ಕೊಡವೂರು ಮಹಾರುದ್ರಯಾಗ ಪೂರ್ಣಾಹುತಿ: ಭಕ್ತಿಭಾವದ ಸಂಭ್ರಮ
ಉಡುಪಿ, ಮೇ 19: ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಆಯೋಜಿಸಲಾಗಿದ್ದ ಮಹಾರುದ್ರಯಾಗದ ಪೂರ್ಣಾಹುತಿ ಮಂಗಳವಾರ ಬೆಳಿಗ್ಗೆ ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ವೇದಮೂರ್ತಿ ಹಯವದನ ತಂತ್ರಿಗಳು ಪುತ್ತೂರು, ಮಧುಸೂದನ ತಂತ್ರಿಗಳು, ಸುಬ್ರಹ್ಮಣ್ಯ ಭಟ್ ಹಾಗೂ ವಾದಿ ರಾಜ ತಂತ್ರಿಗಳ ನೇತೃತ್ವದಲ್ಲಿ ಯಾಗದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಾಲಯದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಅಗ್ನಿಕುಂಡಗಳಲ್ಲಿ ಹೋಮ-ಹವನಗಳು ಜರುಗಿದರೆ, ಪುರೋಹಿತರಿಂದ ವೇದಮಂತ್ರ ಪಠಣ ನೆರವೇರಿತು. ಬಳಿಕ ಕಲಶಾಭಿಷೇಕ, ಪಲ್ಲಪೂಜೆ ಹಾಗೂ ಮಹಾಪೂಜೆ ನಡೆಯಿತು.
ಮಹಾರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ದಂಪತಿ ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ದಂಪತಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಅನ್ನಸಂತರ್ಪಣೆಗೆ ಭಕ್ತಸಾಗರ: ಮಹಾರುದ್ರಯಾಗದ ಕೊನೆಯ ದಿನ ಮಂಗಳವಾರ ದೇವಸ್ಥಾನ ಪರಿಸರ ಭಕ್ತಸಾಗರಕ್ಕೆ ಸಾಕ್ಷಿಯಾಯಿತು.
ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಭೋಜನ ಸ್ವೀಕರಿಸಿದರು. ಬೆಳಗ್ಗಿನಿಂದಲೇ ಅನ್ನದಾನ ಮಂಟಪದಲ್ಲಿ ಭಕ್ತರ ದಟ್ಟಣೆ ಕಂಡುಬಂದಿದ್ದು, ಸೇವಾ ಕಾರ್ಯಕರ್ತರು ಭಕ್ತರಿಗೆ ವ್ಯವಸ್ಥಿತವಾಗಿ ಊಟ ವಿತರಿಸಿದರು.