ಬಜೆ ಅಣೆಕಟ್ಟಿಗೆ ಒಳಹರಿವು ಆರಂಭ: ನೀರಿನ ಸಂಗ್ರಹದಲ್ಲಿ ಏರಿಕೆ
ಉಡುಪಿ, ಮೇ 30: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಶಿರೂರು ಅಣೆಕಟ್ಟು ತುಂಬಿ ಹರಿದು, ಉಡುಪಿ ನಗರಸಭೆಗೆ ಕುಡಿಯುವ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿಗೆ ಸ್ವರ್ಣ ನದಿಯ ಒಳಹರಿವು ಆರಂಭಗೊಂಡಿದೆ.
ಈಗಾಗಲೇ ಕಾರ್ಕಳದ ಮುಂಡ್ಲಿ ಡ್ಯಾಂ ತುಂಬಿ ಹರಿಯುತ್ತಿದ್ದು, ಕೆಲವು ದಿನಗಳ ಹಿಂದೆ ಶಿರೂರು ಅಣೆಕಟ್ಟಿನಲ್ಲಿಯೂ ನೀರು ತುಂಬಿದೆ. ಇಲ್ಲಿ ನೀರು ಹರಿಯುತ್ತಿರುವುದರಿಂದ ಬಜೆ ಅಣೆಕಟ್ಟಿಗೆ ಒಳ ಹರಿವು ಆರಂಭಗೊಂಡಿದೆ. ಬೆಳಗ್ಗೆ ಬಜೆ ಡ್ಯಾಂನಲ್ಲಿ 2.29 ಮೀಟರ್ ನೀರಿನ ಸಂಗ್ರಹ ಇದ್ದು, ಒಳ ಹರಿವಿನಿಂದ ನೀರಿನ ಸಂಗ್ರಹ ರಾತ್ರಿ ವೇಳೆ 2.35 ಮೀಟರ್‌ಗೆ ಏರಿಕೆ ಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಸದ್ಯ ಬಜೆ ಡ್ಯಾಂನಿಂದ ನಗರದ ಸುತ್ತಮುತ್ತಲಿನ ಪಂಚಾಯತ್‌ಗಳಿಗಾಗಿ ನೀರನ್ನು ಪಂಪ್ ಮಾಡ ಲಾಗುತ್ತಿದೆ. ಉಡುಪಿ ನಗರಕ್ಕೆ ಜೂ.30ರವರೆಗೆ ವಾರಾಹಿ ಕಾಲುವೆಯಿಂದ ನೀರು ಪೂರೈಕೆಗೆ ಅನುಮತಿ ನೀಡಲಾಗಿದೆ.
ಶಾಸಕರ ಭೇಟಿ: ಬಜೆ ಅಣೆಕಟ್ಟು ಪ್ರದೇಶಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಣೆಕಟ್ಟಿನ ನೀರಿನ ಪ್ರಸ್ತುತ ನೀರಿನ ಲಭ್ಯತೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈಗಾಗಲೇ ಬಜೆ ಅಣೆಕಟ್ಟಿಗೆ ನೀರಿನ ಒಳಹರಿವು ಆರಂಭಗೊಂಡಿದೆ. ಇದರಿಂದ ನಗರ ಭಾಗಕ್ಕೆ ನಿರಂತರ ನೀರು ಸರಬರಾಜಿಗೆ ಅಗತ್ಯ ಪ್ರಮಾಣದ ನೀರು ಲಭ್ಯವಾಗಿದೆ ಎಂದು ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.