ಲೋಕಾಯುಕ್ತ ಪೊಲೀಸರಿಂದ ಮುಂದುವರೆದ ಪರಿಶೀಲನೆ: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 72 ಸಂಶಯಾಸ್ಪದ ಕಡತಗಳು ಪತ್ತೆ
ಉಡುಪಿ, ಮೇ 30: ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಡತ ಪರಿಶೀಲನಾ ಕಾರ್ಯವನ್ನು ಉಡುಪಿ ಲೋಕಾಯುಕ್ತ ಪೊಲೀಸರು ಶನಿವಾರವೂ ಮುಂದುವರೆಸಿದ್ದಾರೆ.
ಮಂಗಳೂರು ಲೋಕಾಯುಕ್ತ ಎಸ್ಪಿ ದಿನೇಶ್ ಕುಮಾರ್ ಮಾರ್ಗದರ್ಶನ ದಲ್ಲಿ ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ಬೆಳಗ್ಗೆ 10.30ರಿಂದ ಸಂಜೆ 6ಗಂಟೆಯವರೆಗೂ ಪ್ರಾಧಿಕಾರದ ಕಚೇರಿಯಲ್ಲಿನ ಕಡತಗಳ ಪರಿಶೀಲನೆ ನಡೆಸಲಾಯಿತು.
ಕಚೇರಿಯಲ್ಲಿ ಕಳೆದ ಒಂದು ವರ್ಷ, ಆರು ತಿಂಗಳುಗಳಿಂದ ವಿಲೇವಾರಿ ಯಾಗದೆ ಬಾಕಿ ಉಳಿದುಕೊಂಡಿರುವ ಹಳೆಯ ಸುಮಾರು 200 ಕಡತಗಳು ಪತ್ತೆಯಾಗಿವೆ. ಇದರಲ್ಲಿ ಕಾನೂನು ಉಲ್ಲಂಘನೆಯಾಗಿರುವ ಸಂಶಯ ಇರು ವಂತಹ 72 ಕಡತಗಳು ಕಂಡುಬಂದಿವೆ.
ಈ ಸಂಬಂಧ ವರದಿಯನ್ನು ತಯಾರಿಸಿ ಕರ್ನಾಟಕ ಲೋಕಾಯುಕ್ತಕ್ಕೆ ಕಳುಹಿಸ ಲಾಗುತ್ತದೆ. ಮುಂದೆ ಕಡತ ವಿಲೇವಾರಿಗೆ ವಿಳಂಬದ ಕುರಿತು ವಿಚಾರಣೆ ಗಳು ನಡೆಯುತ್ತವೆ ಎಂದು ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್ ತಿಳಿಸಿದ್ದಾರೆ.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಉಡುಪಿ ಲೋಕಾಯುಕ್ತರು ಪ್ರಕರಣ ದಾಖಲಿಸಿಕೊಂಡು ಪ್ರಾಧಿಕಾರದ ಕಚೇರಿಗೆ ಶುಕ್ರವಾರ ಮಧ್ಯಾಹ್ನ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.