ಉಡುಪಿಯಲ್ಲಿ ಗಾಳಿಮಳೆ: ಮನೆ ಕೊಟ್ಟಿಗೆಗಳಿಗೆ ಹಾನಿ
ಉಡುಪಿ, ಮೇ 19: ಉಡುಪಿ ಜಿಲ್ಲೆಯಾದ್ಯಂತ ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಮೋಡ ಕವಿದ ವಾತಾವರಣ ಇದ್ದು, ಈ ಮಧ್ಯೆ ಕೆಲವು ಕಡೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಕಾರ್ಕಳ ತಾಲೂಕಿನಲ್ಲಿ 7.6ಮಿ.ಮೀ., ಕುಂದಾಪುರ-5.2ಮಿ.ಮೀ., ಉಡುಪಿ-12.9 ಮಿ.ಮೀ., ಬೈಂದೂರು- 19.3ಮಿ.ಮೀ., ಬ್ರಹ್ಮಾವರ-13.5ಮಿ.ಮೀ., ಕಾಪು-9.0ಮಿ.ಮೀ., ಹೆಬ್ರಿ -11.0ಮಿ.ಮೀ. ಮತ್ತು ಜಿಲ್ಲೆಯಲ್ಲಿ ಸರಾಸರಿ 10.5ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.,
ಕಾಪು ತಾಲೂಕಿನ ಏಣಗುಡ್ಡೆ ಗ್ರಾಮದ ಪ್ರಭಾಕರ್ ಪಾಲನ್ ಅವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ ಯಾಗಿ ಸುಮಾರು 30,000ರೂ., ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ಸುರೇಶ ಅವರ ವಾಸ್ತವ್ಯದ ಮನೆ ಮಳೆಯಿಂದ ಭಾಗಶಃ ಹಾನಿಯಾಗಿದ್ದು, ಇದರಿಂದ ಸುಮಾರು 10,000ರೂ. ನಷ್ಟವಾಗಿದೆ.
ಅದೇ ರೀತಿ ಕುಂದಾಪುರ ತಾಲೂಕಿನ ಇಡೂರು ಕುಂಜ್ಙಾಡಿ ಗ್ರಾಮದ ಲಲಿತಾ ಅವರ ಜಾನುವಾರು ಕೊಟ್ಟಿಗೆ ಹಾನಿಯಾಗಿ ಸುಮಾರು 20,000 ರೂ. ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.