓ ಡಾ.ಬಸವರಾಜ ಹುಬ್ಬಳ್ಳಿ ಅವರನ್ನು ಈ ವಿಷಯದಲ್ಲಿ ತರಾಟೆಗೆ ತೆಗೆದುಕೊಂಡರು. ವಿಧಾನ ಪರಿಷತ್ ಸದಸ್ಯ ಜೆಡಿಎಸ್ ಶಾಸಕ ಎಸ್.ಎಲ್.ಬೋಜೆ ಗೌಡ ಅವರೂ ಚರ್ಚೆಯಲ್ಲಿ ಭಾಗವಹಿಸಿದ್ದರು.

ಉಡುಪಿ ಪತ್ರಕರ್ತರಿಗೆ ತ್ರೈಮಾಸಿಕ ಕೆಡಿಪಿ ನಿಷಿದ್ಧ!

ಜಿಲ್ಲಾ ಮಟ್ಟದಲ್ಲಿ ಬಹುಮುಖ್ಯ ಚರ್ಚೆಗಳು ನಡೆಯುವ ತ್ರೈಮಾಸಿಕ ಕೆಡಿಪಿ ಸಭೆಗೆ ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪತ್ರಕರ್ತರಿಗೆ ಸಭೆಯಲ್ಲಿ ಕುಳಿತು ವರದಿ ಮಾಡಲು ಅವಕಾಶ ಗಳಿದ್ದರೂ, ಉಡುಪಿ ಜಿಲ್ಲೆಯ ಪತ್ರಕರ್ತರಿಗೆ ಇದನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಆಡಳಿತದ ಸಂದರ್ಭದಲ್ಲಿ ಹೇರಲಾದ ಈ ನಿಷೇಧ ಒಂದೆರಡು ಅಪವಾದ ಗಳನ್ನು ಹೊರತು ಪಡಿಸಿ ಕಾಂಗ್ರೆಸ್‌ನ ‘ಪಾರದರ್ಶಕ’ ಆಡಳಿತದ ಸಂದರ್ಭದ ಇಂದು ಸಹ ಚಾಚೂತಪ್ಪದೇ ಮುಂದುವರಿದುಕೊಂಡು ಬಂದಿದೆ.

ಇಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಳಿ ಈ ವಿಷಯವನ್ನು ಪ್ರಸ್ತಾಪಿಸಿ ಉಡುಪಿಯ ಪತ್ರಕರ್ತ ರಿಗೂ ವರದಿಗೆ ಅವಕಾಶ ನೀಡುವಂತೆ ಮನವಿ ಮಾಡಲಾಯಿತು. ಆದರೆ ಸಚಿವೆ ಸೇರಿದಂತೆ ಅಧಿಕಾರಿಗಳು ಇದನ್ನು ಖಡಾಖಂಡಿತವಾಗಿ ನಿರಾಕರಿಸಿದರು. ವಿಧಾನಪರಿಷತ್ ಸದಸ್ಯ ಬೋಜೆಗೌಡರು ಉಳಿದೆಲ್ಲ ಜಿಲ್ಲೆಗಳಲ್ಲಿ ಪತ್ರಕರ್ತರಿಗೆ ಪ್ರವೇಶವಿರುವುದನ್ನು ಗಮನಕ್ಕೆ ತಂದರೂ ಸಚಿವರು ಸಮ್ಮತಿಸಲಿಲ್ಲ.

ಕೆಡಿಪಿ ಸಭೆಗೆ ಪತ್ರಕರ್ತರಿಗೆ ಅವಕಾಶ ನೀಡದಂತೆ ಸರಕಾರದ ಸುತ್ತೋಲೆ ಇದ್ದು, ಸಭೆಯ ಬಳಿಕ ಸಚಿವರು ಪತ್ರಿಕಾಗೋಷ್ಠಿ ಕರೆದು ಸಭೆಯ ವಿವರ ನೀಡಲು ಅವಕಾಶವಿದೆ ಎಂದು ಸಿಇಓ ಪ್ರತೀಕ್ ಬಾಯಲ್ ಹೇಳಿದರು. ಹಾಗಿದ್ದರೆ ಉಳಿದ ಜಿಲ್ಲೆಗಳಿಗೆ ಈ ಸುತ್ತೋಲೆ ಇಲ್ಲವೇ, ಅಲ್ಲಿ ಹೇಗೆ ಬಿಡುತಿದ್ದಾರೆ. ಅಥವಾ ಉಡುಪಿ ಜಿಲ್ಲೆ ಕರ್ನಾಟಕ ದಲ್ಲಿ ಇಲ್ಲವೇ ಎಂದು ಪ್ರಶ್ನಿಸಿದಾಗಲೂ ನಿರ್ಧಾರವನ್ನು ಬದಲಿಸಲಿಲ್ಲ. ಮುದ್ರಣ ಮಾಧ್ಯಮದ ಪತ್ರಕರ್ತರೆಲ್ಲ ಸಭೆಯಿಂದ ಹೊರನಡಯಲೇ ಬೇಕಾಯಿತು.

ಸ್ವಲ್ಪವೇ ಹೊತ್ತಿನಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಪ್ರತಿಭಟನೆಯ ಬಳಿಕ ಕೆಡಿಪಿ ಸಭೆಗೆ ಬಂದಾಗ ಅವರೊಂದಿಗೆ ನುಗ್ಗಿದ ಟಿವಿ ಪತ್ರಕರ್ತರು ಮತ್ತೊಮ್ಮೆ ಬಿರುಸಿನ ವಾದ-ವಾಗ್ವಾದ ನಡೆಸಿದ್ದು, ಕೊನೆಗೆ ಇಂದಿನ ಮಟ್ಟಿಗೆ ಕೆಲವು ಪತ್ರಕರ್ತರಿಗೆ ವರದಿ ಮಾಡಲು ಅವಕಾಶ ದೊರೆಯಿತು. ಇದು ಮುಂದುವರಿಯುತ್ತದಾ ಅಥವಾ ಮುಂದಿನ ಕೆಡಿಪಿಗೆ ‘ಉಡುಪಿ ಪತ್ರಕರ್ತ’ ರಿಗೆ ನಿಷೇಧ ಮುಂದುವರಿಯುತ್ತದಾ ಕಾದು ನೋಡಬೇಕಿದೆ.





 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News