ವಿಶ್ವಶಾಂತಿಗಾಗಿ ರಾಮಾಂಜಿ ಏಕಾಂಗಿ ಮೌನ ಪ್ರತಿಭಟನೆ
ಉಡುಪಿ: ಜಾಗತಿಕ ಯುದ್ಧದ ಮೂಲಕ ಜನಾಂಗದ ಮೇಲೆ ನಡೆಯುತ್ತಿರುವ ಹಿಂಸೆ ಮತ್ತು ಪ್ರಕೃತಿಯ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಮಕ್ಕಳ ಹಕ್ಕುಗಳ ಹೋರಾಟಗಾರ, ರಂಗಕರ್ಮಿ, ಕನ್ನಡ ಉಪನ್ಯಾಸಕ ರಾಮಾಂಜಿ ನಮ್ಮ ಭೂಮಿ ಶನಿವಾರ ಮಣಿಪಾಲ ಟೈಗರ್ ಸರ್ಕಲ್ ಬಳಿ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಮಾಂಜಿ, ಕಳೆದ ಐದು ತಿಂಗಳಿನಿಂದ ನಡೆಯುತ್ತಿರುವ ಜಾಗತಿಕ ಯುದ್ಧ ಸಂಬಂಧಿ ಘಟನೆಗಳನ್ನು ನೋಡಿ ಮನನೊಂದು ನೈತಿಕ ಪ್ರತಿಭಟನೆ ಮಾಡುತ್ತಿದ್ದೇನೆ. ಈ ಕುರಿತು ಈಗಾಗಲೇ ಉಡುಪಿ, ಕುಂದಾಪುರ, ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದು, ಇದೀಗ ನಾಲ್ಕನೇ ಬಾರಿಗೆ ಪ್ರತಿಭಟನಾ ಚಳುವಳಿ ನಡೆಸುತ್ತಿದ್ದೇನೆ. ಜಾಗತಿಕ ಮಟ್ಟದ ಸಹಬಾಳ್ವೆ, ಶಾಂತಿ, ಸೌಹಾರ್ದತೆ, ಪರಸ್ಪರ ಹೊಂದಾಣಿಕೆ, ಮಾನವ ಪ್ರೀತಿ, ಪರಿಸರ ಕಾಳಜಿ, ನಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮ ವಾತಾವರಣ ಸೃಷ್ಟಿಯಾಗಬೇಕು ಎಂದರು.
ಬೆಳಿಗ್ಗೆ 8:30ರಿಂದ ಸಂಜೆ 6:30ವರೆಗೆ ನಡೆದ ಪ್ರತಿಭಟನೆಗೆ ಹಲವು ಮಂದಿ ಬೆಂಬಲ ಸೂಚಿಸಿದ್ದು, ಸ್ಥಳಕ್ಕೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್, ರಂಗಕರ್ಮಿ ರವಿರಾಜ್ ಎಚ್.ಪಿ., ಕವಿ ಅಂಶುಮಾಲಿ ಮೊದಲಾದವರು ಆಗಮಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.