×
Ad

ಯಕ್ಷಗಾನ ಸಂಸ್ಕೃತಿ ಉಳಿಸುವ ಜನಪ್ರಿಯ ಕಲಾಪ್ರಕಾರ: ಶಿರೂರು ಶ್ರೀ

ಯಕ್ಷಗಾನ ಕಲಾವಿದರ 26ನೇ ಸಮಾವೇಶ

Update: 2026-05-31 20:31 IST

ಉಡುಪಿ, ಮೇ 31: ಉಡುಪಿಯ ಯಕ್ಷಗಾನ ಕಲಾರಂಗದ ವತಿಯಿಂದ ವೃತ್ತಿನಿರತ ಯಕ್ಷಗಾನ ಕಲಾವಿದರ 26ನೆ ಸಮಾವೇಶವನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ಆಯೋಜಿಸಲಾಗಿತ್ತು.

ಅಪರಾಹ್ನ ನಡೆದ ಸಮಾರಂಭದಲ್ಲಿ ಪರ್ಯಾಯ ಶೀರೂರು ಮಠಾಧೀಶ ಶ್ರೀವೇದವರ್ಧನತೀರ್ಥ ಸ್ವಾಮೀಜಿ ಮಾತನಾಡಿ, ಯಕ್ಷಗಾನವು ನಮ್ಮ ಸಂಸ್ಕೃತಿಯನ್ನು, ಪುರಾಣ ಕಥೆಯನ್ನು ಉಳಿಸಿ, ಬೆಳೆಸಿಕೊಂಡು ಬಂದಿರುವ ಅತ್ಯುತ್ತಮ ಜನಪ್ರಿಯ ಕಲಾಪ್ರಕಾರವಾಗಿದೆ. ಬೇರೆ ಯಾವುದೇ ಕಲೆಯ ಪ್ರಸ್ತುತಿಯ ಸಂದರ್ಭದಲ್ಲೂ ಯಕ್ಷಗಾನ ಪ್ರದರ್ಶನದಲ್ಲಿ ಸೇರುವಷ್ಟು ಜನ ಸೇರದಿರುವುದೆ ಇದರ ಮಹತ್ತಿಕೆಯನ್ನು ತಿಳಿಸುತ್ತದೆ ಎಂದು ಹೇಳಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಶುಭಾಶಂಸನಗೈದರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ ಮಾತನಾಡಿದರು. ಯಕ್ಷಗಾನ ಪೋಷಕ ಪಣಂಬೂರು ವಾಸುದೇವ ಐತಾಳ್, ಉದ್ಯಮಿಗಳಾದ ಪಿ.ಪುರುಷೋತ್ತಮ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಸಿಎ ಗಣೇಶ್ ಕಾಂಚನ್, ಹರಿಯಪ್ಪ ಕೋಟ್ಯಾನ್, ಆನಂದ ಪಿ.ಸುವರ್ಣ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಟೀಲು ಮೇಳದ ಕಲಾವಿದ ಶ್ರುತಕೀರ್ತಿ ರಾಜ್ ರಚಿಸಿದ ಯಕ್ಷಗಾನ ಶ್ರೀರಾಮ ಸೂಕ್ತ’ ಪುಸ್ತಕ ವನ್ನು ಬಿಡುಗಡೆ ಮಾಡಲಾಯಿತು. ಕೊಂಡದಕುಳಿ ರಾಮಚಂದ್ರ ಹೆಗಡೆಯವರು ತಮ್ಮ ಪೂರ್ಣಚಂದ್ರ ಕಲಾ ಪ್ರತಿಷ್ಠಾನದ ವತಿಯಿಂದ 25,000ರೂ. ನಗದು ಪುರಸ್ಕಾರದ ‘ಕೊಂಡದಕುಳಿ ರಾಮ ಹೆಗಡೆ’ ಪ್ರಶಸ್ತಿ ಮತ್ತು 1,00,000ರೂ. ನಗದು ಪುರಸ್ಕಾರದ ಉತ್ತರ ಕನ್ನಡ ಯಕ್ಷಶ್ರೀ’ ಪ್ರಶಸ್ತಿಯನ್ನು ಯಕ್ಷಗಾನ ಕಲಾರಂಗಕ್ಕೆ ಪ್ರದಾನ ಮಾಡಿದರು.

ವೇದಿಕೆಯಲ್ಲಿ ಕಲಾವಿದ ಸತೀಶ್ ಪೂಜಾರಿ ನೈನಾಡು ಅವರಿಗೆ 25,000ರೂ. ವೈದ್ಯಕೀಯ ನೆರವು ನೀಡಲಾ ಯಿತು. 20 ಜನ ಕಲಾವಿದರಿಗೆ ತಲಾ 20,000ರೂ. ಗೃಹನಿರ್ಮಾಣದ ಉಡುಗೊರೆ ನೀಡಿ ಅಭಿನಂದಿಸ ಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ವಿವಿಧ ಮೇಳದ 800ಕ್ಕೂ ಅಧಿಕ ಕಲಾವಿದರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಸಮಾವೇಶ ಉದ್ಘಾಟನೆ: ಪೂರ್ವಾಹ್ನ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ಡಾ.ಶೈಲಜಾ ಭಟ್ ಮತ್ತು ಡಾ. ರಾಜೇಶ್ ನಾವಡರ ಮಾರ್ಗದರ್ಶನದಲ್ಲಿ ಜರಗಿತು.

ಮಠದ ಪ್ರಬಂಧಕ ವಾಸುದೇವ ಆಚಾರ್ಯ ಸಮಾವೇಶವನ್ನು ಉದ್ಘಾಟಿಸಿದರು. ಸಂಸ್ಥೆಯ ಉಪಾಧ್ಯಕ್ಷರುಗಳಾದ ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ, ಕೋಶಾಧಿಕಾರಿ ಪ್ರೊ.ಕೆ.ಸದಾಶಿವ ರಾವ್ ಹಾಗೂ ಹಿರಿಯ ಕಲಾವಿದರಾದ ಆರ್ಗೋಡು ಮೋಹನದಾಸ ಶೆಣೈ, ರೆಂಜಾಳ ರಾಮಕೃಷ್ಣ ರಾವ್, ವಿ.ಗಣಪತಿ ಭಟ್ ಉಪಸ್ಥಿತರಿದ್ದರು.

ಬಳಿಕ ಕಲಾ ಮಂಡಲಮ್ ನಂದಕುಮಾರ್ ತಂಡದವರಿಂದ ಕಲ್ಯಾಣ ಸೌಗಂಧಿಕಂ ತುಳ್ಳಲ್ ತ್ರಯಮ್ ಪ್ರದರ್ಶನ ಜರಗಿತು. ನಂತರ ಕಲೆ-ಕಲಾವಿದ-ಪ್ರೇಕ್ಷಕ: ಸಮನ್ವಯ ಎಂಬ ವಿಷಯದ ಕುರಿತು ಕೊಂಡದಕುಳಿ ರಾಮಚಂದ್ರ ಹೆಗಡೆ, ವಾಸುದೇವ ರಂಗಾ ಭಟ್, ನೀಲ್ಕೋಡು ಶಂಕರ ಹೆಗಡೆ, ಪ್ರಜ್ವಲ್ ಗುರುವಾಯನಕೆರೆ, ಮಹೇಶ್ ಸಾಣೂರು, ವಾದಿರಾಜ ಕಲ್ಲುರಾಯ, ನಂದೀಶ್ ಶೆಟ್ಟಿ ಬಿಲ್ಲಾಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಪ್ರಸಂಗಕರ್ತ ಪವನ್ ಕಿರಣ್ ಕೆ. ಸಮನ್ವಯಕಾರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News