ಉಡುಪಿ ಜಿಲ್ಲಾ ಕಾರಾಗೃಹದ ಕೈದಿಗಳಿಗೆ ಉದ್ಯಮ ಶೀಲತಾ ಅಭಿವೃದ್ಧಿ ತರಬೇತಿ
ಬ್ರಹ್ಮಾವರ, ಮೇ 19: ಇಂದು ಸ್ವ- ಉದ್ಯೋಗದ ಮೂಲಕ ಸ್ವಾವಲಂಬಿ ಬದುಕನ್ನು ರೂಪಿಸಲು ರುಡ್‌ಸೆಟ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ಹಾಗಾಗಿ ಮುಂದಿನ ಬದುಕಿನಲ್ಲಿ ಕೌಶಲ್ಯದ ಅವಕಾಶಗಳನ್ನು ಜೀವನದಲ್ಲಿ ಬಳಸಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಗಂಗಣ್ಣವರ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಉಡುಪಿ, ಜಿಲ್ಲಾ ಕಾರಾಗೃಹ ಹಿರಿಯಡ್ಕ ಮತ್ತು ರುಡ್‌ಸೆಟ್ ಸಂಸ್ಥೆ, ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಆರು ದಿನಗಳ ಕಾಲ ನಡೆಯುವ ಉಡುಪಿ ಜಿಲ್ಲೆಯ ಕಾರಾಗೃಹದ ವಿಚಾರಣಾಧೀನ ಕೈದಿಗಳಿಗೆ ಉದ್ಯಮ ಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಂದು ಉದ್ದಿಮೆಯನ್ನು ಮಾಡಲು ಕೌಶಲ್ಯಗಳ ಕೊರತೆ ತುಂಬಾ ಇದೆ. ಆ ನಿಟ್ಟಿನಲ್ಲಿ ಸಿಸಿ ಟಿವಿ ರಿಪೇರಿ ಮತ್ತು ಸರ್ವೀಸ್ ಸಂಬಂಧಿಸಿದ ಕೌಶಲ್ಯಗಳ ತರಬೇತಿಗಳನ್ನು ನಿಮ್ಮ ಬಳಿಯೇ ಬಂದು ರುಡ್‌ಸೆಟ್ ಸಂಸ್ಥೆ ಕೊಡುತ್ತಿದೆ. ಹಾಗಾಗಿ ನಿಮ್ಮ ಬದುಕನ್ನು ಪರಿವರ್ತನೆ ಮಾಡಿಕೊಳ್ಳುವುದರ ಮೂಲಕ ತಾವುಗಳು ಇಲ್ಲಿಂದ ಬಿಡುಗಡೆಯಾಗಿ ಹೋದ ಮೇಲೆ ಸ್ವಾವಲಂಬಿ ಬದುಕನ್ನು ರೂಪಿಸಿಕೊಂಡರೆ ನೀವು ಯಶಸ್ವಿಯಾದಂತೆ ಎಂದು ಹೇಳಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಕಾರಾಗೃಹ ಅಧೀಕ್ಷಕ ಜಯಕುಮಾರ ಡಿ.ಚವ್ಹಾಣ್ ಮಾತನಾಡಿ, ಈ ಒಂದು ತರಬೇತಿಯಲ್ಲಿ ಸಿಗುವಂತಹ ಕೌಶಲ್ಯಗಳನ್ನು ಉಪಯೋಗಿಸಿಕೊಂಡು ಯಶಸ್ವಿ ಉದ್ಯಮಿಯಾಗಬೇಕು. ಆ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆಯ ಲೀಡ್ ಡಿಸ್ಟ್ರೀಕ್ಟ್ ಮ್ಯಾನೇಜರ್ ಹರೀಶ ಜಿ., ಉಡುಪಿ ಜಿಲ್ಲಾ ಕೌಶಲ್ಯಾಭಿ ವೃದ್ಧಿ ಅಧಿಕಾರಿ ಅರುಣ್ ಬಿ., ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಡಾ.ಬೊಮ್ಮಯ್ಯ ಎಂ. ಮಾತನಾಡಿದರು.
ಹಿರಿಯ ಉಪನ್ಯಾಸಕ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಕಾರಾಗೃಹದ ಸಿಬ್ಬಂದಿ ರೇಷ್ಮಾ ನಾಯಕ್ ಸ್ವಾಗತಿಸಿದರು. ಹಿರಿಯ ಕಛೇರಿ ಸಹಾಯಕ ರವಿ ವಂದಿಸಿದರು.