×
Ad

ರಸ್ತೆ ಬದಿಯಲ್ಲಿ ಕಸ ಎಸೆದ ಪ್ರವಾಸಿಗರಿಗೆ ದಂಡ ವಿಧಿಸಿದ ಸಾಣೂರು ಗ್ರಾಪಂ

Update: 2026-05-16 15:50 IST

ಕಾರ್ಕಳ: ಸಾಣೂರು ಗ್ರಾಮದ ಬಿಕರ್ಣಕಟ್ಟೆ ಸಾಣೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಊಟ ಮಾಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದವರಿಗೆ ಸಾಣೂರು ಗ್ರಾಪಂ ದಂಡ ವಿಧಿಸಿದ ಘಟನೆ ಶುಕ್ರವಾರ ನಡೆದಿದೆ.

ಶುಕ್ರವಾರ ಅಪರಾಹ್ನ 3 ಗಂಟೆಗೆ ಎರಡು ವಾಹನಗಳಲ್ಲಿ ಕೊಪ್ಪಳದಿಂದ ಬಂದಿದ್ದ ಪ್ರವಾಸಿಗರು ಊಟ ಮಾಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಎಸೆದಿದ್ದಾರೆ. ಈ ಬಗ್ಗೆ ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿದ ಸಾಣೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ತ್ಯಾಜ್ಯ ಎಸೆದವರಿಗೆ ದಂಡ ವಿಧಿಸಲು ಮುಂದಾಗಿದ್ದಾರೆ.

ರಸ್ತೆ ಬದಿಯಲ್ಲಿ ಪಂಚಾಯತ್ ನವರು ಬೋರ್ಡ್ ಹಾಕಿದ್ದೀರಾ.. ನಾವು ದಂಡ ಕೊಡುವುದಿಲ್ಲ ಎಂದು ಪ್ರವಾಸಿಗರು ದರ್ಪದಿಂದ ವರ್ತಿಸಿ ದಂಡ ಪಾವತಿಗೆ ನಿರಾಕರಿಸಿದ ಘಟನೆಯೂ ನಡೆಯಿತು. ಬಳಿಕ ಪಿಡಿಒ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಕಾರ್ಕಳ ನಗರ ಠಾಣೆಯ ಪೊಲೀಸರು ಆಗಮಿಸಿ ಪ್ರವಾಸಿಗರನ್ನು ಠಾಣೆಗೆ ಕರೆದೊಯ್ದರು.

ಸಾರ್ವಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆದು ಗಲೀಜು ಮಾಡಿರುವ ಪ್ರವಾಸಿಗರ ವಿರುದ್ಧ ಪಿಡಿಒ ಕಾರ್ಕಳ ನಗರ ಠಾಣೆಗೆ ದೂರು ಸಲ್ಲಿಸಿದರು.

ಪೊಲೀಸ್ ಠಾಣಾಧಿಕಾರಿ ಮುರಳಿಧರ ನಾಯಕ್ ರವರು, ಈ ಘಟನೆಗೆ ಗರಿಷ್ಠ 500 ರೂಪಾಯಿ ದಂಡ ವಿಧಿಸುವ ಅಧಿಕಾರ ಐಪಿಸಿ ಕಾಯ್ದೆಯಲ್ಲಿದೆ ಎಂದು ತಿಳಿಸಿ, ಪಂಚಾಯತ್ ಮೂಲಕ ದಂಡ ವಿಧಿಸಲು ಸೂಚಿಸಿದರು.

ಬಳಿಕ ಪಿಡಿಒ ಅವರು ಜಿಪಂ ಸಿಇಒ ಪ್ರತೀಕ್ ಬಾಯಲ್ ರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಜಿಪಂ ಸಿಇಒ, ಜಿಲ್ಲಾ ಎಸ್ಪಿಯವರ ಸೂಚನೆಯಂತೆ ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡಿದ ಪ್ರವಾಸಿಗರಿಗೆ ದಂಡ ವಿಧಿಸಲು ನಿರ್ಧರಿಸಲಾಯಿತು. ಬಳಿಕ ಉಡುಪಿ ಕಡೆಗೆ ಹೋಗುತ್ತಿದ್ದ ಕೊಪ್ಪಳದ ಪ್ರವಾಸಿಗರಿದ್ದ ವಾಹನವನ್ನು ರಾತ್ರಿ 8 ಗಂಟೆ ಸುಮಾರಿಗೆ ತಡೆದು ನಿಲ್ಲಿಸಿ, ಪಂಚಾಯತ್ ಕಾಯ್ದೆಯ ಅಧಿನಿಯಮದ 2000 ರೂ. ದಂಡ ವಿಧಿಸಲಾಯಿತು. ಪ್ರವಾಸಿಗರು ದಂಡ ಪಾವತಿ ತೆರಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News