×
Ad

ದೇವರ ಪ್ರೀತಿಯಲ್ಲಿ ಯಾವುದೇ ಸ್ವಾರ್ಥವಿಲ್ಲ: ಬಿಷಪ್ ಲೆಸ್ಲಿ ಕ್ಲಿಫರ್ಡ್

ಕೆರೆಕಟ್ಟೆ ಪುಣ್ಯಕ್ಷೇತ್ರ ವಾರ್ಷಿಕ ಮಹೋತ್ಸವ-ನಿರ್ಗತಿಕರ ಆಶ್ರಮ ಉದ್ಘಾಟನೆ

Update: 2026-06-13 19:34 IST

ಕುಂದಾಪುರ, ಜೂ.13: ದೇವರ ಪ್ರೀತಿಯಲ್ಲಿ ಯಾವುದೇ ಸ್ವಾರ್ಥ, ಅಪೇಕ್ಷೆ ಅಥವಾ ಷರತ್ತುಗಳಿರುವುದಿಲ್ಲ. ದೇವರ ಪ್ರೀತಿಯನ್ನು ಅನುಭವಿಸಲು ನಾವು ಯಾವುದೇ ದೊಡ್ಡ ಸಾಧನೆಗಳನ್ನು ಮಾಡಬೇಕಾಗಿಲ್ಲ. ಬದಲಾಗಿ, ಶುದ್ಧವಾದ ಮನಸ್ಸು ಮತ್ತು ಭಕ್ತಿಯಿಂದ ದೇವರನ್ನು ನೆನೆದರೆ ಸಾಕು. ಆತನ ಪ್ರೀತಿಯು ನಮಗೆ ಕಷ್ಟದ ಸಮಯದಲ್ಲಿ ಧೈರ್ಯ ವನ್ನು, ನೋವಿನಲ್ಲಿ ಸಾಂತ್ವನವನ್ನು ನೀಡುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಹೇಳಿದ್ದಾರೆ.

ಸಿದ್ದಾಪುರ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಹಾಗೂ ನಿರ್ಗತಿಕರಿಗಾಗಿ ನಿರ್ಮಿಸಿದ ನೂತನ ಆಶ್ರಮವನ್ನು ಶನಿವಾರ ಉದ್ಘಾಟಿಸಿ ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿ ಅವರು ಮಾತನಾಡುತಿದ್ದರು.

ಮಾನವರ ಪ್ರೀತಿಯು ಕೆಲವೊಮ್ಮೆ ಕೊನೆಗೊಳ್ಳಬಹುದು, ಆದರೆ ದೈವಿಕ ಪ್ರೀತಿಯು ಎಂದಿಗೂ ಕೊನೆಯಾಗು ವುದಿಲ್ಲ. ನಾವು ತಪ್ಪುಗಳನ್ನು ಮಾಡಿ ದಾಗಲೂ ದೇವರು ನಮ್ಮನ್ನು ಕ್ಷಮಿಸಿ, ಸರಿ ದಾರಿಯಲ್ಲಿ ನಡೆಸುತ್ತಾನೆ. ನಿಸ್ವಾರ್ಥವಾಗಿ ಹಾಗೂ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಸಹಾಯ ಮಾಡಿದಾಗ, ಅದರಿಂದ ಬರುವ ಸತ್ಫಲವು ನಿಮ್ಮ ಜೀವನವನ್ನು ರಕ್ಷಿಸುತ್ತದೆ ಮತ್ತು ಒಳಿತನ್ನು ಮಾಡುತ್ತದೆ ಎಂದರು.

ದೇವರ ಹೆಸರಿನಲ್ಲಿ ನಿಷ್ಕಲ್ಮಶ ಮನಸ್ಸಿನಿಂದ ಬಡವರಿಗೆ ಮತ್ತು ನಿರ್ಗತಿಕರಿಗೆ ಮಾಡುವ ಸೇವೆಗೆ ಪ್ರತಿಫಲ ಖಂಡಿತ ವಾಗಿ ಸಿಗುತ್ತದೆ. ನಿಸ್ವಾರ್ಥ ಸೇವೆಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮನುಷ್ಯನಿಗೆ ಒಳ್ಳೆಯದನ್ನು ಮಾಡುತ್ತದೆ ಎಂದು ಅವರು ತಿಳಿಸಿದರು.

ಮಹಾಪೋಷಕ ಫಿಲಿಪ್ ಡಿಕೋಸ್ತಾ ಬಸ್ರೂರು ನೂತನ ಆಶ್ರಮವನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿ ಸಿದರು. ಆಶ್ರಮದ ನಿರ್ಮಾಣಕ್ಕೆ ಧನಸಹಾಯ ನೀಡಿದ ದಾನಿಗಳನ್ನು ಮತ್ತು ಮಹೋತ್ಸವಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.

ಪುಣ್ಯಕ್ಷೇತ್ರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ನೂತನ ಧರ್ಮಾಧ್ಯಕ್ಷರನ್ನು ಹಾಗೂ ಶ್ರೇಷ್ಠಗುರುಗಳನ್ನು ಹಾಗೂ ಕ್ಷೇತ್ರದ ರೆಕ್ಟರ್, ಆಶ್ರಮದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮ ಭಗಿನಿಯರ ಮುಖ್ಯಸ್ಥೆಯನ್ನು ಗೌರವಿಸಲಾಯಿತು.

ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಝೇವಿಯರ್ ಲೂವಿಸ್, ಕುಲಪತಿ ವಂ.ಸ್ಟೀವನ್ ಡಿಸೋಜ, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ.ಪಾವ್ಲ್ ರೇಗೊ, ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮ ಭಗಿನಿಯರ ಮುಖ್ಯಸ್ಥೆ ಸಿ.ಎಲ್ಸಿ ಉಡುಪಿ ಹಾಗೂ ಮಂಗಳೂರು ಧರ್ಮಪ್ರಾಂತ್ಯ ದಿಂದ ಆಗಮಿಸಿದ ಧರ್ಮಗುರುಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

ಪುಣ್ಯಕ್ಷೇತ್ರದ ರೆಕ್ಟರ್ ವಂ.ಸುನಿಲ್ ವೇಗಸ್ ವಂದಿಸಿದರು. ವಂ.ರೋಯ್ ಲೋಬೊ ಹಾಗೂ ವಂ.ವಿಲ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News